ಜನವರಿ 28ರಿಂದ 31ರವರೆಗೆ ಪುಣೆಯಲ್ಲಿ ನಡೆಯಲಿರುವ 61ನೇ ಪುರುಷರ ಮತ್ತು 24ನೇ ಮಹಿಳೆಯರ ರಾಷ್ಟ್ರೀಯ ಹಿರಿಯರ ವೈಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ಗಳು ನಡೆಯಲಿದ್ದು 300ಕ್ಕೂ ಹೆಚ್ಚು ವೈಟ್‌ಲಿಫ್ಟಿಂಗ್ ಪಟುಗಳು ಭಾಗವಹಿಸುವ ನಿರೀಕ್ಷೆಯಿದೆ.
ಇತ್ತೀಚೆಗಷ್ಟೇ ಮುಕ್ತಾಯ ಕಂಡಿದ್ದ ಕಾಮನ್‌ವೆಲ್ತ್ ಯೂತ್ ಗೇಮ್ಸ್ ಸ್ಥಳದಲ್ಲೇ ಈ ಕ್ರೀಡಾ ಉತ್ಸವ ಜರುಗಲಿದೆ. ದೇಶದ ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳೂ ಸೇರಿದಂತೆ ರೈಲ್ವೇ ಕೂಡ ತನ್ನ ಕ್ರೀಡಾಪಟುಗಳನ್ನು ಕ್ರೀಡಾಕೂಟಕ್ಕೆ ಕಳುಹಿಸಲಿದ್ದು, ಚಾಂಪಿಯನ್‌ಶಿಪ್ ರೋಚಕವಾಗಿರಲಿದೆ ಎಂದು ತಿಳಿದು ಬಂದಿದೆ.
ಕಳೆದ ವರ್ಷ ಹರ್ಯಾಣದಲ್ಲಿ ನಡೆದ ಅಖಿಲ ಭಾರತ ಪೊಲೀಸ್ ಗೇಮ್ಸ್‌ನಲ್ಲಿ 7 ಮಂದಿ ಉದ್ದೀಪನಾ ದ್ರವ್ಯ ಸೇವಿಸಿದ್ದರೆಂಬ ಕಾರಣಕ್ಕಾಗಿ ಪೊಲೀಸ್ ಕ್ರೀಡಾ ನಿಯಂತ್ರಣ ಮಂಡಳಿಯ ಮಹಿಳಾ ವಿಭಾಗ ಇಲ್ಲಿ ಸ್ಪರ್ಧಿಸುತ್ತಿಲ್ಲ. ಪೊಲೀಸ್ ಕ್ರೀಡಾ ನಿಯಂತ್ರಣ ಮಂಡಳಿಯು ಕಳೆದ ಬಾರಿಯ ಚಾಂಪಿಯನ್ ಆಗಿತ್ತು.
2007ರ ಡಿಸೆಂಬರ್‌ನಲ್ಲಿ ಕಳೆದ ಬಾರಿಯ ಹಿರಿಯರ ರಾಷ್ಟ್ರೀಯ ಕ್ರೀಡಾಕೂಟ ಭುವನೇಶ್ವರದಲ್ಲಿ ನಡೆದಿತ್ತು. 2009ರ ಜನವರಿ 28ರಿಂದ 31ರವರೆಗೆ ನಡೆಯಲಿರುವ ಈ ಕ್ರೀಡಾ ಕೂಟ 2008ರಲ್ಲೇ ನಡೆಯಬೇಕಿತ್ತು. ಕಾರಣಾಂತರಗಳಿಂದ ಮುಂದೂಡಲ್ಪಟ್ಟು ಇದೀಗ ನಡೆಯುತ್ತಿದೆ.
56, 62, 69, 77, 85, 94, 105 ಮತ್ತು 105 ಕೆ.ಜಿ. ವಿಭಾಗದಲ್ಲಿ ಪುರುಷರಿಗೆ ಹಾಗೂ 48, 53, 58, 63, 69, 75 ಮತ್ತು 75 ಕೆ.ಜಿ. ವಿಭಾಗದಲ್ಲಿ ಮಹಿಳೆಯರಿಗೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಪ್ರತೀ ರಾಜ್ಯ ಅಥವಾ ಘಟಕವು 9 ಮಹಿಳೆಯರು ಮತ್ತು 10 ಪುರುಷ ವೈಟ್‌ಲಿಫ್ಟಿಂಗ್ ಪಟುಗಳನ್ನು ಕಳುಹಿಸಲು ಗರಿಷ್ಠ ಅವಕಾಶವಿದೆ.
|