ಉತ್ತಮ ಆಟ ಪ್ರದರ್ಶಿಸಿದ ಭಾರತೀಯ ತಂಡವು ಇಲ್ಲಿ ನಡೆಯುತ್ತಿರುವ ಮಹಿಳಾ ಏಷಿಯಾ ಕಪ್‌ನ 'ಎ' ಗುಂಪಿನ ಪಂದ್ಯದಲ್ಲಿ ಚೀನಾ ವಿರುದ್ಧ 1-1 ಗೋಲುಗಳ ಅಂತರದ ಡ್ರಾ ದಾಖಲಿಸಿದೆ. ಇದರೊಂದಿಗೆ ಸೆಮಿಫೈನಲ್ ಪ್ರವೇಶಿಸುವತ್ತ ಭಾರತೀಯ ಮಹಿಳಾ ಪಡೆ ದಿಟ್ಟ ಹೆಜ್ಜೆಯನ್ನಿಟ್ಟಿದೆ.
ಭಾರತಕ್ಕಿನ್ನು ಬುಧಾವರ ನಡೆಯುವ ಮಲೇಷ್ಯಾ ವಿರುದ್ಧದ ಪಂದ್ಯವನ್ನು ಡ್ರಾ ಮಾಡಿಕೊಂಡರೂ ಸೆಮಿಫೈನಲ್ ಹಾದಿ ಸುಮಗವಾಗಲಿದೆ. ಭಾರತ ತಾನಾಡಿದ ಸಿಂಗಾಪುರ ಹಾಗೂ ಥಾಯ್ಲೆಂಡ್ ವಿರುದ್ಧದ ಮೊದಲೆರಡು ಪಂದ್ಯಗಳನ್ನು 13-0 ಹಾಗೂ 15-0 ಗೋಲುಗಳ ಅಂತರದಿಂದ ಭರ್ಜರಿಯಾಗಿ ಜಯಿಸಿಕೊಂಡಿತ್ತು.
'ಎ' ಗುಂಪಿನಲ್ಲಿ ಭಾರತ ಎರಡು ಜಯ ಹಾಗೂ ಒಂದು ಡ್ರಾದೊಂದಿಗೆ ಏಳು ಅಂಕವನ್ನು ಸಂಪಾದಿಸಿದೆ. ಅಷ್ಟೇ ಅಂಕ ಚೀನಾ ಖಾತೆಯಲ್ಲಿದೆ.
ಮಂಗಳವಾರ ನಡೆದ ಪಂದ್ಯದಲ್ಲಿ ಭಾರತದ ಪರ ಸಬಾ ಅಂಜುಮ್ 45ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಈ ಮೊದಲು ಚೀನಾ ತಂಡದ ಲಿಯೊ ಜಿಯಾ ಹೂಯಿ 18ನೇ ನಿಮಿಷದಲ್ಲಿ ಗೋಲು ದಾಖಲಿಸುವ ಮೂಲಕ ಮುನ್ನಡೆ ಒದಗಿಸಿಕೊಟ್ಟಿದ್ದರು.