ಭಾರತದ ಭರವಸೆಯ ಯುವ ಆಟಗಾರ ಯೂಕಿ ಭಾಂಬ್ರಿ ಮತ್ತು ರೋಹನ್ ಗಜ್ಜರ್ ಇಲ್ಲಿ ನಡೆಯುತ್ತಿರುವ ಐಟಿಎಫ್ ಫ್ಯೂಚರ‌್ಸ್ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದ ಫೈನಲ್‌ಗೆ ಪ್ರವೇಶಿಸಿದ್ದಾರೆ. ಶುಕ್ರವಾರ ನಡೆದ ಮೊದಲ ಸೆಮಿ ಮುಖಾಮುಖಿಯಲ್ಲಿ ನಾಲ್ಕನೇ ಶ್ರೇಯಾಂಕದ ಯೂಕಿ ಭಾಂಬ್ರಿ ಅವರು ಎರಡನೇ ಶ್ರೇಯಾಂಕಿತ ಆಟಗಾರ ವಿಷ್ಣು ವರ್ಧನ್ ವಿರುದ್ಧ 6-3, 4-6, 7-6(4) ಅಂತರದ ಕಠಿಣ ಸವಾಲಿನಲ್ಲಿ ಜಯ ಸಾಧಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟರು. ಯೂಕಿ ಕಳೆದ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಎರಡು ಐಟಿಎಫ್ ಪ್ರಶಸ್ತಿ ಜಯಿಸಿಕೊಂಡಿದ್ದರು.ನಿನ್ನೆ ನಡೆದ ಮತ್ತೊಂದು ಸೆಮಿಫೈನಲ್ ಹೋರಾಟದಲ್ಲಿ ಆರನೇ ಶ್ರೇಯಾಂಕದ ರೋಹನ್ ಗಜ್ಜರ್ ಶ್ರೇಯಾಂಕ ರಹಿತ ಆಟಗಾರ ಆಶುತೋಷ್ ಅವರನ್ನು 6-3, 7-5 ಅಂತರದಿಂದ ಮಣಿಸಿದರು. ಗಜ್ಜರ್ ಕ್ವಾರ್ಟರ್ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಜಪಾನ್ ಆಟಗಾರ ಕಿಂಟೊ ತಾಕೆಚಿ ವಿರುದ್ಧ ಜಯಗಳಿಸಿದ್ದರು. |