ಗಾಯಾಳುವಾದ ನಂತರ ಮತ್ತೆ ಗ್ರಾಸ್ ಕೋರ್ಟ್ ಆಟಕ್ಕೆ ಮುಂದಾಗಿರುವ ಸಾನಿಯಾ ಮಿರ್ಜಾ ಮೊದಲ ಪ್ರಯತ್ನದಲ್ಲೇ ಜಯ ಸಾಧಿಸಿದ್ದಾರೆ.
ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ 'ಏಗನ್ ಕ್ಲಾಸಿಕ್' ಟೂರ್ನಮೆಂಟ್‌ನಲ್ಲಿ ಅವರು ಬೆಲೂರಾಸ್‌ನ ತತಿಯಾನಾ ಪೌತ್ಚೆಕ್‌ರನ್ನು 6-1, 6-2ರ ಅಂತರದಿಂದ ಮಣಿಸಿದ್ದಾರೆ.
22ರ ಹರೆಯದ ಭಾರತೀಯ ಅಗ್ರ ಆಟಗಾರ್ತಿ ಚೆಂಡನ್ನು ಅತ್ಯುತ್ತಮವಾಗಿ ಗುರುತಿಸಿ ಹೊಡೆತಗಳಿಗೆ ಮುಂದಾಗುತ್ತಿದ್ದರು. ಅದ್ಭುತ ಆರಂಭವನ್ನೇ ಪಡೆದ ಆಕೆ, ಸರ್ವ್‌ಗಳನ್ನು ತ್ವರಿತ ಗತಿಯಲ್ಲಿ ಬ್ರೇಕ್ ಮಾಡುತ್ತಿದ್ದರು.
ಕೆಲ ವರ್ಷಗಳ ಹಿಂದೆ ತನ್ನ ವೃತ್ತಿ ಜೀವನದ ಉತ್ತುಂಗಕ್ಕೇರಿದ್ದ ಆಕೆ ಇದೀಗ ವಿಶ್ವ ರ‌್ಯಾಂಕಿಂಗ್‌ನಲ್ಲಿ ನಂ.98. ಆದರೂ ಮತ್ತೆ ತನ್ನ ಇಷ್ಟದ ಪ್ರಕಾರಕ್ಕೆ ಮರಳಿರುವುದು ಸಂತಸ ತಂದಿದೆ ಎಂದು ಆಕೆ ಹೇಳಿಕೊಂಡಿದ್ದಾರೆ.
"ಗ್ರಾಸ್ ಕೋರ್ಟ್‌ನಲ್ಲಿ ಆಡುವುದೆಂದರೆ ನನಗೆ ತುಂಬಾ ಇಷ್ಟ. ಇದರ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದೇನೆ. ನನ್ನ ರ‌್ಯಾಂಕಿಂಗ್ ಬಗ್ಗೆ ಹೆಚ್ಚಿನ ಗಮನ ಕೊಡುತ್ತಿಲ್ಲ. ಗಾಯಾಳುವಾದ ನಂತರ ಮತ್ತೆ ಅದೇ ಸ್ಥಾನಕ್ಕೆ ಮರಳುವುದು ಅಷ್ಟು ಸುಲಭವಲ್ಲ. ಕೆಲವೊಂದು ಉತ್ತಮ ಫಲಿತಾಂಶಗಳ ಮೂಲಕ ತನ್ನಿಂತಾನೇ ರ‌್ಯಾಂಕಿಂಗ್ ಕೂಡ ಸ್ವಸ್ಥಾನಕ್ಕೆ ಮರಳುತ್ತದೆ" ಎಂದರು.
ಸಾನಿಯಾ ಎರಡನೇ ಸುತ್ತಿನಲ್ಲಿ 11ನೇ ಶ್ರೇಯಾಂಕಿತೆ ಬ್ರಿಟನ್‌ನ ಅನ್ನೇ ಕಿಯೋತಾವಾಂಗ್ ವಿರುದ್ಧ ಹೋರಾಡಲಿದ್ದಾರೆ. ಇಂಗ್ಲೆಂಡ್‌ನ ನಂ.1 ಆಟಗಾರ್ತಿಯಾಗಿರುವ ಅನ್ನೇ ಆರಂಭಿಕ ಸುತ್ತಿನಲ್ಲಿ ಸ್ವೀಡನ್‌ನ ಸೋಫಿಯಾ ಆರ್ವಿಡ್ಸನ್ ವಿರುದ್ಧ 6-2, 6-2ರಿಂದ ಜಯಗಳಿಸಿದ್ದರು.
|