ಇಲ್ಲಿ ನಡೆಯುತ್ತಿರುವ ಬ್ರಿಟೀಷ್ ಓಪನ್ ಜೂನಿಯರ್ ಸ್ಕ್ವಾಷ್ ಚಾಂಪಿಯನ್‌ಶಿಪ್ ಟೂರ್ನಮೆಂಟಿನಲ್ಲಿ ಭಾರತದ ಮೂವರು ಸ್ಕ್ವಾಷ್ ಆಟಗಾರರಾದ ದೀಪಿಕಾ ಪಲ್ಲಿಕಲ್, ಕುಶ್ ಕುಮಾರ್ ಮತ್ತು ಮಹೇಶ್ ಮಂಗಾಂವ್ಕರ್ ಪ್ರತ್ಯೇಕ ವಿಭಾಗಗಳಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಕಳೆದ ವಾರ ಸ್ಕಾಟಿಶ್ ಜೂನಿಯರ್ ಗೆದ್ದುಕೊಂಡಿದ್ದ ಕುಶ್ ಕುಮಾರ್ ಅಗ್ರ ಶ್ರೇಯಾಂಕದ ಇಸ್ರೇಲ್‌ನ ಡೇನಿಯಲ್ ಪೊಲಿಸ್ಚುಂಕ್‌ರವರನ್ನು 8-11, 8-11, 11-5, 11-5, 11-9ರಿಂದ ಮಣಿಸಿ ಸೆಮಿಫೈನಲ್ ಪ್ರವೇಶ ಪಡೆದಿದ್ದಾರೆ. 13ರೊಳಗಿನವರ ವಿಭಾಗದಲ್ಲಿ ಭಾನುವಾರ ರಾತ್ರಿ ಈ ಹೋರಾಟ ನಡೆಯಿತು.
19ರೊಳಗಿನ ವನಿತೆಯರ ವಿಭಾಗದಲ್ಲಿ ದೀಪಿಕಾ ಪಲ್ಲಿಕಲ್ ಸೆಮಿಫೈನಲ್ ಪ್ರವೇಶ ಪಡೆದಿದ್ದಾರೆ. ಇಂಗ್ಲೆಂಡಿನ ಕಿಂಬರ್ಲಿ ಹೇಯವರನ್ನು ಭಾರತದ ದೀಪಿಕಾ ಪಲ್ಲಿಕಲ್ 11-5, 5-11, 11-9, 11-4ರಿಂದ ಮಣಿಸಿ ಈ ಸಾಧನೆ ಮಾಡಿದರು.
15ರೊಳಗಿನ ಹುಡುಗರ ವಿಭಾಗದಲ್ಲಿ ಮಹೇಶ್ ಮಂಗಾಂವ್ಕರ್ ತಮ್ಮ ಎದುರಾಳಿಯನ್ನು ಮಣಿಸಿ ಸೆಮಿಫೈನಲ್ ತಲುಪಿದರು. ಈಜಿಪ್ಟಿನ ಒಸಾಮ ಖಾಲಿಫಾರನ್ನು 11-1, 12-10, 11-9ರಿಂದ ಮಹೇಶ್ ಸೋಲಿಸಿದ್ದಾರೆ.
ತಮ್ಮ ಮೂರನೇ ಸುತ್ತಿನಲ್ಲಿ ಭಾರತೀಯ ಆಟಗಾರ್ತಿಯರಾದ ಸೌಮ್ಯ ಕರ್ಕಿಯವರು ಇಂಗ್ಲೆಂಡಿನ ಹೈಡಿ ಲಾಲಾರವರನ್ನು 11-7, 11-7, 12-10ರಿಂದ ಹಾಗೂ ಅನಾಕ ಅಲಂಕಮೊನಿಯವರು ಇಂಗ್ಲೆಂಡಿನ ಬ್ರಾಗನ್ ಲಾನೆಯವರನ್ನು 11-3, 14-12, 11-6ರಿಂದ ಸೋಲಿಸಿದರು. ಆದರೆ ಮುಂದಿನ ಹಂತದಲ್ಲಿ ಇವರಿಬ್ಬರೂ ಸೊಲೊಪ್ಪಿಕೊಂಡಿದ್ದಾರೆ. ಕ್ವಾರ್ಟರ್ ಫೈನಲಿನಲ್ಲಿ ಸೌಮ್ಯ ಕರ್ಕಿಯವರು ಈಜಿಪ್ಟ್‌ನ ಕಂಜಿ ಎಲ್ ಡಪ್ರಾವೇಯವರೆದುರು 5-11, 11-13, 7-11ರಿಂದ ಹಾಗೂ ಅನಾಕ ಅಲಂಕಮೊನಿಯವರು ಈಜಿಪ್ಟ್‌ನ ಲೂರ್ ಎಲ್ ಶೆರ್ಬಾನಿಯವರೆದುರು 3-11, 6-11, 6-11ರಿಂದ ಪರಾಜಯಗೊಂಡರು. 13ರ ಹರೆಯದ ಹುಡುಗಿಯರ ವಿಭಾಗದಲ್ಲಿ ಪಂಖೂರಿ ಮಲ್ಹೋತ್ರಾರವರು ಇಂಗ್ಲೆಂಡಿನ ಆಡೆಲ್ ರಾಧ್ವಾರೆದುರು 11-7, 7-11, 7-11, 12-14ರಿಂದ ಸೋಲೊಪ್ಪಿಕೊಂಡು ಕ್ವಾರ್ಟರ್‌ಫೈನಲಿನಿಂದ ಹೊರ ಬಿದ್ದಿದ್ದಾರೆ.
|