ಭಾರತೀಯ ಫುಟ್ಬಾಲ್ ತಂಡದ ನಾಯಕ ಬೈಚುಂಗ್ ಭುಟಿಯಾ ಕ್ಲಬ್ ಪ್ರಕರಣದ ಮಧ್ಯಂತರ ತೀರ್ಪಿನ ವಿರುದ್ಧ ಅಂತಾರಾಷ್ಟ್ರೀಯ ಪುಟ್ಬಾಲ್ ಫೆಡರೇಷನ್ ಅಸೋಸಿಯೇಷನ್ (ಫಿಫಾ) ಮೊರೆ ಹೋಗಿರುವ ಮೋಹನ್ ಬಗಾನ್, 255 ಪುಟಗಳ ಪತ್ರ ಬರೆದಿದೆ.
ಫಿಫಾ ಮುಖ್ಯ ಕಾರ್ಯದರ್ಶಿ ಜೆರೋಮ್ ವಾಲ್ಕೀಗೆ ಬರೆದ ಪತ್ರದಲ್ಲಿ, ಭುಟಿಯಾಗೆ ಯಾವುದೇ ಕ್ಲಬ್ ಪರ ಆಡುವ ಅನುಮತಿ ನೀಡಿದ ಮಧ್ಯಂತರ ತೀರ್ಪಿನ ಬಗ್ಗೆ ನಾವು ಫಿಫಾದಲ್ಲಿ ಪ್ರಶ್ನಿಸಿದ್ದೇವೆ ಎಂದು ಮೋಹನ್ ಬಗಾನ್ ಪ್ರಧಾನ ಕಾರ್ಯದರ್ಶಿ ಅಂಜನ್ ಮಿತ್ರಾ ಹೇಳಿದರು.
ಭುಟಿಯಾಗೆ ನೀಡಲಾಗಿದ್ದ ಶೋಕಾಸ್ ನೊಟೀಸ್ ಮತ್ತು ಆರು ತಿಂಗಳ ವೇತನರಹಿತ ನಿಷೇಧದ ಹಿಂದಿನ ಕಾರಣಗಳನ್ನು ಕ್ಲಬ್ ತನ್ನ ಪತ್ರದಲ್ಲಿ ವಿವರಣೆ ನೀಡಿದೆ. ಈ ಪತ್ರವನ್ನು ಐಎಫ್ಎ ಮತ್ತು ಭುಟಿಯಾರಿಗೂ ಕ್ಲಬ್ ರವಾನಿಸಿದೆ.
ನಾವು ಈ ಪ್ರಕರಣದಲ್ಲಿ ಫಿಫಾದ ಮಧ್ಯಪ್ರವೇಶವನ್ನು ಎದುರು ನೋಡುತ್ತಿದ್ದೇವೆ. ಭುಟಿಯಾರೊಂದಿಗಿನ ನಮ್ಮ ಒಪ್ಪಂದವು 2009-10 ಋತುವಿನವರೆಗೆ ಮುಂದುವರಿದಿತ್ತು. ಆದರೆ ಅವರು ಇದೀಗ ಬೇರೆ ಕ್ಲಬ್ ಪರ ಆಡುತ್ತಿದ್ದಾರೆ. ಈ ಮೂಲಕ ಭುಟಿಯಾ ನಿಯಮ ಉಲ್ಲಂಘಿಸಿದ್ದಾರೆ. ನಮಗೆ ನ್ಯಾಯ ಸಿಗಬೇಕಾಗಿದೆ ಎಂದು ಮಿತ್ರಾ ಹೇಳಿದರು.
ಮಧ್ಯಂತರ ತೀರ್ಪಿನ ನಂತರ ಭುಟಿಯಾ ಈಸ್ಟ್ ಬೆಂಗಾಲ್ ಪರ ಆಡುತ್ತಿದ್ದಾರೆ.
ಬಗಾನ್ ಕ್ಲಬ್ ಜೂನ್ ಎಂಟರಂದು ಭುಟಿಯಾ ಮೇಲೆ ಆರು ತಿಂಗಳ ನಿಷೇಧ ಹೇರಿತ್ತು. ಇದನ್ನು ಪ್ರಶ್ನಿಸಿ ಭುಟಿಯಾ ಅಖಿಲ ಭಾರತೀಯ ಫುಟ್ಬಾಲ್ ಫೆಡರೇಷನ್ (ಎಐಎಫ್‌ಎಫ್) ಮೊರೆ ಹೋಗಿದ್ದರು. ಎಐಎಫ್‌ಎಫ್ ಈ ವಿವಾದವನ್ನು ಕೊನೆಗೊಳಿಸಲು ನೇಮಿಸಿದ್ದ ತೀರ್ಪುಗಾರ ಅಮರೇಂದ್ರ ಶರಣ್ ನೀಡಿದ ಮಧ್ಯಂತರ ತೀರ್ಪಿನಲ್ಲಿ, ಭುಟಿಯಾ ಯಾವುದೇ ಕ್ಲಬ್ ಪರ ಆಡಲು ಅನುಮತಿ ಲಭಿಸಿತ್ತು.
ಇದೀಗ ಮಧ್ಯಂತರ ತೀರ್ಪಿನ ವಿರುದ್ಧ ಬಗಾನ್ ಸಮರಕ್ಕಿಳಿದಿದ್ದು, ಫಿಫಾ ಮೊರೆ ಹೋಗಿದೆ.