ವಿಶ್ವ ಚಾಂಪಿಯನ್ ಭಾರತದ ವಿಶ್ವನಾಥನ್ ಆನಂದ್ ಅವರು ರ‌್ಯಾಪಿಡ್ ಚೆಸ್ ಟೂರ್ನಮೆಂಟ್‌ನಲ್ಲಿ ಎದುರಾಳಿ ಮಾಜಿ ವಿಶ್ವ ಚಾಂಪಿಯನ್ ರಷ್ಯಾದ ಅನತೊಲಿ ಕಾರ್ಪೋವ್ ವಿರುದ್ಧ ಆರಂಭಿಕ ಮುನ್ನಡೆ ಪಡೆದಿದ್ದಾರೆ.
ಮೊದಲ ಪಂದ್ಯದಲ್ಲಿ ಗೆಲುವು ಪಡೆದ ಗ್ರ್ಯಾಂಡ್‌ಮಾಸ್ಟರ್ ಆನಂದ್ ಎರಡನೇ ಪಂದ್ಯದಲ್ಲಿ ಡ್ರಾ ಸಾಧಿಸಿದರು. ಈ ಮೂಲಕ ನಾಲ್ಕು ಗೇಮ್‌ಗಳ ಪಂದ್ಯದಲ್ಲಿ ಆನಂದ್ 1.5-0.5 ಅಂತರದ ಮುನ್ನಡೆ ಸಾಧಿಸಿದ್ದಾರೆ. ಟೂರ್ನಿಯ ಉಳಿದೆರಡು ಪಂದ್ಯಗಳು ಅಜಾಸಿಯೊದಲ್ಲಿ ನಡೆಯಲಿದೆ.
ಮೊದಲ ಪಂದ್ಯದಲ್ಲಿ ಬಿಳಿಕಾಯಿಗಳೊಂದಿಗೆ ಆಡಿದ ಆನಂದ್ ಎದುರಾಳಿ ಮೇಲೆ ಸವಾರಿ ಮಾಡಿದರು. ಆನಂದ್ ಅವರು ಮೊದಲ ಪಂದ್ಯವನ್ನು 46 ನಡೆಗಳಲ್ಲಿ ವಶಪಡಿಸಿಕೊಂಡರು.
ಎರಡನೇ ಪಂದ್ಯದಲ್ಲಿ ಕಪ್ಪು ಕಾಯಿಗಳೊಂದಿಗೆ ಆಡಿದ ಆನಂದ್ 42 ನಡೆಗಳ ಬಳಿಕ ಡ್ರಾ ಸಾಧಿಸಿದರು. ಆರಂಭದಲ್ಲಿ ಕಾರ್ಪೋವ್ ಮುನ್ನಡೆ ಪಡೆದರೂ ಉತ್ತಮ ಆಟ ಪ್ರದರ್ಶನ ನೀಡಿದ ಆನಂದ್ ಸಮತೋಲನ ಕಾಪಾಡಿಕೊಂಡರು.