ನನ್ನ ಮತ್ತು ಮಹೇಶ್ ಭೂಪತಿಯವರ ನಿವೃತ್ತಿಯ ನಂತರವೂ ಭಾರತೀಯ ಟೆನಿಸ್‌ನ್ನು ಎತ್ತರಕ್ಕೆ ಕೊಂಡೊಯ್ಯುವ ಸಾಮರ್ಥ್ಯ ಸೋಮದೇವ್ ದೇವರ್‌ಮನ್‌ಗಿದೆ ಎಂದು ಲಿಯಾಂಡರ್ ಪೇಸ್ ಅಭಿಪ್ರಾಯಪಟ್ಟಿದ್ದಾರೆ.
ಭೂಪತಿ ಮತ್ತು ನಿಮ್ಮ ನಿವೃತ್ತಿಯ ನಂತರ ಭಾರತದ ಟೆನಿಸ್ ಹೇಗೆ ಸಾಗಬಹುದು ಎಂಬ ಪ್ರಶ್ನೆಗೆ, "ಸೋಮದೇವ್ ಪ್ರತಿಭಾವಂತ ಆಟಗಾರನೆಂಬುದರಲ್ಲಿ ಯಾವುದೇ ಸಂಶಯವಿಲ್ಲ. ಅವರು ಕಠಿಣ ಶ್ರಮವಹಿಸುತ್ತಾರೆ. ಅವರ ಸುತ್ತ ಉತ್ತಮರಿರುವುದು ಮತ್ತೊಂದು ಪ್ರಮುಖ ವಿಚಾರ. ಭಾರತೀಯ ಟೆನಿಸ್‌ನ್ನು ಮುಂಚೂಣಿಯತ್ತ ಮುನ್ನಡೆಸಲು ಸೂಕ್ತ ವ್ಯಕ್ತಿ ಸೋಮದೇವ್" ಎಂದು ಉತ್ತರಿಸಿದರು.
ಸಿಂಗಲ್ಸ್ ವಿಭಾಗದಲ್ಲಿ ಸೋಮದೇವ್ 2008ರಲ್ಲಿ ನಂಬರ್ ವನ್ ಸ್ಥಾನಕ್ಕೇರಿದ್ದರು. ಅತ್ಯುತ್ತಮ ಪ್ರತಿಭಾವಂತ ಆಟಗಾರನಾಗಿರುವ ಸೋಮದೇವ್ ಇತ್ತೀಚೆಗಷ್ಟೇ ಖ್ಯಾತ ಟೆನಿಸ್ ಆಟಗಾರ ಆಂಡಿ ರಾಡಿಕ್ ಜತೆ ತರಬೇತಿ ಮುಗಿಸಿ ವಾಪಸಾಗಿದ್ದರು.
ನಂತರ ತನ್ನ ಜತೆಗಾರನ ಬಗ್ಗೆ ಮಾತನಾಡಿದ ಪೇಸ್, "ನನ್ನ ಮತ್ತು ಲುಕಾಸ್ ದ್ಲೊಹಿಯವರ ಹೊಂದಾಣಿಕೆ ಉತ್ತಮವಾಗಿದೆ. ಹಾಗಾಗಿ ನಾವು ಹೆಚ್ಚಿನ ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದೇವೆ. ದ್ಲೋಹಿ ಸಿಂಗಲ್ಸ್ ವಿಭಾಗದಲ್ಲಿ ಹೆಚ್ಚಿನ ಗಮನ ಕೊಡುತ್ತಿದ್ದಾರೆ" ಎಂದು ಹೇಳಿದರು.
|