ಚಿನ್ನದ ಪದಕ ಪಡೆದಿದ್ದ ಬೀಜಿಂಗ್ ಒಲಿಂಪಿಕ್ಸ್‌ನ ಲಯವನ್ನು ಮರಳಿ ಪಡೆಯಲು ಸಾಧ್ಯವಾದರೆ 100 ಮೀಟರ್ ದೂರವನ್ನು ಕೇವಲ 9.5 ಸೆಕುಂಡುಗಳಲ್ಲಿ ಕ್ರಮಿಸಬಲ್ಲೆ ಎಂದು ಉಸೇನ್ ಬೋಲ್ಟ್ ಹೇಳಿಕೊಂಡಿದ್ದಾರೆ.
ಓಟಗಾರ ಜಮೈಕಾದ ಬೋಲ್ಟ್ 100 ಮೀಟರ್ ಓಟವನ್ನು 9.69 ಸೆಕೆಂಡ್‌ಗಳಲ್ಲಿ ಕ್ರಮಿಸಿ ನೂತನ ವಿಶ್ವದಾಖಲೆ ಬರೆದಿದ್ದರು.
ಫಾರ್ಮ್‌ನಲ್ಲಿರುವ ಅಮೆರಿಕನ್ ಓಟಗಾರ ಟೈಸನ್ ಗೇ ಬಗ್ಗೆ ತನಗೆ ಭೀತಿಯಿಲ್ಲ ಎಂದು ಹೇಳಿಕೊಂಡಿರುವ 22ರ ಹರೆಯದ ಜಮೈಕನ್, ಹಾಗೊಂದು ವೇಳೆ ತನ್ನ 9.69 ಸೆಕುಂಡುಗಳ ದಾಖಲೆಯನ್ನು ಟೈಸನ್ ಮೀರಿ ನಿಂತಲ್ಲಿ, ಮತ್ತೆ ಅದನ್ನು ಮುರಿಯುತ್ತೇನೆ ಎಂದಿದ್ದಾರೆ.
ಬೋಲ್ಟ್ ಸ್ವರ್ಣಪದಕ ಗೆದ್ದ ಬೀಜಿಂಗ್ ಒಲಿಂಪಿಕ್ಸ್ 100 ಮೀಟರ್ ವಿಭಾಗದಲ್ಲಿ ಟೈಸನ್ ಐದನೇ ಸ್ಥಾನ ಪಡೆದುಕೊಂಡಿದ್ದರು. ಜತೆಗೆ 200 ಮೀಟರ್ ಹಾಗೂ 4x400 ಮೀಟರ್ ರಿಲೇಯಲ್ಲಿ ಬೋಲ್ಟ್ ಕೂಡ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದರು.
"ನಾನು 9.5 ಸೆಕುಂಡುಗಳಲ್ಲಿ ಕ್ರಮಿಸುವ ಬಗ್ಗೆ ಯೋಚನೆ ಮಾಡಿದ್ದೇನೆ. ಆದರೆ ನಾನು ಈ ಹಿಂದೆ ಹೊಂದಿದ್ದ ಲಯವನ್ನು ಮರಳಿ ಕಂಡುಕೊಳ್ಳಲು ಸಾಕಷ್ಟು ಶ್ರಮದ ಅವಶ್ಯಕತೆಯಿದ್ದು, ಆ ದಿಕ್ಕಿನಲ್ಲಿ ಸಾಗುತ್ತಿದ್ದೇನೆ. ಪ್ರಸಕ್ತ ನಾನು ಹೇಳಿಕೊಳ್ಳುವಷ್ಟು ಫಾರ್ಮ್ ಹೊಂದಿಲ್ಲ. ಆದರೆ ನಿಧಾನವಾಗಿ ಎಲ್ಲವೂ ಸರಿ ಹೋಗಲಿದೆ. ಆ ಭರವಸೆ ನನಗಿದೆ" ಎಂದು ಬೋಲ್ಟ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
|