ಮಾಜಿ ಹೆವಿವೈಟ್ ಬಾಕ್ಸಿಂಗ್ ಚಾಂಪಿಯನ್ ಮೈಕ್ ಟೈಸನ್ ತನ್ನ ಗೆಳತಿ ಲಖೀಹಾ ಸೈಸರ್‌ರನ್ನು ಮಂಗಳವಾರ ವಿವಾಹವಾಗಿದ್ದಾರೆ. ಇದು ಅಧಿಕೃತವಾಗಿ ಟೈಸನ್‌ರವರ ಮೂರನೇ ಮದುವೆಯಂತೆ..!
ಟೈಸನ್‌ರ ನಾಲ್ಕು ವರ್ಷ ಪ್ರಾಯದ ಮಗಳು ಎಕ್ಸೋಡಸ್ ಕೇವಲ ಎರಡು ವಾರಗಳ ಹಿಂದಷ್ಟೇ ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದರು. ಪೊಲೀಸರ ಪ್ರಕಾರ ಇದೊಂದು ಆಕಸ್ಮಿಕ. ಟೈಸನ್‌ರ ಮತ್ತೊಬ್ಬ ಹೆಂಡತಿಯ ಮಗ ಎಕ್ಸೋಡಸ್‌ಳನ್ನು ಹಗ್ಗಕ್ಕೆ ಸಿಲುಕಿಸಿದ್ದ. ಇದನ್ನು ಕಂಡ ಎಕ್ಸೋಡಸ್‌ಳ ತಾಯಿ ನಂತರ ಆಸ್ಪತ್ರೆಗೆ ಸೇರಿಸಿದ್ದಳಾದರೂ ಬದುಕುಳಿಯದೆ ಮೇ 26ರಂದು ಸಾವನ್ನಪ್ಪಿದ್ದಳು.
ಇದೀಗ ಟೈಸನ್ ಮತ್ತೊಂದು ಮದುವೆ ಮಾಡಿಕೊಂಡಿದ್ದಾರೆ. ಲಾಸ್ ವೇಗಾಸ್‌ನ 'ಲಾ ಬೆಲ್ಲಾ' ವೆಡ್ಡಿಂಗ್ ಚಾಪೆಲ್‌ನಲ್ಲಿ ಸ್ಪೈಸರ್ ಜತೆ ಅವರು ಮಂಗಳವಾರ ರಾತ್ರಿ 10 ಗಂಟೆಗೆ ವಿವಾಹವಾಗಿದ್ದಾರೆ ಎಂದು ಅದರ ಮಾಲಕ ಶಾನ್ ಅಬ್ಸರ್ ಪತ್ರಕರ್ತರಿಗೆ ಮಾಹಿತಿ ನೀಡಿದ್ದಾರೆ.
"ಕೇವಲ ವಧು ಮತ್ತು ವರ ಮಾತ್ರವೇ ಹಾಜರಿದ್ದರು. ಯಾವುದೇ ಅತಿಥಿಗಳು ಭಾಗವಹಿಸಿರಲಿಲ್ಲ. ಟೈಸನ್ ತುಂಬಾ ಸಂತೋಷವಾಗಿದ್ದರು. ನಿಜಕ್ಕೂ ಅದೊಂದು ಸುಂದರ ಜೋಡಿ. ಅವರು ಗಾಢವಾಗಿ ಪ್ರೀತಿಸುತ್ತಿದ್ದಾರೆಂದೆನಿಸುತ್ತದೆ" ಎಂದು ಅವರು ತಿಳಿಸಿದ್ದಾರೆ.
ಟೈಸನ್‌ರ ಮೊದಲ ಮದುವೆ ನಟಿ ರಾಬಿನ್ ಗೀವನ್ಸ್ ಜತೆ ನಡೆದಿತ್ತು. ಒಂದೇ ವರ್ಷದಲ್ಲಿ ದಾಂಪತ್ಯ ಮುರಿದು ಬಿದ್ದ ಕಾರಣ ನಂತರ ಮೋನಿಕಾ ಟರ್ನರ್ ಎಂಬ ವೈದ್ಯೆ ಜತೆ ಟೈಸನ್ ಸಂಸಾರ ಮಾಡಿಕೊಂಡಿದ್ದರು. ಅದೂ ಐದು ವರ್ಷಕ್ಕೆ ಸೀಮಿತಗೊಂಡಿತ್ತು.
ಸದಾ ವಿವಾದಗಳಿಂದಲೇ ಮುಳುಗೇಳುತ್ತಿದ್ದ ಟೈಸನ್ 2005ರಲ್ಲಿ ಅಂತಾರಾಷ್ಟ್ರೀಯ ಬಾಕ್ಸಿಂಗ್‌ಗೆ ನಿವೃತ್ತಿ ಘೋಷಿಸಿದ್ದರು. ಈ ನಡುವೆ ಅತ್ಯಾಚಾರ ಸೇರಿದಂತೆ ಹಲವು ಕ್ರಿಮಿನಲ್ ಪ್ರಕರಣಗಳಿಂದಾಗಿ ಜೈಲಿನಲ್ಲೇ ಹಲವು ವರ್ಷಗಳನ್ನೂ ಕಳೆದಿದ್ದರು.
|