ವಿಲಿಯಮ್ಸ್ ಸಹೋದರಿಯರ ನಡುವಿನ ಕದನದಲ್ಲಿ ಅಕ್ಕ ವೀನಸ್‌ರನ್ನು 7-6(7/3), 6-2ರಿಂದ ಮಣಿಸಿರುವ ಸೆರೆನಾ ಮೂರನೇ ಬಾರಿ ವಿಂಬಲ್ಡನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.ಆರಂಭಿಕ ಸೆಟ್‌ನ ಎಂಟನೇ ಗೇಮ್‌ನಲ್ಲಿ ವೀನಸ್ ಎರಡು ಬ್ರೇಕ್ ಪಾಯಿಂಟ್ ಅವಕಾಶಗಳನ್ನು ಪಡೆದಿದ್ದರು. ಆದರೆ ತಪ್ಪಾದ ಗುರಿ ಮತ್ತು ಹೊಡೆತಗಳಿಂದ ಆಕೆ ಆರಂಭಿಕ ಸೆಟ್ ಕಳೆದುಕೊಳ್ಳಬೇಕಾಯಿತು. ಟೈ ಬ್ರೇಕರ್‌ನಲ್ಲೂ 7-3ರಿಂದ ಸೆರೆನಾ ಗೆಲುವು ಪಡೆದರು. ವಿಂಬಲ್ಡನ್‌ನಲ್ಲಿ 34 ಸತತ ಸೆಟ್ ವಿಜಯಗಳ ದಾಖಲೆ ಬರೆಸಿಕೊಂಡಿದ್ದ ವೀನಸ್ ಆರಂಭಿಕ ಸೆಟ್ ಸೋಲುವ ಮೂಲಕ 2007ರ ವಿಂಬಲ್ಡನ್ ಮೂರನೇ ಸುತ್ತಿನಲ್ಲಿ ಆರಂಭಿಸಿದ್ದ ದಾಖಲೆಯನ್ನು ಅಳಿಸಿ ಹಾಕಿದರು.ಎರಡನೇ ಸೆಟ್‌ನಲ್ಲಿ ಸಹೋದರಿ ವಿರುದ್ಧ ಪಾರಮ್ಯ ಸಾಧಿಸಿದ ಸೆರೆನಾ ಹೆಚ್ಚಿನ ಪ್ರಯಾಸ ಪಡದೆ ಸುಲಭವಾಗಿ ಸೆಟ್ ಗೆಲ್ಲುವ ಮೂಲಕ ಪ್ರಶಸ್ತಿಗೆ ಭಾಜನರಾದರು.ಎರಡನೇ ಶ್ರೇಯಾಂಕಿತೆ ಸೆರೆನಾ ಈ ಹಿಂದೆ 2002 ಮತ್ತು 2003ರ ವಿಂಬಲ್ಡನ್‌ನಲ್ಲಿ ವೀನಸ್‌ರನ್ನು ಮಣಿಸಿದ್ದರು. ಆದರೆ ಕಳೆದ ವರ್ಷ ಹಿರಿಯ ಸಹೋದರಿಯೆದುರು ಸೆರೆನಾ ಸೋಲುಂಡು ರನ್ನರ್-ಅಪ್ ಸ್ಥಾನ ಪಡೆದಿದ್ದರು.ಇದರೊಂದಿಗೆ ಗ್ರಾಂಡ್ ಸ್ಲಾಮ್ ಫೈನಲ್‌ಗಳಲ್ಲಿ ವೀನಸ್ ವಿರುದ್ಧ 6-2ರ ಜಯ ದಾಖಲೆಯನ್ನು ಸೆರೆನಾ ಬರೆದಿದ್ದು, ಒಟ್ಟಾರೆ 11 ಗ್ರಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದುಕೊಂಡಂತಾಗಿದೆ. |