ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಬ್ರಿಟನ್ ರಾಣಿ ಎಲಿಜಬೆತ್-II ಅವರಿಂದ ರಿಲೇ ದಂಡ ಸ್ವೀಕರಿಸುವ ಮೂಲಕ ಮುಂದಿನ ವರ್ಷ ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್‌ಗೆ ಔಪಚಾರಿಕ ಚಾಲನೆ ನೀಡಲಾಯಿತು.
ದಂಡ ಸ್ವೀಕಾರ ಸಮಾರಂಭದಲ್ಲಿ ಭಾರತದ ಸಂಸ್ಕೃತಿಯ ಪ್ರತಿಬಿಂಬ ಎದ್ದು ಕಾಣುತ್ತಿತ್ತು. ಆ ಸಂದರ್ಭ ಮಕ್ಕಳು ಋಗ್ವೇದವನ್ನು ಪಠಿಸಿದರು. ಗೇಮ್ಸ್ ದಂಡ ಇನ್ನು 70 ದೇಶಗಳನ್ನು ಸಂಚರಿಸಲಿದ್ದು, ಜೂನ್ 25ರಂದು ಭಾರತ ಪ್ರವೇಶಿಸಲಿದೆ. ನಂತರ ಆತಿಥ್ಯ ತಾಣವಾದ ದೆಹಲಿಗೆ ಅಕ್ಟೋಬರ್ 3ರಂದು ತಲುಪಲಿದೆ.
ಗೇಮ್ಸ್ ದಂಡದ ವಿಶೇಷತೆ... ಎರಡು ಕಿಲೋಗ್ರಾಂ ತೂಕವುಳ್ಳ ದಂಡದ ಉದ್ದ 664 ಮಿಲಿ ಮೀಟರ್. ದಂಡದ ವಿಶೇಷತೆಯೆಂದರೆ ಮೊದಲ ಬಾರಿಗೆ ಆಧುನಿಕ ಜಿಪಿಎಸ್ ತಂತ್ರಜ್ಞಾನವನ್ನು ಆಳವಡಿಸಲಾದ ದಂಡದಲ್ಲಿ ಕ್ಯಾಮರಾ ಆಳವಡಿಸಲಾಗಿದೆ. ಈ ಮೂಲಕ ದಂಡ ಎಲ್ಲಿ ಸಂಚರಿಸುತ್ತಿದೆ ಎಂಬುದನ್ನು ತಿಳಿಯಬಹುದಾಗಿದೆ. ಅಲ್ಲದೆ ದಂಡ ಯಾವ ದೇಶದಲ್ಲಿ ಸಂಚರಿಸುತ್ತದೋ ಆ ದೇಶದ ಧ್ವಜವು ಕೃತಕ ಕಿರಣಗಳಲ್ಲಿ ಪ್ರತಿಫಲಿಸಲಿದೆ.
ಅಷ್ಟೇ ಅಲ್ಲದೆ ದಂಡದ ಒಳಗೆ ರಾಣಿ ಎಲಿಜಬೆತ್‌ರ ಸಂದೇಶ ಅಡಗಿದ್ದು, ಅದನ್ನು ದೆಹಲಿಯಲ್ಲಿ ಉದ್ಘಾಟನಾ ಸಮಾರಂಭದ ವೇಳೆ ಓದಲಾಗುತ್ತದೆ.
ಸಮಾರಂಭದಲ್ಲಿ ಭಾರತೀಯ ಮಕ್ಕಳ ಮಂತ್ರ ಜಪದೊಂದಿಗೆ ವಿಶ್ವ ಶಾಂತಿಗಾಗಿ ಪ್ರಾರ್ಥನೆಯನ್ನು ಕೂಡಾ ಮಾಡಲಾಯಿತು. ಇದಕ್ಕಿಂತ ಮೊದಲು ಯುವತಿಯರು ಭಾರತೀಯ ಸಂಸ್ಕೃತಿಯನ್ನು ಪ್ರತಿಪಾದಿಸಿದರು.
ಇಡೀ ವಿಶ್ವವೇ ಎದ್ದು ನೋಡುತ್ತಿರುವ ಸಮಾರಂಭದಲ್ಲಿ ಭಾರತೀಯ ಸಂಸ್ಕೃತಿಯು ಉನ್ನತಿಗೇರಿತ್ತು.
ಬಕ್ಕಿಂಗ್‌ಹ್ಯಾಮ್ ಅರಮನೆಯಲ್ಲಿ ಜರುಗಿದ ಈ ಭವ್ಯ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್‌ರವರು ಲಂಡನ್ ಮಹಾರಾಣಿ ಎಲಿಜಬೆತ್‌ರಿಂದ ರಿಲೇ ದಂಡವನ್ನು ಸ್ವೀಕರಿಸಿದರು. ನಂತರ ದಂಡವನ್ನು ರಾಷ್ಟ್ರಪತಿಯವರು ಕ್ರೀಡಾ ಸಚಿವ ಎಂ.ಎಸ್. ಗಿಲ್ ಅವರಿಗೆ ಹಸ್ತಾಂತರಿಸಿದರು.
ಗಿಲ್ ಅವರಿಂದ ದಂಡವು ಕಾಮನ್‌ವೆಲ್ತ್ ಗೇಮ್ಸ್ ಸಂಘಟನಾ ಸಮಿತಿ ಅಧ್ಯಕ್ಷ ಸುರೇಶ್ ಕಲ್ಮಾಡಿ ಕೈ ಸೇರಿತು. ಅದನ್ನು ಅವರು ಬೀಜಿಂಗ್ ಒಲಿಂಪಿಕ್ಸ್ ಚಿನ್ನ ಪದಕ ವಿಜೇತ ಭಾರತದ ಗೋಲ್ಡನ್ ಬಾಯ್ ಶೂಟರ್ ಅಭಿನವ್ ಬಿಂದ್ರಾರಿಗೆ ಹಸ್ತಾಂತರಿಸಿದರು. ಇದರೊಂದಿಗೆ ರಿಲೇ ಓಟದ ಆರಂಭವಾಯಿತು.
ಹಲವು ದೇಶಗಳನ್ನು ಸುತ್ತಲಿದೆ... ಗೇಮ್ಸ್ ದಂಡವು ಮುಂದಿನ 340 ದಿನಗಳಲ್ಲಿ ಕಾಮನ್‌ವೆಲ್ತ್ ರಾಷ್ಟ್ರಗಳಲ್ಲಿ 1.90 ಲಕ್ಷ ಕಿ.ಮೀ. ದೂರವನ್ನು ಸಂಚರಿಸಲಿದೆ. ಭಾರತದಲ್ಲಿ ದಂಡವು 20 ಸಾವಿರ ಕಿ.ಮೀ. ಸಂಚರಿಸಲಿದೆ. ದಂಡ ಜೂನ್ 25ರಂದು ವಾಘಾ ಗಡಿ ಮೂಲಕ ಭಾರತ ಪ್ರವೇಶಿಸುತ್ತದೆ.
ಅಂತಿಮವಾಗಿ ಭಾರತಕ್ಕೆ ಪ್ರವೇಶಿಸಿದ ದಂಡವು ದೇಶದೆಲ್ಲೆಡೆ 100 ದಿನಗಳ ಕಾಲ ಸುತ್ತಾಡಲಿದೆ. 2010 ಅಕ್ಟೋಬರ್ 3ರಂದು ಆತಿಥ್ಯ ತಾಣವಾದ ನವದೆಹಲಿ ತಲುಪಿಲಿದೆ.
ಈ ಮೂಲಕ ಕಾಮನ್‌ವೆಲ್ತ್ ಇತಿಹಾಸದಲ್ಲೇ ಆತಿಥ್ಯ ದೇಶದಲ್ಲಿ ಅತ್ಯಂತ ಹೆಚ್ಚು ದೂರ ಸಂಚರಿಸಿದ ಗೇಮ್ಸ್ ದಂಡವೆಂಬ ಖ್ಯಾತಿಗೆ ಪಾತ್ರವಾಗಲಿದೆ.
ಭಾರತದ 27ರಾಜ್ಯ, 7 ಕೇಂದ್ರಡಾಳಿತ ಪ್ರದೇಶದಲ್ಲಿ ದಂಡ ಸಂಚರಿಸಲಿದೆ. ಇದು ಕಳೆದ ಬಾರಿ ಮೆಲ್ಬೋರ್ನ್‌ನಲ್ಲಿ ನಡೆದ ಗೇಮ್ಸ್ ದಂಡ ಯಾತ್ರೆಗಿಂತ ಎರಡು ಪಟ್ಟು ಹೆಚ್ಚು.
ದಂಡ ಸ್ವೀಕಾರ ಸಮಾರಂಭದಲ್ಲಿ ಭಾರತದ 11 ಕ್ರೀಡಾಳುಗಳು ಹಾಜರಿದ್ದರು. ಬಿಂದ್ರಾ ಜೊತೆ ಬೀಜಿಂಗ್ ಒಲಿಂಪಿಕ್ ಕಂಚಿನ ಪದಕ ವಿಜೇತ ಸುಶೀಲ್ ಕುಮಾರ್, ವಿಜೇಂದರ್ ಸಿಂಗ್ ಹಾಗೂ ಮಿಲ್ಖಾ ಸಿಂಗ್, ಒಲಿಂಪಿಯನ್ ಗುರ್‌ಬಚ್ಚನ್ ಸಿಂಗ್ ರಾಂಧವಾ, ಪ್ರಕಾಶ್ ಪಡುಕೋಣೆ, ಕಪಿಲ್ ದೇವ್, ಕರಣಂ ಮಲ್ಲೇಶ್ವರಿ, ಸಾನಿಯಾ ಮಿರ್ಜಾ, ಮಿಶಾ ಗ್ರೇವೆಲ್, ದಿಲೀಪ್ ಟಿರ್ಕಿ ಹಾಜರಿದ್ದರು. ಇಂಗ್ಲೆಂಡ್‌ನ ಕ್ರಿಕೆಟಿಗ ಮೋಂಟಿ ಪನೇಸರ್ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.