ತನ್ನ ಅತ್ಯದ್ಭುತ ಪ್ರದರ್ಶನದ ಮೂಲಕ ಬ್ರಿಟೀಷ್ ಜೂನಿಯರ್ ಓಪನ್ ಸ್ಕ್ವಾಷ್ ಟೂರ್ನಮೆಂಟಿನ ಫೈನಲ್ ಪ್ರವೇಶಿಸಿದ್ದ ದೀಪಿಕಾ ಪಲ್ಲಿಕಲ್ ಎಡವಿದ್ದು ಪ್ರಶಸ್ತಿ ಗೆಲ್ಲಲು ವಿಫಲರಾಗಿದ್ದಾರೆ. ಮಲೇಷ್ಯಾದ ಎದುರಾಳಿಯೆದುರು ಕುಸಿಯುವ ಮೂಲಕ ದೀಪಿಕಾ ಪ್ರಶಸ್ತಿಯ ಆಸೆಗೆ ತಣ್ಣೀರೆರಚಿದ್ದಾರೆ.
ಮಲೇಷಿಯಾದ ವೀ-ವೆರ್ನ್-ಲೊರವರೆದುರು ನಿರೀಕ್ಷಿತ ಪ್ರದರ್ಶನ ತೋರಿಸಲು ದೀಪಿಕಾ ಪಲ್ಲಿಕಲ್ ವಿಫಲರಾಗಿದ್ದು ಅಂತಿಮವಾಗಿ ಸೋಲೊಪ್ಪಿಕೊಂಡರು. ಸುಮಾರು 42 ನಿಮಿಷಗಳ ಈ ಹೋರಾಟ 11-2, 11-8, 8-11, 11-8ರಿಂದ ಅಂತ್ಯಗೊಂಡಿತು.
ಆರಂಭದ ಎರಡು ಗೇಮ್‌ಗಳಲ್ಲಿ ಏಕಚಕ್ರಾಧಿಪತ್ಯ ಮೆರೆದ ಮಲೇಷ್ಯಾದ ಆಟಗಾರ್ತಿಗೆ ಮೂರನೇ ಸೆಟ್ ಅಷ್ಟೊಂದು ಸುಲಭವಾಗಿರಲ್ಲ. ತಿರುಗಿ ಬಿದ್ದ ದೀಪಿಕಾ ಮೂರನೇ ಸೆಟ್ ಗೆದ್ದುಕೊಂಡರೂ ನಾಲ್ಕನೇ ಸೆಟ್‌ನಲ್ಲಿ ಮತ್ತೆ ಎಡವಿ ಪ್ರಶಸ್ತಿಯನ್ನು ಕೈ ಚೆಲ್ಲಿದರು.
ವಿಶ್ವದ ನಂ.42 ಆಟಗಾರ್ತಿ ಹಾಗೂ ಕಳೆದ ವರ್ಷದ 17ರೊಳಗಿನವರ ಚಾಂಪಿಯನ್ ದೀಪಿಕಾ ಸೋಲು ಅನಿರೀಕ್ಷಿತ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಎರಡನೇ ಶ್ರೇಯಾಂಕದ ಈಜಿಪ್ಟ್ ಆಟಗಾರ್ತಿ ಹೇಬಾ ಎಲ್ ಟೊರ್ಕೀಯವರೆದುರು 11-9, 14-12, 9-11, 14-12ರ ಅಂತರದಿಂದ ದೀಪಿಕಾ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದ್ದರು. ಈ ಬಾರಿ 19ರೊಳಗಿನ ಹುಡುಗಿಯರ ವಿಭಾಗದಲ್ಲಿ ಸ್ಪರ್ಧಿಸಿದ್ದ ಈಕೆ ಗೆಲ್ಲುವ ಅವಕಾಶವನ್ನು ಕಳೆದುಕೊಳ್ಳುವ ಮೂಲಕ ಮತ್ತೊಂದು ಪ್ರಶಸ್ತಿ ಆಸೆ ದೂರವೇ ಉಳಿಯಿತು.
|