ಟಾಮಿ ಹಾಸ್ ಆಟವನ್ನು ಚಿಂದಿ ಮಾಡಿರುವ ಸ್ವಿಜರ್ಲೆಂಡ್ ಖ್ಯಾತ ರೋಜರ್ ಫೆಡರರ್ ವಿಂಬಲ್ಡನ್ ಫೈನಲ್ ಪ್ರವೇಶಿಸಿದ್ದು, ದಾಖಲೆಯ 15ನೇ ಗ್ರಾಂಡ್ ಸ್ಲಾಮ್ ಪ್ರಶಸ್ತಿ ಬಾಚಿಕೊಳ್ಳಲು ಉಳಿದಿರುವುದು ಕೇವಲ ಒಂದೇ ಒಂದು ಪಂದ್ಯ.
ಶುಕ್ರವಾರ ನಡೆದ ವಿಂಬಲ್ಡನ್ ಪುರುಷರ ಸಿಂಗಲ್ಸ್‌ನಲ್ಲಿ ಜರ್ಮನಿಯ ಟಾಮಿ ಹಾಸ್‌ರನ್ನು 7-6, 7-5, 6-3ರ ಅಂತರದಿಂದ ಎರಡನೇ ಶ್ರೇಯಾಂಕಿತ ಫೆಡರರ್ ಮಣಿಸಿದ್ದಾರೆ.
ಅಭಿಮಾನಿಗಳಿಂದ ತುಂಬಿ ತುಳುಕುತ್ತಿದ್ದ ಕ್ರೀಡಾಂಗಣದಲ್ಲಿ ಇಲ್ಲಿನ ಐದು ಬಾರಿಯ ಚಾಂಪಿಯನ್ ಫೆಡರರ್, 31ರ ಹರೆಯದ ಎದುರಾಳಿ ವಿರುದ್ಧ ಅದ್ಭುತ ಪ್ರದರ್ಶನ ನೀಡುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿದ್ದಾರೆ.
ಇದರೊಂದಿಗೆ 1922ರಲ್ಲಿ ಚಾಲೆಂಜ್ ರೌಂಡ್ ರದ್ದಾದ ನಂತರ ಸತತ ಏಳನೇ ಬಾರಿ ವಿಂಬಲ್ಡನ್ ಫೈನಲ್ ಪ್ರವೇಶಿಸಿದ ಮೊತ್ತ ಮೊದಲ ಆಟಗಾರ ಎಂಬ ಕೀರ್ತಿಗೂ ಫೆಡರರ್ ಪಾತ್ರರಾದರು.
ಹಾಸ್ ವಿರುದ್ಧ ಅವರು ಸುಮಾರು ಎರಡು ಗಂಟೆಗಳ ಕಾಲ ಹೋರಾಡಿದ್ದರು. ಹಾಸ್ ಪ್ರಬಲ ಪ್ರತಿರೋಧ ತೋರಿದರಾದರೂ ಯಾವುದೇ ಸೆಟ್ ಗೆದ್ದುಕೊಳ್ಳಲು ಅವರಿಗೆ ಸಾಧ್ಯವಾಗಿರಲಿಲ್ಲ.
ಫೆಡರರ್ ಈ ಬಾರಿಯ ವಿಂಬಲ್ಡನ್ ಗೆದ್ದುಕೊಂಡಲ್ಲಿ ಅವರು 15 ಗ್ರಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದುಕೊಂಡಂತಾಗುತ್ತದೆ ಮತ್ತು 14 ಪ್ರಶಸ್ತಿ ಗೆದ್ದಿರುವ ಪೀಟ್ ಸಾಂಪ್ರಸ್ ದಾಖಲೆಯನ್ನು ಮುರಿದಂತಾಗುತ್ತದೆ. ಫೆಡರರ್ ಆಸ್ಟ್ರೇಲಿಯಾ ಓಪನ್‌ನಲ್ಲಿ 2004, 2006, 2007, ಫ್ರೆಂಚ್ ಓಪನ್‌ನಲ್ಲಿ 2009, ಅಮೆರಿಕಾ ಓಪನ್‌ನಲ್ಲಿ 2004, 2005, 2006, 2007, 2008 ಹಾಗೂ ವಿಂಬಲ್ಡನ್ ಓಪನ್‌ನಲ್ಲಿ 2003, 2004, 2005, 2006, 2007ರಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.
ಮತ್ತೊಂದು ಸೆಮಿಫೈನಲ್‌ನಲ್ಲಿರುವ ಅಮೆರಿಕಾದ ಆರನೇ ಶ್ರೇಯಾಂಕಿತ ಆಂಡಿ ರಾಡಿಕ್ ಮತ್ತು ಬ್ರಿಟನ್‌ನ ಆಂಡಿ ಮುರ್ರೆ ನಡುವಿನ ವಿಜೇತರು ಫೈನಲ್‌ನಲ್ಲಿ ಫೆಡರರ್‌ರನ್ನು ಮುಖಾಮುಖಿಯಾಗಲಿದ್ದಾರೆ.
|