ಅಂತಾರಾಷ್ಟ್ರೀಯ ಉದ್ದೀಪನಾ ದ್ರವ್ಯ ವಿರೋಧಿ ಘಟಕ (ವಾಡಾ)ವು ಟೆನಿಸ್ ದಿಗ್ಗಜ ಆಂದ್ರೆ ಅಗಾಸ್ಸಿ ಅವರ ಡ್ರಗ್ಸ್ ಪ್ರಕರಣದ ಕುರಿತಂತೆ ತನಿಖೆ ನಡೆಸುವಂತೆ ವೃತ್ತಿಪರ ಟೆನಿಸ್ ಮಂಡಳಿ(ಎಟಿಪಿ)ಗೆ ಸೂಚನೆ ನೀಡಿದೆ.
ವಾಡಾದ ಮಹಾ ನಿರ್ದೇಶಕ ಡೇವಿಡ್ ಹೋಮಾನ್ ಈ ಸಂಬಂಧ ತನಿಖೆ ನಡೆಸಬೇಕೆಂದು ಎಟಿಪಿಗೆ ಬರೆದಿರುವ ಪತ್ರದಲ್ಲಿನ ಅಂಶಗಳನ್ನು ಬಹಿರಂಗಪಡಿಸಲು ನಿರಾಕರಿಸಿದರಾದರೂ, ಗಣನೆಗೆ ತೆಗೆದುಕೊಳ್ಳಬಹುದಾದ ಪ್ರತಿಕ್ರಿಯೆಯನ್ನು ತಾನು ನಿರೀಕ್ಷಿಸುವುದಾಗಿ ಹೇಳಿದ್ದಾರೆ.
ಯಾವುದೇ ಕಳಂಕವಿಲ್ಲದ ಅಥ್ಲೆಟ್‌ಗಳನ್ನು ರಕ್ಷಿಸುವುದೇ ನಮ್ಮ ಕರ್ತವ್ಯ. ಅಲ್ಲದೆ ಅಗಾಸ್ಸಿಯವರಂತಹ ಪ್ರಕರಣಗಳು ಭವಿಷ್ಯ ಮರುಕಳಿಸಬಾರದು. ನಾವೀಗ ಇದರ ಬಗ್ಗೆ ವಿಚಾರಣೆಗೆ ತೆಗೆದುಕೊಳ್ಳದಿದ್ದರೆ ಯಾರಾದರು ಬಂದು ಈ ಪ್ರಕರಣದಲ್ಲಿ ನೀವೇನು ಮಾಡಿದಿರಿ ಎಂದು ಪ್ರಶ್ನಿಸಲಾರರೇ ಎಂದು ಹೋಮಾನ್ ವಿವರಿಸಿದ್ದಾರೆ.
ಅಗಾಸ್ಸಿ ಆತ್ಮಚರಿತ್ರೆ 'ಓಪನ್'ನಲ್ಲಿ ತಾನು ನಿಷೇಧಿತ ಮದ್ದು ಕ್ರಿಸ್ಟಲ್ ಮೆತ್ ಸೇವಿಸಿರುವುದನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೆ ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ಅವರು ಪ್ರಕರಣದಿಂದ ಬಚಾವಾಗಲು ಅಧಿಕಾರಿಗಳಿಗೆ ಆಮಿಷವೊಡ್ಡಿ ತನ್ನ ವಶಕ್ಕೆ ತೆಗೆದುಕೊಂಡ ಬಗ್ಗೆ ಆತ್ಮಚರಿತ್ರೆಯಲ್ಲಿ ಬರೆದಿದ್ದರು.
ವಾಡಾದಿಂದ ಪತ್ರ ಬಂದಿರುವುದನ್ನು ಎಟಿಪಿ ದೃಢೀಕರಿಸಿದೆ. ಆದರೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.