ಟೂರ್ನಮೆಂಟ್ ಇತಿಹಾಸದಲ್ಲೇ ಸುದೀರ್ಘ ಸಮಯ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಇಲೆನಾ ಡಿಮೆಂಟಿವಾರನ್ನು 6-7 (4/7), 7-5, 8-6ರಿಂದ ಮ್ಯಾಚ್ ಪಾಯಿಂಟ್ ಉಳಿಸುವ ಮೂಲಕ ಮಣಿಸಿರುವ ಸೆರೆನಾ ವಿಲಿಯಮ್ಸ್ ತನ್ನ ಐದನೇ ವಿಂಬಲ್ಡನ್ ಫೈನಲ್ ಪ್ರವೇಶಿಸಿದ್ದಾರೆ.ಈ ಪಂದ್ಯದಲ್ಲಿ ಅಮೆರಿಕನ್ ಆಟಗಾರ್ತಿ ಮತ್ತು ರಷ್ಯನ್ ನಡುವೆ ಎರಡು ಗಂಟೆ 49 ನಿಮಿಷಗಳ ಕಾಲ ಫೈನಲ್ ಸುತ್ತಿಗಾಗಿ ಹೋರಾಟ ನಡೆಯಿತು. " ಇದು ನಿಜಕ್ಕೂ ತೀರಾ ಕಠಿಣವಾಗಿತ್ತು. ಇಲೆನಾ ಅತ್ಯುತ್ತಮ ಆಟ ನೀಡಿದ್ದಾರೆ. ಮ್ಯಾಚ್ ಪಾಯಿಂಟ್ ಸಂದರ್ಭದಲ್ಲಿ ತಾನು ಇದು ನನ್ನ ಸರ್ವ್ ಎಂದು ಯೋಚಿಸಿ ತಾಳ್ಮೆ ತಂದು ಕೊಂಡು ಧನಾತ್ಮಕವಾಗಿದ್ದೆ" ಎಂದು ಎರಡು ಬಾರಿಯ ವಿಂಬಲ್ಡನ್ ಚಾಂಪಿಯನ್ ಸೆರೆನಾ ಗೆಲುವು ಸಾಧಿಸಿದ ನಂತರ ಪ್ರತಿಕ್ರಿಯಿಸಿದ್ದಾರೆ.ಇವರಿಬ್ಬರ ನಡುವಿನ ಕಳೆದ ನಾಲ್ಕು ಮುಖಾಮುಖಿಗಳಲ್ಲಿ ಮೂರನ್ನು ಗೆದ್ದುಕೊಂಡಿದ್ದ ಒಲಿಂಪಿಕ್ ಚಾಂಪಿಯನ್ ಡಿಮೆಂಟಿವಾ ಆರಂಭಿಕ ಸೆಟ್ ಗೆದ್ದು ಅಮೆರಿಕನ್ ಆಟಗಾರ್ತಿಯನ್ನು ಹೊರ ತಳ್ಳುವ ಭರವಸೆ ಮೂಡಿಸಿದ್ದರು. ಆದರೆ ನಂತರದ ಎರಡೂ ಸೆಟ್‌ಗಳಲ್ಲಿ ಅವರ ಕನಸು ನನಸಾಗಲಿಲ್ಲ.2002 ಮತ್ತು 2003ರ ವಿಂಬಲ್ಡನ್ ಚಾಂಪಿಯನ್ 27ರ ಸೆರೆನಾ ಇದುವರೆಗೆ ಒಟ್ಟು 20 ಗ್ರಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅದರಲ್ಲಿ 10 ಸಿಂಗಲ್ಸ್, 8 ಡಬಲ್ಸ್ ಹಾಗೂ 2 ಮಿಶ್ರ ಡಬಲ್ಸ್. ಈ ಬಾರಿಯ ವಿಂಬಲ್ಡನ್ ಸೆರೆನಾ ಪಾಲಾದರೆ ಅವರ ಗ್ರಾಂಡ್ ಸ್ಲಾಮ್ ಸಿಂಗಲ್ಸ್ ಪ್ರಶಸ್ತಿ ಸಂಖ್ಯೆ 11ಕ್ಕೇರುತ್ತದೆ. |