ಕಳೆದ ವರ್ಷ ಗಾಯದ ಸಮಸ್ಯೆಯಿಂದ ಬೆನ್ನುಬೆನ್ನಿಗೆ ಭಾರೀ ನಷ್ಟಗಳನ್ನು ಮೈಮೇಲೆ ಎಳೆದುಕೊಂಡಿದ್ದ ಸಾನಿಯಾ ಮಿರ್ಜಾ ಈ ವರ್ಷ ಉತ್ತಮ ಪ್ರದರ್ಶನದ ಮೂಲಕ ವಿಶ್ವ ರ‌್ಯಾಂಕಿಂಗ್‌ನಲ್ಲಿ ಮೇಲೇರುವ ಭರವಸೆ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷಾರಂಭವನ್ನು ಉತ್ತಮವಾಗಿಯೇ ಆರಂಭಿಸಿದ್ದ ಸಾನಿಯಾ, ಹಾಬರ್ಟ್‌ನಲ್ಲಿ ಕ್ವಾರ್ಟರ್ ಫೈನಲ್ ಹಾಗೂ ಆಸ್ಟ್ರೇಲಿಯನ್ ಓಪನ್‌ನಲ್ಲಿ ಮೂರನೇ ಸುತ್ತು ಮುಗಿಸಿದ್ದರು. ಆದರೆ ಮಣಿಕಟ್ಟು ನೋವಿನಿಂದ ಬಳಲಿದ್ದ ಆಕೆ ಏಪ್ರಿಲ್‌ನಲ್ಲಿ ಫ್ರೆಂಚ್ ಓಪನ್ ಕಳೆದುಕೊಂಡಿದ್ದರು. ನಂತರ ಸಮಸ್ಯೆ ಬಹುದೊಡ್ಡದಾಗಿ ಕಾಡಿದ್ದು ಆಗಸ್ಟ್‌ನಲ್ಲಿ. ಈ ಕಾರಣದಿಂದ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲಾಗದೆ ಅರ್ಧದಲ್ಲೇ ಹೊರಬರುವಂತಾಗಿತ್ತು. ಇದೇ ಕಾರಣದಿಂದ ಅಮೆರಿಕನ್ ಓಪನ್ ಕೂಡ ಅವ ಕೈ ತಪ್ಪಿ ಹೋಗಿತ್ತು.
"ಮತ್ತೆ ಗಾಯಾಳುವಾಗದಿರಲಿ ಎಂದು ಬಯಸುತ್ತಿದ್ದೇನೆ. ಇದೇ ನನ್ನ ಈ ವರ್ಷದ ಮಹತ್ತರವಾದ ಬಯಕೆ. ನನ್ನದು ತಾಳ್ಮೆರಹಿತ ವ್ಯಕ್ತಿತ್ವವಾದ್ದರಿಂದ ತಾಳ್ಮೆಯನ್ನು ರೂಢಿಸಿಕೊಳ್ಳಬೇಕಾಗಿದೆ. ಆದರೆ ಮಣಿಕಟ್ಟು ನೋವಿನಿಂದ ಬಳಲಿದ ನಂತರ ಎಲ್ಲವೂ ಬದಲಾಯಿತು. ಈಗ ತಾಳ್ಮೆಯನ್ನು ಸಾಕಷ್ಟು ತಿಳಿದು ಕೊಂಡಿದ್ದೇನೆ" ಎಂದು ಸಾನಿಯಾ ಮಿರ್ಜಾ ಹೇಳಿದ್ದಾರೆ.
22ರ ಹರೆಯದ ಈ ಆಟಗಾರ್ತಿ ಮುಂದಿನ ವಾರ ಹಾಂಕಾಂಗ್ ಟೂರ್ನಮೆಂಟಿನಲ್ಲಿ ಆಡಲಿದ್ದಾರೆ. ಇದು ಜನವರಿ 19ರಿಂದ ಆರಂಭವಾಗುವ ಆಸ್ಟ್ರೇಲಿಯನ್ ಓಪನ್‌ಗೂ ವೇದಿಕೆಯಾಗಲಿದೆ. ಪ್ರಸಕ್ತ ಟೆನಿಸ್ ರ‌್ಯಾಂಕಿಂಗ್‌ನಲ್ಲಿ ಕುಸಿತ ಕಂಡಿರುವ ಈಕೆ ಮುಂದೆ ಚೇತರಿಕೆ ಕಾಣುವ ಭರವಸೆ ನೀಡಿದ್ದಾರೆ. ಈ ವರ್ಷವಿಡೀ ಗಾಯಾಳುವಾಗದೆ ಉತ್ತಮ ಆಟ ನೀಡುವುದಾಗಿ ಹೇಳಿಕೊಂಡಿದ್ದಾರೆ.
|