ಭಾರತದ ಉದ್ಯಮಿ ದಿಗ್ಗಜ ವಿಜಯ್ ಮಲ್ಯ ಒಡೆತನದ ಫೋರ್ಸ್ ಇಂಡಿಯಾ, ಪ್ರಸಕ್ತ ಫಾರ್ಮುಲಾ ಒನ್ ಋತುವಿನ ಅಂತ್ಯದಲ್ಲಿ ಒಟ್ಟು 13 ಅಂಕಗಳೊಂದಿಗೆ 9ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಫೋರ್ಸ್ ಇಂಡಿಯಾದ ಚಾಲಕರಾದ ವಿಟಾನ್‌ಟೋನಿಯೊ ಲಿಯುಜಿ ಹಾಗೂ ಆಡ್ರಿಯಾನ್ ಸುತಿಲ್ ಅವರು ಭಾನುವಾರ ಅಂತ್ಯಗೊಂಡ ವರ್ಷದ ಕೊನೆಗೆ ಅಬುದಾಬಿ ಗ್ರಾಂಡ್ ಪ್ರಿ ಫಾರ್ಮಲಾ ಒನ್ ಚಾಂಪಿಯನ್‌ಶಿಪ್‌ನಲ್ಲಿ ಕ್ರಮವಾಗಿ 15 ಹಾಗೂ 17ನೇ ಸ್ಥಾನಕ್ಕೆ ತೃಪ್ತಿಪಟ್ಟರು.
17ನೇಯವರಾಗಿ ಸ್ಪರ್ಧೆ ಆರಂಭಿಸಿದ್ದ ಚಾಲಕ ಲಿಯುಜಿ ಎರಡು ಸ್ಥಾನ ಉತ್ತಮಪಡಿಸುವ ಮೂಲಕ 15ನೇಯವರಾಗಿ ಪೂರ್ಣಗೊಳಿಸಿದರು. ಅದೇ ರೀತಿ ಒಂದು ಸ್ಥಾನ ಮೇಲೆರಿದ ಸುತಿಲ್ 17ನೇಯವರಾಗಿ ಗುರಿ ತಲುಪಿದ್ದರು.
ಅದೇ ವೇಳೆ ಫೋರ್ಸ್ ಇಂಡಿಯಾ ಮಾಜಿ ಚಾಲಕ ಗಿಯಾನ್ ಕಾರ್ಲೊ ಫಿಸಿಕೆಲಾ ಅವರು ಲಿಯುಜಿ ಹಾಗೂ ಸುತಿಲ್‌ರ ನಡುವೆ ಅಂದರೆ 16ನೇಯವರಾಗಿ ಗುರಿ ಮುಟ್ಟಿದರು.
ಪ್ರಸಕ್ತ ಋತುವಿನಲ್ಲಿ ಒಟ್ಟು 13 ಅಂಕ ಸಂಪಾದಿಸಿರುವ ಪೋರ್ಸ್ ಇಂಡಿಯಾ, ಪಟ್ಟಿಯಲ್ಲಿ ಒಂಬತ್ತನೆ ಸ್ಥಾನ ಗಿಟ್ಟಿಸಿಕೊಂಡಿದೆ.
ಫೋರ್ಸ್ ಇಂಡಿಯಾದ ಒಟ್ಟು 13 ಅಂಕಗಳಲ್ಲಿ ಎಂಟು ಪಾಯಿಂಟ್‌ಗಳನ್ನು ಮಾಜಿ ಚಾಲಕ ಫಿಸಿಕೆಲಾ ಪಡೆದಿದ್ದರು. ಅವರು ಅಗಸ್ಟ್ 30ರಂದು ನಡೆದ ಬೆಲ್ಜಿಯಂ ಗ್ರಾಂಡ್ ಪ್ರಿ ಚಾಂಪಿಯನ್‌ಶಿಪ್‌ನಲ್ಲಿ ಭರ್ಜರಿ ಪ್ರದರ್ಶನ ತೋರಿದ್ದರು. ತದಾನಂತರ ಫಿಸಿಕೆಲಾ ಇಟಲಿಯ ಫೆರಾರಿ ತಂಡವನ್ನು ಸೇರಿಕೊಂಡಿದ್ದರು.
ಇಟಲಿ ಗ್ರಾಂಡ್ ಪ್ರಿ ಚಾಂಪಿಯನ್‌ಶಿಪ್‌ನಲ್ಲಿ ನಾಲ್ಕನೇಯವರಾಗಿ ತಲುಪುವ ಮೂಲಕ ಬಾಕಿ ಉಳಿದ ಐದು ಪಾಯಿಂಟ್‌ಗಳನ್ನು ಸುತಿಲ್ ಪಡೆದಿದ್ದರು. ಆದರೆ ಫಿಸಿಕೆಲಾ ನಿರ್ಗಮನದ ನಂತರ ಐದು ರೇಸ್‌ಗಳಲ್ಲಿ ಫೋರ್ಸ್ ಇಂಡಿಯಾವನ್ನು ಮುನ್ನಡೆಸಿದ್ದ ಲಿಯುಜಿ ಇದುವರೆಗೆ ಪಾಯಿಂಟ್ ಗಳಿಸುವಲ್ಲಿ ವಿಫಲರಾಗಿದ್ದಾರೆ.