ಭಾರತ ತಂಡದವರು ಅರ್ಬಿಲ್‌ನ ಫ್ರಾಂಕೋಸ್ ಹರೀರಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಎಎಫ್‌ಸಿ 19ವರ್ಷ ವಯಸ್ಸಿನೊಳಗಿನವರ ಅರ್ಹತಾ ಟೂರ್ನಿಯ ಮೊದಲ ಪಂದ್ಯದಲ್ಲಿ ಸೋಲಿನ ರುಚಿ ಉಂಡಿದೆ.
ತೀರ ನೀರಸ ಪ್ರದರ್ಶನ ನೀಡಿದ ಭಾರತವು 0-5ಗೋಲುಗಳ ಅಂತರದಿಂದ ಇರಾಕ್ ಎದುರು ಪರಾಭವಗೊಂಡಿದೆ. ಏಕಪಕ್ಷೀಯ ಕೊನೆಗೊಂಡ ಪಂದ್ಯದಲ್ಲಿ ಭಾರತದವರು ಕೇವಲ ರಕ್ಷಣೆಯ ಆಟದಲ್ಲಿಯೇ ಕಾಲ ಕಳೆಯಬೇಕಾಯಿತು. ಇರಾಕ್ ತಂಡದವರು ಚುರುಕಿನ ದಾಳಿ ನಡೆಸುತ್ತಾ ಸಾಗಿದ್ದರಿಂದ ಗೋಲು ಅಂತರವನ್ನು ಸುಲಭವಾಗಿ ಹೆಚ್ಚಿಸಿಕೊಂಡಿತು.
ವಿಜಯಿ ತಂಡದ ಪರವಾಗಿ ಅಹ್ಮದ್ ವಾಲೀದ್ ಹುಸೇನ್ ಹಾಗೂ ಮುಸ್ತಫಾ ಜಲಾಲ್ ಅವರು ತಲಾ ಎರಡು ಗೋಲು ಗಳಿಸಿದರು. ಇನ್ನೊಂದು ಗೋಲನ್ನು ಬದಲಿ ಆಟಗಾರರಾಗಿ ಅಂಗಳದಲ್ಲಿ ಕಾಣಿಸಿಕೊಂಡ ಮುಹೈಮೆನ್ ಅವರು ಗಳಿಸಿದರು.
ಆತಿಥೇಯ ಇರಾಕ್ ತಂಡದವರಿಗೆ ಸ್ಥಳೀಯ ಪ್ರೇಕ್ಷಕರಿಂದ ಭಾರಿ ಬೆಂಬಲ ದೊರೆಯಿತು. ಆದ್ದರಿಂದ ಪಂದ್ಯದ ಮೇಲೆ ಸುಲಭವಾಗಿ ಬಿಗಿ ಹಿಡಿತ ಸಾಧಿಸಿದರು. ವಿರಾಮಕ್ಕಾಗಲೇ 2-0ಗೋಲುಗಳಿಂದ ಮುನ್ನಡೆ ಸಾಧಿಸಿದ ಅವರು ಮತ್ತೆ ಮೂರು ಬಾರಿ ಭಾರತದ ಗೋಲ್ ಕೀಪರ್‌ನನ್ನು ವಂಚಿಸುವಲ್ಲಿ ಯಶಸ್ವಿಯಾದರು. ಭಾರತ ತಂಡದವರು ತಮ್ಮ ಎರಡನೇ ಪಂದ್ಯದಲ್ಲಿ ಶನಿವಾರ ಸೌದಿ ಅರೇಬಿಯಾ ಎದುರು ಮುಖಾಮುಖಿಯಾಗಲಿದೆ.