ಮುಖ್ಯ ಪುಟ > ಕ್ರೀಡಾ ಜಗತ್ತು > ಇತರ ಕ್ರೀಡೆಗಳು > ಕ್ರೀಡಾಸುದ್ದಿ > ನಂ.1 ಈಗಲೂ ನನ್ನ ದೂರದ ಕನಸು: ಸೈನಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಂ.1 ಈಗಲೂ ನನ್ನ ದೂರದ ಕನಸು: ಸೈನಾ
ವಿಶ್ವ ರ್ಯಾಂಕಿಂಗ್ನಲ್ಲಿ ಆರನೇ ಸ್ಥಾನಕ್ಕೇರಿದ ಹೈದರಾಬಾದಿ
ವಿಶ್ವದ ಅಗ್ರ ಐದಕ್ಕಿಂತ ಕೇವಲ ಒಂದು ಸ್ಥಾನ ಹಿಂದಿದ್ದರೂ ನಂಬರ್ ವನ್ ಸ್ಥಾನಕ್ಕೇರಲು ಇನ್ನೂ ಕೆಲವು ವರ್ಷಗಳು ಬೇಕಾಗಬಹುದು ಎಂದಿರುವ ಸೈನಾ ನೆಹ್ವಾಲ್, ಅದಕ್ಕಾಗಿ ಸ್ಥಿರ ಪ್ರದರ್ಶನದ ಅಗತ್ಯವಿದೆ; ಹಾಗಾಗಿ ನನಗೀಗಲೂ ಅದು ದೂರದಲ್ಲಿರುವ ಕನಸು ಎಂದು ಹೇಳಿಕೊಂಡಿದ್ದಾರೆ.

"ನಂಬರ್ ವನ್ ಸ್ಥಾನಕ್ಕೇರಬೇಕೆಂಬ ಆಸೆ ನನಗೂ ಇದೆ. ಆದರೆ ಅದು ಈಗ ನಡೆಯಬೇಕೆಂಬುದು ನನ್ನ ಬಯಕೆಯಲ್ಲ. ಈಗಿರುವ ಉತ್ತಮ ಲಯವನ್ನು ಮುಂದುವರಿಸಿಕೊಂಡು ಇನ್ನಷ್ಟು ಸಾಧನೆ ಮಾಡಬೇಕಿದೆ. ಸ್ಥಿರ ಪ್ರದರ್ಶನ ನೀಡುವ ಮೂಲಕ ಬೆನ್ನು ಬೆನ್ನಿಗೆ ಟೂರ್ನಮೆಂಟ್‌ಗಳನ್ನು ಗೆಲ್ಲುವ ಅಗತ್ಯವಿದೆ" ಎಂದು ವಿಶ್ವದ ನಂ.6 ಆಟಗಾರ್ತಿಯಾಗಿ ಭಡ್ತಿ ಪಡೆದ ನಂತರ ಮಾತನಾಡುತ್ತಾ ಸೈನಾ ತಿಳಿಸಿದ್ದಾರೆ.

ಬ್ಯಾಡ್ಮಿಂಟನ್‌ನಲ್ಲಿ ಈ ರೀತಿ ಅಗ್ರ ರ‌್ಯಾಂಕಿಂಗ್ ಪಡೆದ ಭಾರತದ ಮೊದಲ ಆಟಗಾರ್ತಿ ಹಾಗೂ ಒಟ್ಟಾರೆ ಪುಲ್ಲೇಲಾ ಗೋಪಿಚಂದ್ ಮತ್ತು ಪ್ರಕಾಶ್ ಪಡುಕೋಣೆ ನಂತರದ ಮೂರನೇ ಕ್ರೀಡಾಪಟು ಎಂಬ ದಾಖಲೆಯನ್ನೂ ಸೈನಾ ಬರೆದಿದ್ದಾರೆ.

"ಒಂದು ಬಾರಿ ನಾನು ಅಗ್ರ ಐದರೊಳಗೆ ಪ್ರವೇಶಿಸಿದ ನಂತರ ಅಗ್ರ ಮೂರರೊಳಗೆ ತಲುಪುವ ದೃಷ್ಟಿಕೋನ ಹೊಂದುತ್ತೇನೆ. ಆ ನಂತರ ನನ್ನ ಗುರಿ ನಂಬರ್ ವನ್. ಆದರೆ ಈಗಲೇ ಆ ಕನಸನ್ನು ಕಾಣುವುದು ತೀರಾ ಕಲ್ಪನೆಯಾದೀತು. ಹಾಗಾಗಿ ನಾನು ನನ್ನ ಆಟದ ಕಡೆ ಹೆಚ್ಚು ಗಮನ ಕೇಂದ್ರೀಕರಿಸುವುದನ್ನು ಮಾತ್ರ ಯೋಚಿಸುತ್ತೇನೆ" ಎಂದು ಹೈದರಾಬಾದ್ ಆಟಗಾರ್ತಿ ತಿಳಿಸಿದರು.

ಇಂಡೋನೇಷಿಯನ್ ಓಪನ್ ಚಾಂಪಿಯನ್ ಮತ್ತೂ ಮಾತು ಮುಂದುವರಿಸುತ್ತಾ, ತಾನೀಗ ಅತ್ಯುತ್ತಮ ಫಾರ್ಮ್ ಹೊಂದಿದ್ದೇನೆ, ಆ ಮೂಲಕ ಅಗ್ರ ಶ್ರೇಯಾಂಕಿತ ಆಟಗಾರ್ತಿಯನ್ನು ಮಣಿಸಿ ಆತ್ಮವಿಶ್ವಾಸವನ್ನು ಇನ್ನೂ ಹೆಚ್ಚಿಸಿಕೊಳ್ಳಬೇಕಿದೆ ಎಂದಿದ್ದಾರೆ.

"ಈಗೀಗ ನಾನು ಅತ್ಯುತ್ತಮ ಆಟದ ಮೂಲಕ ಪಂದ್ಯಗಳನ್ನು ಗೆಲ್ಲುತ್ತಿದ್ದೇನೆ. ಆರನೇ ಸ್ಥಾನವನ್ನು ತಲುಪಿರುವುದು ನನಗೆ ಸಂತೋಷ ತಂದಿದೆ. ಆದರೆ ನನ್ನ ಗುರಿ ಅಗ್ರ ಶ್ರೇಯಾಂಕಿತ ಆಟಗಾರ್ತಿಯರನ್ನು ಮಣಿಸುವುದು. ಆ ರೀತಿ ಸ್ಥಿರ ಪ್ರದರ್ಶನ ನೀಡುವುದು ಸಾಧ್ಯವಾದರೆ ರ‌್ಯಾಂಕಿಂಗ್ ತನ್ನಿಂತಾನೇ ಮೇಲಕ್ಕೇರುತ್ತದೆ" ಎಂದು ವಿವರಿಸಿದರು.

ಇಂಡೋನೇಷಿಯನ್ ಓಪನ್ ಗೆದ್ದ ನಂತರ ಸೈನಾರನ್ನು ಗೋಪಿಚಂದ್ ಮತ್ತು ಪಡುಕೋಣೆ ಜತೆ ತಾಳೆ ಹಾಕುತ್ತಿರುವುದು ಸರಿಯಲ್ಲ ಎಂದೂ ಇದೇ ಸಂದರ್ಭದಲ್ಲಿ ಆಕೆ ತಿಳಿಸಿದ್ದಾರೆ.

"ಗೋಪಿ ಸರ್ ಮತ್ತು ಪ್ರಕಾಶ್ ಸರ್ ಬ್ಯಾಡ್ಮಿಂಟನ್ ದಂತಕತೆಗಳು. ಅವರು ತಮ್ಮ ಜೀವನದಲ್ಲಿ ಶ್ರೇಷ್ಠ ಸಾಧನೆಯನ್ನು ಮಾಡಿದ್ದಾರೆ. ನಾನೀಗಷ್ಟೇ ಆರಂಭಿಸಿದ್ದೇನೆ. ಹಾಗಾಗಿ ನನ್ನನ್ನು ಅಂತಹ ಶ್ರೇಷ್ಠರ ಜತೆ ಹೋಲಿಸುವುದು ಸರಿಯಲ್ಲ. ಅವರಿಬ್ಬರಿಂದಲೂ ನಾನು ಸಾಕಷ್ಟು ಕಲಿತುಕೊಂಡಿದ್ದೇನೆ. ತಮ್ಮ ಮಾತುಗಳಿಂದ ಹಾಗೂ ಇತರ ರೀತಿಯಿಂದ ಅವರು ನನ್ನನ್ನು ಸಾಕಷ್ಟು ಪ್ರೋತ್ಸಾಹಿಸಿದ್ದಾರೆ. ನಾನು ಕೂಡ ನನ್ನ ಜೀವನದಲ್ಲಿ ಅದ್ಭುತ ಸಾಧನೆಗಳನ್ನು ಮಾಡುವ ಗುರಿಯಿಟ್ಟುಕೊಂಡಿದ್ದೇನೆ" ಎಂದಿದ್ದಾರೆ ವಿಶ್ವದ ನಂ.6 ಆಟಗಾರ್ತಿ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಾನಿಯಾ ಮತ್ತು ನನ್ನದು ಉತ್ತಮ ಆಟ: ಸೈನಾ
ಸೆಂಟ್ರಲ್ ಬ್ಯಾಂಕ್ ಐಟಿಎಫ್ ಯೂಕಿ ಮಡಿಲಿಗೆ
ಸಂದೀಪ್ ಸಿಂಗ್ ಈಗ ಪೊಲೀಸ್ ಅಧೀಕ್ಷಕ!
ಏಷ್ಯನ್ ಯುವ ಕ್ರೀಡಾಕೂಟ: ಭಾರತಕ್ಕೆ 10ನೇ ಪದಕ
ಐಟಿಎಫ್‌ ಟೆನಿಸ್‌: ಯೂಕಿ, ಗಜ್ಜರ್ ಫೈನಲ್‌ಗೆ
ಫೆಡೆಕ್ಸ್-ರಾಡಿಕ್, ವಿಲಿಯಮ್ಸ್: ಯಾರ ಕೊರಳಿಗೆ ಮಾಲೆ?