ಫಿಫಾ ವಿಶ್ವ ಫುಟ್ಬಾಲ್ ರ‌್ಯಾಂಕಿಂಗ್‌ನಲ್ಲಿ ಕಳೆದೊಂದು ವರ್ಷದಿಂದ ಅಧಿಪತ್ಯ ಸಾಧಿಸಿದ್ದ ಸ್ಪೇನ್ ತಂಡವನ್ನು ಕೆಳಗಿಳಿಸಿರುವ ಐದು ಬಾರಿಯ ವಿಶ್ವ ಚಾಂಪಿಯನ್ ಬ್ರೆಜಿಲ್ ಮರಳಿ ಅಗ್ರ ಸ್ಥಾನಕ್ಕೇರಿದೆ.ಬುಧವಾರ ಬಿಡುಗಡೆಗೊಂಡ ಫಿಫಾ ರ‌್ಯಾಂಕಿಂಗ್‌ನಲ್ಲಿ ಈ ಮಹತ್ತರ ಬದಲಾವಣೆ ಕಂಡು ಬಂದಿದೆ. ಕಳೆದ ವಾರ ಅಂತ್ಯಗೊಂಡ ಕಾನ್ಫಡೆರೇಶನ್ ಕಪ್ ಫುಟ್ಬಾಲ್ ಕಪ್ ಗೆಲ್ಲುವ ಮೂಲಕ 384 ಅಂಕಗಳನ್ನು ಬಗಲಿಗೆ ಹಾಕಿಕೊಂಡ ಬ್ರೆಜಿಲ್ ನಂ.1 ಸ್ಥಾನವನ್ನೇರಿತು.ಬ್ರೆಜಿಲ್ 2007ರ ಆಗಸ್ಟ್ ತಿಂಗಳಿನಲ್ಲಿ ನಂಬರ್ ವನ್ ಸ್ಥಾನವನ್ನು ಸ್ಫೇನ್‌ಗೆ ಬಿಟ್ಟುಕೊಟ್ಟಿತ್ತು. ಒಂದು ವರ್ಷದಿಂದೀಚೆಗೆ ಸ್ಫೇನ್ ಕಾಲ್ಚೆಂಡಾಟದ ರಾಜನಾಗಿ ಮುಂದುವರಿದಿತ್ತು. ಆದರೆ ಬ್ರೆಜಿಲ್ ಇದೀಗ ಒಟ್ಟು 1672 ಅಂಕಗಳನ್ನು ಗಳಿಸುವ ಮೂಲಕ ನಾಲ್ಕು ಸ್ಥಾನವನ್ನು ಮೇಲೇರಿದ್ದು, ಅಗ್ರಸ್ಥಾನ ಪಡೆದುಕೊಂಡಿದೆ.ಅದೇ ವೇಳೆ 171 ಅಂಕ ಕಳೆದುಕೊಂಡಿರುವ ಸ್ಪೇನ್ 1590 ಅಂಕಗಳೊಂದಿಗೆ ದ್ವಿತೀಯ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಹಾಲೆಂಡ್ 1379 ಅಂಕಗಳೊಂದಿಗೆ ಮೂರು ಹಾಗೂ ಜರ್ಮನಿ 1207 ಅಂಕಗಳೊಂದಿಗೆ ಐದನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.ಆದರೆ ರ‌್ಯಾಂಕಿಂಗ್‌ನಲ್ಲಿ ಯಾವುದೇ ಏರುಪೇರು ಕಾಣದ ಇಟೆಲಿ ನಾಲ್ಕನೇ ಸ್ಥಾನದಲ್ಲಿಯೇ ಮುಂದುವರಿಯುತ್ತಿದೆ. ಉಳಿದಂತೆ ಟಾಪ್ ಹತ್ತರಲ್ಲಿ ಕಾಣಿಸಿಕೊಂಡಿರುವ ಇತರ ತಂಡಗಳೆಂದರೆ ರಷ್ಯಾ, ಇಂಗ್ಲೆಂಡ್, ಅರ್ಜೈಂಟೈನಾ, ಫ್ರಾನ್ಸ್ ಮತ್ತು ಕ್ರೊವೇಷಿಯಗಳಾಗಿವೆ.ಕಾನ್ಫಡೆರೇಶನ್ ಕಪ್‌ನಲ್ಲಿ ಫೈನಲ್ ತಲುಪುವ ಮೂಲಕ ಅಚ್ಚರಿ ಮೂಡಿಸಿದ್ದ ಅಮೆರಿಕ ರ‌್ಯಾಂಕಿಂಗ್ ಪಟ್ಟಿಯಲ್ಲಿ ತನ್ನ ಸರ್ವಶ್ರೇಷ್ಠ ಸ್ಥಾನವನ್ನು ಕಂಡುಕೊಂಡಿದ್ದು, ಎರಡು ಸ್ಥಾನ ಮೇಲೇರುವ ಮೂಲಕ 12ನೇ ಸ್ಥಾನಕ್ಕೆ ತಲುಪಿದೆ. ಅದೇ ರೀತಿ ರ‌್ಯಾಂಕಿಂಗ್‌ನಲ್ಲಿ 13 ಸ್ಥಾನ ಏರಿಕೆ ಕಂಡಿರುವ ಆಸ್ಟ್ರೇಲಿಯಾ 29ನೇ ಸ್ಥಾನದಿಂದ 16ಕ್ಕೆ ಜಿಗಿದಿದೆ.ಆಫ್ರಿಕಾದ ನಂಬರ್ ವನ್ ತಂಡವಾಗಿ ಐವರಿ ಕೋಸ್ಟಾ ಮುಂದುವರಿಯುತ್ತಿದ್ದು, ಇದು 20 ಸ್ಥಾನಗಳ ನೆಗೆತ ಕಂಡು 18ನೇ ಸ್ಥಾನಕ್ಕೆ ತಲುಪಿದೆ. ಎರಡು ಸ್ಥಾನ ಮೇಲೆರುವ ಮೂಲಕ ದಕ್ಷಿಣ ಆಫ್ರಿಕಾ ಕೂಡಾ ತನ್ನ ಸರ್ವಶ್ರೇಷ್ಠ ರ‌್ಯಾಂಕಿಂಗ್ ಸ್ಥಾನ 70ಕ್ಕೆ ತಲುಪಿದೆ.ಫಿಫಾ ರ‌್ಯಾಂಕಿಂಗ್‌ನಲ್ಲಿ ಭಾರತ 148 ಅಂಕಗಳೊಂದಿಗೆ 147ನೇ ಸ್ಥಾನದಲ್ಲಿ ಮುಂದುವರಿಯುತ್ತಿದ್ದು, ಅಂಕಪಟ್ಟಿಯಲ್ಲಿ ಏಳು ಅಂಕಗಳನ್ನು ಕಳೆದು ಕೊಂಡಿದೆ. |