ಹತ್ತು ತಿಂಗಳ ಹಿಂದೆ ಇಲ್ಲಿನ ಆಸ್ಪತ್ರೆಯೊಂದರಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಎರಡೂ ಮಂಡಿಗಳನ್ನು ಬದಲಿಸಿಕೊಂಡಿದ್ದ 69ರ ಹರೆಯದ ಉದ್ಯಮಿಯೊಬ್ಬರು ಇತ್ತೀಚೆಗಷ್ಟೇ ನಡೆದ ಸನ್‌ಫೀಸ್ಟ್ 10ಕೆ ಮ್ಯಾರಥಾನ್‌ನಲ್ಲಿ ಐದು ಕಿಲೋ ಮೀಟರ್ ದೂರವನ್ನು ಓಡಿ ಪೂರ್ಣಗೊಳಿಸಿದ ಅಪರೂಪದ ವಿದ್ಯಮಾನವೊಂದು ವರದಿಯಾಗಿದೆ.
ಕಳೆದ 20 ವರ್ಷಗಳಿಂದ ತೀವ್ರ ಮಂಡಿ ನೋವಿನಿಂದ ಬಳಲುತ್ತಿದ್ದ ರಾಮಗೋಪಾಲ್ ಮುಂದ್ರಾ ಜುಲೈಯಲ್ಲಿ ಬೆಂಗಳೂರಿನ 'ವೋಕ್ಹಾರ್ಟ್ ಹಾಸ್ಪಿಟಲ್ಸ್'ನಲ್ಲಿ ಎರಡೂ ಮಂಡಿಗಳನ್ನು ಬದಲಿಸಿಕೊಂಡಿದ್ದರು.
"ಅವರೀಗ ಕ್ರಿಯಾಶೀಲರಾಗಿರುವುದು ಮಾತ್ರವಲ್ಲ; ಅವರ ಅರ್ಧ ಪ್ರಾಯದವರಿಗೆ ಕಠಿಣವೆನಿಸುವ ಐದು ಕಿಲೋ ಮೀಟರ್ ದೂರವನ್ನೂ ಮ್ಯಾರಥಾನ್‌ನಲ್ಲಿ ಓಡಿ ಅವರು ಕ್ರಮಿಸಿ ಸವಾಲೆಸೆದಿದ್ದಾರೆ" ಎಂದು 'ವೋಕ್ಹಾರ್ಟ್'ನಲ್ಲಿ ಮುಂದ್ರಾರಿಗೆ ಶಸ್ತ್ರಚಿಕಿತ್ಸೆ ನಡೆಸಿದ ಮೂಳೆ ತಜ್ಞ ಡಾ. ಸಂಜಯ್ ಪೈ ಪತ್ರಕರ್ತರಿಗೆ ತಿಳಿಸಿದ್ದಾರೆ.
ಮುಂದ್ರಾ ನಡೆದಾಡುವ ಸಾಮರ್ಥ್ಯವನ್ನೂ ಕಳೆದುಕೊಂಡಿದ್ದರು. ಅಲ್ಲದೆ ಇತರರ ಸಹಾಯವಿಲ್ಲದೆ ತನ್ನ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲು ಅವರು ಅಶಕ್ತರಾಗಿದ್ದರು.
"ಅವರ ಸುಧಾರಿಸಿಕೊಂಡಿರುವುದು ಗಮನಾರ್ಹ. ಶಸ್ತ್ರಚಿಕಿತ್ಸೆ ನಡೆಸಿದ ಕೇವಲ ಐದೇ ವಾರದಲ್ಲಿ ಅವರು ಕಾರು ಡ್ರೈವಿಂಗ್ ಮಾಡಲು ಆರಂಭಿಸಿದ್ದರು. ಆರನೇ ವಾರದಲ್ಲಿ ಈಜುವುದು ಕೂಡ ಅವರಿಗೆ ಸಾಧ್ಯವಾಗಿತ್ತು" ಎಂದು ಪೈ ತಿಳಿಸಿದ್ದಾರೆ.
ಈ ರೀತಿಯ ತೊಂದರೆಯಿಂದ ಬಳಲುತ್ತಿರುವವರನ್ನು ಶಸ್ತ್ರಚಿಕಿತ್ಸೆಯ ಮೂಲಕ ಗುಣಪಡಿಸಿ ಇತರರಂತೆ ಜೀವನ ನಡೆಸಬಹುದು ಎಂಬುದಕ್ಕೆ ಇದು ಸಾಕ್ಷಿ ಎಂದು ಅವರು ವಿವರಿಸಿದರು.
ಆದರೆ ದುರದೃಷ್ಟಕರ ವಿಚಾರವೆಂದರೆ ಇಂತಹ ಅಮೂಲಾಗ್ರ ಶಸ್ತ್ರಚಿಕಿತ್ಸೆಯ ವ್ಯವಸ್ಥೆಗಳಿದ್ದಾಗ್ಯೂ ಜನಸಂಖ್ಯೆಯ ಪ್ರತಿಶತ ಒಂದರಷ್ಟನ್ನೂ ನಮಗೆ ತಲುಪಲಾಗಿಲ್ಲ. ಶಸ್ತ್ರಚಿಕಿತ್ಸೆಯ ವೆಚ್ಚ ಮತ್ತು ಅದು ಯಶಸ್ವಿಯಾಗದು ಎಂಬ ಭಯವೇ ಇದಕ್ಕೆ ಪ್ರಮುಖ ಕಾರಣಗಳು ಎಂದು ಸರ್ಜನ್ ಅಭಿಪ್ರಾಯಪಟ್ಟಿದ್ದಾರೆ.
|