ವಿಂಬಲ್ಡನ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಏಕೈಕ ಭರವಸೆಯಾಗಿರುವ ಲಿಯಾಂಡರ್ ಪೇಸ್ ಮತ್ತು ಜಿಂಬಾಬ್ವೆಯ ಕ್ಲಾರಾ ಬ್ಲಾಕ್ ಜೋಡಿ ಮಿಶ್ರ ಡಬಲ್ಸ್‌ನ ಸೆಮಿಫೈನಲ್ ಹಂತಕ್ಕೆ ಪ್ರವೇಶಿಸಿದ್ದಾರೆ. ಗುರುವಾರ ನಡೆದ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತ ಪೇಸ್-ಬ್ಲಾಕ್ ಜೋಡಿ ಅವರು 11ನೇ ಶ್ರೇಯಾಂಕಿತ ಬ್ರೆಜಿಲ್‌ನ ಆಂದ್ರೆ ಸಾ ಮತ್ತ ಜಪಾನ್‌ನ ಆಯಿ ಸುಗಿಯಾಮ ಜೋಡಿಯನ್ನು 6-3, 6-3 ಅಂತರದಿಂದ ಸುಲಭವಾಗಿ ಮಣಿಸಿದರು. ಉತ್ತಮ ಪ್ರದರ್ಶನ ನೀಡಿದ ಪೇಸ್-ಬ್ಲಾಕ್ ಜೋಡಿ ಪಂದ್ಯವನ್ನು ಕೇವಲ 68 ನಿಮಿಷಗಳಲ್ಲಿ ವಶಪಡಿಸಿಕೊಂಡರು.ಭಾರತ-ಜಿಂಬಾಬ್ವೆ ಜೋಡಿ ಸೆಮಿಫೈನಲ್ ಮುಖಾಮುಖಿಯಲ್ಲಿ 12ನೇ ಶ್ರೇಯಾಂಕದ ಆಸ್ಟ್ರೇಲಿಯಾ ಆಟಗಾರ ಸ್ಟೀಫನ್ ಹಸ್ಸ್ ಮತ್ತು ಸ್ಪಾನಿಶ್‌ನ ವೆರ್ಜಿನಾ ರೂವಾನೊ ಪಾಸ್ಕುವಲ್ ವಿರುದ್ಧ ಹೋರಾಟ ನಡೆಸಲಿದ್ದಾರೆ. ಹಸ್ಸ್-ರುವಾನೊ ಜೋಡಿ ಮತ್ತೊಂದು ಕ್ವಾರ್ಟರ್ ಮುಖಾಮುಖಿಯಲ್ಲಿ ಜಿಂಬಾಬ್ವೆಯ ಕಿವಿನ್ ಉಲ್ಯೆಟ್ ಮತ್ತು ಸೂ ವಿ ಸೀ ವಿರುದ್ಧ 6-3, 5-7, 9-7 ಅಂತರದ ಕಠಿಣ ಜಯ ದಾಖಲಿಸಿದ್ದರು. ಅದೇ ವೇಳೆ ಪುರುಷರ ಡಬಲ್ಸ್‌ನಲ್ಲಿ ಅಮರಿಕದ ಬ್ರಯನ್ ಸಹೋದರರು ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ. ಗುರುವಾರ ನಡೆದ ಸೆಮಿಯಲ್ಲಿ ಅಮೆರಿಕದ ಬಾಬ್ ಬ್ರಯನ್ ಮತ್ತು ಮೈಕ್ ಬ್ರಯನ್ ಜೋಡಿ 7-6, 7-6, 6-4 ಅಂತರದಿಂದ ದಕ್ಷಿಣ ಆಫ್ರಿಕಾದ ವೆಸ್ಲಿ ಮೂಡಿ ಮತ್ತು ಬೆಲ್ಜಿಯಂನ ಡಿಕ್ ನಾರ್ಮನ್ ವಿರುದ್ಧ ಜಯ ಸಾಧಿಸಿದರು. |