ರೋಜರ್ ಫೆಡರರ್, ಆಂಡಿ ರಾಡಿಕ್, ಆಂಡಿ ಮುರ್ರೆ ಮತ್ತು ಟಾಮಿ ಹಾಸ್ ಕ್ವಾರ್ಟರ್ ಫೈನಲ್‌ನಲ್ಲಿ ತಮ್ಮ ಎದುರಾಳಿಗಳನ್ನು ಮಣಿಸಿ ವಿಂಬಲ್ಡನ್ ಸೆಮಿಫೈನಲ್ ತಲುಪಿದ್ದು ಪ್ರತಿಷ್ಠಿತ ಗ್ರಾಂಡ್ ಸ್ಲಾಮ್ ಫೈನಲ್‌ಗೇರುವ ಅದೃಷ್ಟವಂತ ಆಟಗಾರರು ಯಾರೆಂಬುದು ಟೆನಿಸ್ ಪ್ರಿಯರಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.ಎರಡನೇ ಶ್ರೇಯಾಂಕಿತ ಸ್ವಿಟ್ಜರ್ಲೆಂಡ್‌ನ ಫೆಡರರ್ ಜರ್ಮನಿಯ 24ನೇ ಶ್ರೇಯಾಂಕಿತ ಟಾಮಿ ಹಾಸ್‌ರನ್ನು ಹಾಗೂ ಮೂರನೇ ಶ್ರೇಯಾಂಕಿತ ಇಂಗ್ಲೆಂಡ್‌ನ ಆಂಡಿ ಮುರ್ರೆ ಆರನೇ ಶ್ರೇಯಾಂಕಿತ ಅಮೆರಿಕನ್ ಆಂಡಿ ರಾಡಿಕ್‌ರನ್ನು ಮುಖಾಮುಖಿಯಾಗಲಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ಫೆಡರರ್ 22ನೇ ಶ್ರೇಯಾಂಕಿತ ಕ್ರೊವೇಷಿಯಾದ ಇವೋ ಕಾರ್ಲೊವಿಕ್‌ರನ್ನು 6-3, 7-5, 7-6, ಹಾಸ್ ನಾಲ್ಕನೇ ಶ್ರೇಯಾಂಕಿತ ಸೆರ್ಬಿಯಾದ ನೊವಾಕ್ ಜೊಕೊವಿಕ್‌ರನ್ನು 7-5, 7-6, 4-6, 6-3, ಮುರ್ರೆ ಸ್ಪೇನ್‌ನ ಜುವಾನ್ ಕಾರ್ಲೊಸ್ ಫೆರೆರೋರನ್ನು 7-5, 6-3, 6-2 ಹಾಗೂ ರಾಡಿಕ್ ಆಸ್ಟ್ರೇಲಿಯಾದ ಲೀಟಾನ್ ಹೆವಿಟ್‌ರನ್ನು 6-3, 6-7, 7-6, 4-6, 6-4ರಿಂದ ಪರಾಜಯಗೊಳಿಸುವ ಮೂಲಕ ಸೆಮಿಯಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದರು.ವಿಶ್ವದ ಮಾಜಿ ನಂ.2 ಜೊಕೊವಿಕ್‌ರಿಗೆ ಸೋಲುಣಿಸಿದ ಹಾಸ್‌ರದ್ದು ವಿಂಬಲ್ಡನ್‌ನ ಮೊತ್ತ ಮೊದಲ ಸೆಮಿಫೈನಲ್. 31ರ ಹರೆಯದ ಹಾಸ್ ಇದೀಗ ಕಣದಲ್ಲಿ ಉಳಿದಿರುವ ಹಿರಿಯ ಆಟಗಾರನೂ ಹೌದು. ಆದರೆ ಯಾವುದೇ ಅಗ್ರ ಆಟಗಾರನನ್ನು ಮಣಿಸುವ ತಾಕತ್ತು ಅವರಲ್ಲಿದೆ ಎಂಬುದು ಕಳೆದ ಪಂದ್ಯದಲ್ಲಿ ಸಾಬೀತಾಗಿ ಹೋಗಿದೆ.ತನ್ನ 13 ವರ್ಷಗಳ ಕ್ರೀಡಾಜೀವನದಲ್ಲೇ ಮೊತ್ತ ಮೊದಲ ಬಾರಿಗೆ ವಿಂಬಲ್ಡನ್ ಸೆಮಿಫೈನಲ್ ತಲುಪಿರುವ ಹಾಸ್ ಇಲ್ಲಿನ ಐದು ಬಾರಿಯ ಚಾಂಪಿಯನ್ ಫೆಡರರ್‌ರನ್ನು ಎದುರಾಗಲಿದ್ದಾರೆ. ಹಾಸ್ ಆಸ್ಟ್ರೇಲಿಯಾ ಓಪನ್‌ನಲ್ಲಿ ಇದುವರೆಗೆ ಮೂರು ಬಾರಿ ಸೆಮಿಫೈನಲ್ ಪ್ರವೇಶಿಸಿದ್ದರೂ ಪ್ರಶಸ್ತಿ ಗೆಲ್ಲಲಾಗಲಿಲ್ಲ. ಈ ಬಾರಿ ವಿಂಬಲ್ಡನ್‌ನಲ್ಲಿ ಅದು ಸಾಧ್ಯವಾಗುವ ಗಾಢ ಭರವಸೆ ಇದೀಗ ಅವರಲ್ಲಿದೆ.ಹಾಗೊಂದು ವೇಳೆ ಫೆಡಡರ್‌ಗೆ ಆಘಾತ ನೀಡಲು ಸಫಲರಾಗಿ ನಂತರ ಫೈನಲ್‌ನಲ್ಲೂ ಜಯಿಸಿದರೆ 1975ರಲ್ಲಿ ಆರ್ಥರ್ ಆಶ್ ಬಳಿಕ ಹಿರಿಯ ಆಟಗಾರನೊಬ್ಬ ವಿಂಬಲ್ಡನ್ ಚಾಂಪಿಯನ್ ಪಟ್ಟವನ್ನೇರಿದಂತಾಗುತ್ತದೆ.ಅಮೆರಿಕನ್ ರಾಡಿಕ್ ಇಲ್ಲಿ ಫೈನಲ್ ತಲುಪದೆ ನಾಲ್ಕು ವರ್ಷಗಳೇ ಕಳೆದಿವೆ. ಈ ಹಿಂದೆ ಅವರು 2004 ಮತ್ತು 2005ರಲ್ಲಿ ವಿಂಬಲ್ಡನ್ ಫೈನಲ್ ತಲುಪಿದ್ದರು. ಗ್ರಾಂಡ್ ಸ್ಲಾಮ್‌ನಲ್ಲಿ ಇವರ ಹೆಸರು ಅಚ್ಚಳಿಯದೆ ಉಳಿದಿರುವುದು ಅಮೆರಿಕಾ ಓಪನ್‌ನಲ್ಲಿ ಮಾತ್ರ. 2003ರಲ್ಲಿ ಈ ಪ್ರಶಸ್ತಿಯನ್ನು ಅವರು ಗೆದ್ದುಕೊಂಡಿದ್ದರು.ಮುರ್ರೆಯವರು ವಿಂಬಲ್ಡನ್ ಸೆಮಿಫೈನಲ್‌ಗೆ ಲಗ್ಗೆ ಹಾಕಿರುವುದು ಇದೇ ಮೊದಲು. 2008ರಲ್ಲಿ ಇವರ ಗರಿಷ್ಠ ಸಾಧನೆ ಕ್ವಾರ್ಟರ್ ಫೈನಲ್. ಅಮೆರಿಕಾ ಓಪನ್‌ನಲ್ಲಿ ಕಳೆದ ವರ್ಷ ಫೈನಲ್ ಪ್ರವೇಶಿಸಿದ್ದೇ ಮಾಜಿ ನಂ.3 ಆಟಗಾರ ಗ್ರಾಂಡ್ ಸ್ಲಾಮ್ ಗರಿಷ್ಠ ಸಾಧನೆ.ಇಲ್ಲಿನ ಐದು ಬಾರಿಯ ಚಾಂಪಿಯನ್ (2003, 2004, 2005, 2006, 2007) ಫೆಡರರ್ ಈ ಬಾರಿಯೂ ಗೆಲ್ಲುವ ನೆಚ್ಚಿನ ಆಟಗಾರ. ಈ ಸಲದ ವಿಂಬಲ್ಡನ್ ಗೆದ್ದುಕೊಂಡರೆ ಅವರ ಗ್ರಾಂಡ್ ಸ್ಲಾಮ್ ಪ್ರಶಸ್ತಿಗಳ ಸಂಖ್ಯೆ ದಾಖಲೆಯ 15ಕ್ಕೇರುತ್ತದೆ ಮತ್ತು ಈ ವರ್ಷದ ಫ್ರೆಂಚ್ ಓಪನ್ ಮುಡಿಗೇರಿಸಿಕೊಂಡಿರುವ ಫೆಡರರ್‌ಗೆ ಮತ್ತೊಂದು ಪ್ರಶಸ್ತಿಯಾಗಲಿದೆ. |