ನವೆಂಬರ್‌ನಲ್ಲಿನ ಮುಂಬೈ ಉಗ್ರರ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನಗಳು ಪರಸ್ಪರ ಪ್ರವಾಸಗಳನ್ನು ರದ್ದುಪಡಿಸಿದ್ದರೂ ತಟಸ್ಥ ಸ್ಥಳಗಳಲ್ಲಿ ನಡೆಯುವ ಪಂದ್ಯಗಳಿಗೇನೂ ಧಕ್ಕೆಯಾಗಿಲ್ಲ. ಇದೀಗ ಇಂಗ್ಲೆಂಡಿನಲ್ಲಿ ನಡೆಯುತ್ತಿರುವ ಸ್ಕ್ವಾಷ್ ಪಂದ್ಯವೊಂದರಲ್ಲಿ ಪಾಕಿಸ್ತಾನದ ತನ್ನ ಎದುರಾಳಿಯನ್ನು ಮಣಿಸಿರುವ ಭಾರತದ ದೀಪಿಕಾ ಪಲ್ಲಿಕಲ್ ಮುಂದಿನ ಹಂತ ಪ್ರವೇಶಿಸಿದ್ದಾರೆ.
ಭಾರತದ ಅಗ್ರ ಮಹಿಳಾ ಆಟಗಾರ್ತಿ ದೀಪಿಕಾ ಪಲ್ಲಿಕಲ್ ಪಾಕಿಸ್ತಾನದ ಮಹಿಳಾ ಚಾಂಪಿಯನ್ ಮರಿಯಾ ತೂರ್ ಪಕಯೇರವರನ್ನು ಬ್ರಿಟೀಷ್ ಜೂನಿಯರ್ ಓಪನ್ ಸ್ಕ್ವಾಷ್ ಟೂರ್ನಮೆಂಟಿನ 19ರೊಳಗಿನ ಮಹಿಳೆಯರ ವಿಭಾಗದ ಮೂರನೇ ಸುತ್ತಿನಲ್ಲಿ ಮಣಿಸಿದ್ದಾರೆ.
ಪಲ್ಲಿಕಲ್ 2008ರಲ್ಲಿ 17ರೊಳಗಿನ ವಿಭಾಗದಲ್ಲೂ ಬ್ರಿಟೀಷ್ ಚಾಂಪಿಯನ್ ಆಗಿದ್ದರು. ಶನಿವಾರ ನಡೆದ ಬ್ರಿಟೀಷ್ ಜೂನಿಯರ್ ಓಪನ್‌ನಲ್ಲಿ ಎದುರಾಳಿಯನ್ನು 7-11, 11-9, 9-11, 11-5, 11-6ರ ಅಂತರದಿಂದ ಮಣಿಸಿ ನಾಲ್ಕನೇ ಸುತ್ತು ಪ್ರವೇಶಿಸಿದ್ದಾರೆ.
ಪ್ರಸಕ್ತ ವಿಶ್ವ ಸ್ಕ್ವಾಷ್ ರ‌್ಯಾಂಕಿಂಗ್‌ನಲ್ಲಿ 51ನೇ ಸ್ಥಾನದಲ್ಲಿರುವ ಪಲ್ಲಿಕಲ್ ಪ್ರಶಸ್ತಿ ಪಡೆಯುವವರ ಸಾಲಿನಲ್ಲಿ ಗುರುತಿಸಿಕೊಂಡಿದ್ದು, ಮುಂದಿನ ಹಂತಗಳ ಪ್ರದರ್ಶನ ಎಲ್ಲವನ್ನೂ ಆಧರಿಸಿದೆ.
ಪೇಷಾವರ ಮೂಲದ ಮರಿಯಾ ವಿಶ್ವ ಸ್ಕ್ವಾಷ್ ರ‌್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನದಲ್ಲಿರದಿದ್ದರೂ ಪಾಕಿಸ್ತಾನದಲ್ಲಿ ಹಿರಿಯರ ಮತ್ತು ಕಿರಿಯರ ವಿಭಾಗದಲ್ಲಿನ ಶ್ರೇಷ್ಠ ಆಟಗಾರ್ತಿ ಎಂದು ಇತ್ತೀಚಿನ ವರ್ಷಗಳಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ.
|