'ಟಾಟಾ ಓಪನ್' ಅಖಿಲ ಭಾರತ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಎಸ್. ಅರವಿಂದ್, ಮನು ಆತ್ರಿ ಸಹಿತ ಒಟ್ಟು ಎಂಟು ಮಂದಿ ಶಟ್ಲ್ ಆಟಗಾರರು ಪ್ರಧಾನ ಸುತ್ತಿನ ಪಂದ್ಯಗಳಿಗೆ ಅರ್ಹತೆಯನ್ನು ಗಿಟ್ಟಿಸಿಕೊಂಡಿದ್ದಾರೆ.
ಗುರುವಾರ ನಡೆದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಆಂಧ್ರಪ್ರದೇಶದ ಎಸ್. ಅರವಿಂದ್ ಅವರು ಮಹಾರಾಷ್ಟ್ರದ ಅಮೈ ಜೋಶಿ ವಿರುದ್ಧ ಜಯ ಸಾಧಿಸಿದರು. ಪ್ರಬಲ ಪೈಪೋಟಿಯಿಂದ ಸಾಗಿದ ಪಂದ್ಯದಲ್ಲಿ ಜೋಶಿ ಉತ್ತಮ ಪ್ರತಿರೋಧ ಒಟ್ಟಿದರೂ ಅಂತಿಮವಾಗಿ ಅರವಿಂದ್ 17-21, 21-12, 21-9ರಲ್ಲಿ ಪಂದ್ಯವನ್ನು ವಶಪಡಿಸಿಕೊಂಡರು.
ನಿನ್ನೆ ನಡೆದ ಇನ್ನೊಂದು ಅರ್ಹತಾ ಸುತ್ತಿನ ಪಂದ್ಯದಲ್ಲಿ ಉತ್ತರ ಪ್ರದೇಶದ ಆತ್ರಿ ಅವರು 16-21, 21-18, 21-18ರಲ್ಲಿ ಮಧ್ಯಪ್ರದೇಶದ ಅಭಿಮನ್ಯು ಸಿಂಗ್ ಅವರನ್ನು ಪರಾಜಯಗೊಳಿಸಿ ಪ್ರಧಾನ ಸುತ್ತಿಗೆ ಲಗ್ಗೆಹಾಕಿದರು.
ಉಳಿದಂತೆ ಆಶಿಸ್ ಶರ್ಮಾ(ಚಂಢೀಗಡ್), ಅರುಣ್ ನಂದಲೂರಿ, ಸಿ. ಎಮ್ ಶಶೀಧರ್, ಕೆ ತನಿಷ್ಕಾ(ಎಲ್ಲರೂ ಆಂಧ್ರಪ್ರದೇಶ), ಪ್ರತೀಕ್ ಪಟೇಲ್(ಗುಜರಾತ್) ಮತ್ತು ಪವನ್ ಮಲೀಕ್(ಚತ್ತೀಸ್‌ಗಡ್) ಪ್ರಧಾನ ಸುತ್ತಿಗೆ ಅರ್ಹತೆ ಪಡೆದ ಇತರ ಆಟಗಾರರಾಗಿದ್ದಾರೆ.
'ಟಾಟಾ ಓಪನ್' ಬ್ಯಾಡ್ಮಿಂಟನ್ ಟೂರ್ನಿಯು ಪ್ರಕಾಶ್ ಪಡುಕೋಣೆಯವರ ಅಕಾಡೆಮಿ ಪ್ರಾಯೋಜಕತ್ವದಲ್ಲಿ ನಡೆಯುತ್ತಿದ್ದು, ಒಟ್ಟು ಬಹುಮಾನದ ಮೊತ್ತ ಐದು ಲಕ್ಷ ರೂಪಾಯಿಗಳಾಗಿದ್ದು, ಪುರುಷರ ಗಲ್ಸ್ ವಿಜೇತರಿಗೆ 75,000 ನಗದು ಬಹುಮಾನ ದೊರಕಲಿದೆ.
|