ನಾಲ್ಕು ಬಾರಿಯ ವಿಶ್ವ ಚಾಂಪಿಯನ್ ಎಂ.ಸಿ. ಮೇರಿ ಕೋಮ್ ಸೇರಿದಂತೆ ಭಾರತದ ನಾಲ್ವರು ಮಹಿಳಾ ಬಾಕ್ಸರ್‌ಗಳು ವಿಯೆಟ್ನಾಂನಲ್ಲಿ ನಡೆಯುತ್ತಿರುವ ಏಷಿಯನ್ ಒಳಾಂಗಣ ಕ್ರೀಡಾಕೂಟದ ಬಾಕ್ಸಿಂಗ್ ಚಾಪಿಯನ್‌ಶಿಪ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿದ್ದಾರೆ.
ಸೋಮವಾರ ನಡೆದ 46 ಕೆ.ಜಿ. ವಿಭಾಗದ ಸೆಮಿಫೈನಲ್ ಹೋರಾಟದಲ್ಲಿ ಮೇರಿ ಕೋಮ್ ಎದುರಾಳಿ ಫಿಲಿಪ್ಪೀನ್ಸ್‌ನ ಜೋಸಿ ಗಬುಕೊರನ್ನು 7-3ರ ಅಂತರದಲ್ಲಿ ಮಣಿಸುವ ಮೂಲಕ ಪದಕ ಖಚಿತಪಡಿಸಿಕೊಂಡರು.
ನವೆಂಬರ್ 4ರಂದು ನಡೆಯುವ ಫೈನಲ್‌ನಲ್ಲಿ ಮೇರಿ, ಸ್ಥಳಿಯ ಆಟಗಾರ್ತಿ ಹಾವೊ ನುಯಿ ತಿ ರನ್ನು ಎದುರಿಸಲಿದ್ದಾರೆ.
ಅದೇ ವೇಳೆ 51ಕೆ.ಜಿ. ವಿಭಾಗದಲ್ಲಿ ಭಾರತದ ಚೋಟು ಲೌರಾ ನಿರಾಸೆ ಅನುಭವಿಸಿದರು. ಅವರು 0-6ರಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನ ಬೆಳ್ಳಿ ಪದಕ ವಿಜೇತೆ ಫಿಲಿಫೈನ್ಸ್‌ನ ಅನ್ನಿ ಅಲ್ಬೇನಿಯಾ ಎದುರು ಸೋತರು.
ಆದರೆ 54 ಕೆ.ಜಿ. ವಿಭಾಗದಲ್ಲಿ ಸರಿತಾ ದೇವಿ ಸ್ಥಳೀಯ ಆಟಗಾರ್ತಿ ಲಿನ್ ದೊನ್ ತಿರನ್ನು 25-3ರ ಅಂತರದಲ್ಲಿ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟರು.
57 ಕೆ.ಜಿ. ವಿಭಾಗದ ಮತ್ತೊಂದು ಅಂತಿಮ ನಾಲ್ಕರ ಘಟ್ಟದ ಹೋರಾಟದಲ್ಲಿ ಎನ್. ಉಷಾ ವಿಯೆಟ್ನಾಂನ ಚುಂಗ್ ನೊರನ್ನು 3-2ರಲ್ಲಿ ಮಣಿಸಿ ಪದಕ ಖಚಿತಪಡಿಸಿದರು. ಮತ್ತೊಂದೆಡೆ 64 ಕೆ.ಜಿ ವಿಭಾಗದಲ್ಲಿ ಕವಿತಾ ಗೋಯತ್ ಕೂಡಾ ಫೈನಲ್‌ಗೆ ಪ್ರವೇಶಿಸಿದ್ದಾರೆ.