ಭಾರತೀಯ ಪುರುಷರ ಹಾಕಿ ತಂಡದ ಕಪ್ತಾನ ಸಂದೀಪ್ ಸಿಂಗ್ ಅವರಿಗೆ ಹರಿಯಾಣ ಪೊಲೀಸ್ ಇಲಾಖೆಯಲ್ಲಿ ಉಪ ಅಧೀಕ್ಷಕರ ಹುದ್ದೆ ನೀಡಲಾಗುವುದೆಂದು ಮುಖ್ಯಮಂತ್ರಿ ಭುಪಿಂದರ್ ಸಿಂಗ್ ಹೂಡಾ ಘೋಷಿಸಿದ್ದಾರೆ.
"ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಹಾಕಿಯಲ್ಲಿನ ಸಾಧನೆಯನ್ನು ಪರಿಗಣಿಸಿ ಸಂದೀಪ್ ಅವರಿಗೆ ಡಿಎಸ್ಪಿ ಹುದ್ದೆಯನ್ನು ನೀಡಿ ಗೌರವಿಸಲಾಗುತ್ತಿದೆ" ಎಂದು ಅವರು ಹೇಳಿದರು.
ಮಾತು ಮುಂದುವರಿಸಿದ ಹೂಡಾ ಅವರು "ಹರಿಯಾಣ ಹಿಂದಿನಿಂದಲೇ ಕ್ರೀಡಾಪ್ರತಿಭೆಗಳಿಗೆ ಪ್ರೋತ್ಸಾಹವನ್ನು ನೀಡಿಕೊಂಡು ಬರುತ್ತಿದ್ದು, ಅದನ್ನೇ ಇಲ್ಲಿ ಅನುಸರಿಸಲಾಗುತ್ತದೆ" ಎಂದಿದ್ದಾರೆ.
ಅದೇ ಹೊತ್ತಿಗೆ ಭಾರತೀಯ ಕ್ರೀಡೆಯಲ್ಲಿ ಸಾಧನೆಗೈದ ಹಲವು ಕ್ರೀಡಾಪಟುಗಳಿಗೆ ಸರಕಾರವು ಬಹುಮಾನ ನೀಡಿ ಗೌರವಿಸಲಿರುವುದನ್ನೂ ಮುಖ್ಯಮಂತ್ರಿಯವರು ಪ್ರಕಟಿಸಿದ್ದಾರೆ. ಇವರಲ್ಲಿ ಕಜಾನ್‌ನಲ್ಲಿ ಭಾರತೀಯ ಮಹಿಳಾ ಹಾಕಿ ಚಾಂಪಿಯನ್‌ಷಿಪ್ ಗೆದ್ದ ತಂಡದ ಏಳು ಆಟಗಾರ್ತಿಯರು ಕೂಡಾ ಸೇರಿದ್ದಾರೆ.
ಪ್ರತೀ ಆಟಗಾರರಿಗೆ 50,000 ರೂಪಾಯಿಗಳಿಂದ ಒಂದು ಲಕ್ಷ ರೂಪಾಯಿವರೆಗೆ ನಗದು ಬಹುಮಾನ ನೀಡಲಾಗುತ್ತದೆ ಎಂದರು. ಭಾರತೀಯ ಮಹಿಳಾ ಹಾಕಿ ತಂಡದ ಸದಸ್ಯರಾದ ಜಸ್ದೀಪ್ ಕೌರ್, ಜಯದೀಪ್ ಕೌರ್, ರಾಣಿ ದೇವಿ, ರೀತೂ, ಸುರೇಂದರ್ ಕೌರ್, ಮಮತಾ ಕರಾಬ್, ಸವಿತಾರಿಗೆ ತಲಾ ಒಂದು ಲಕ್ಷ ರೂಪಾಯಿ ಬಹುಮಾನ ಪ್ರಕಟಿಸಲಾಗಿದೆ.
ಉಳಿದಂತೆ ಬಾಕ್ಸಿಂಗ್ ಪಟುಗಳಾದ ಜೈ ಭಗವಾನ್, ವಿಜೇಂದರ್ ಸಿಂಗ್, ದಿನೇಶ್ ಕುಮಾರ್, ಜಿತೇಂದರ್ ಕುಮಾರ್ ಮತ್ತು ಪರಮಜಿತ್‌ರವರಿಗೆ ತಲಾ 50 ಸಾವಿರ ರೂಪಾಯಿ ಬಹುಮಾನ ನೀಡಿ ಸನ್ಮಾನಿಸಲಾಗುತ್ತದೆ. ಮತ್ತೊಬ್ಬ ಬಾಕ್ಸರ್ ಸಂದೀಪ್‌ರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡಲಾಗುತ್ತದೆ.
|