ಫ್ರಾಂಕ್ಫರ್ಟ್, ಶನಿವಾರ, 21 ನವೆಂಬರ್ 2009( 15:15 IST )
ಚಾಂಪಿಯನ್ಸ್ ಲೀಗ್ ಸೇರಿದಂತೆ ಯೂರೋಪಿನಾದ್ಯಂತ ಸುಮಾರು 200 ಪಂದ್ಯಗಳಲ್ಲಿ 200ಕ್ಕೂ ಹೆಚ್ಚು ಮಂದಿ ಒಳಗೊಂಡಿರುವಮ್ಯಾಚ್-ಫಿಕ್ಸಿಂಗ್ ಹಗರಣ ಜಾಲವನ್ನು ಜರ್ಮನಿ ಪೊಲೀಸರು ಭೇದಿಸಿದ್ದು, ಇದುವರೆಗೆ 17 ಆರೋಪಿಗಳನ್ನು ಬಂಧಿಸಿದ್ದಾರೆ.
ಮ್ಯಾಚ್-ಫಿಕ್ಸಿಂಗ್‌ನ ಬೃಹತ್ ಜಾಲ ಬಯಲಾಗುತ್ತಿದ್ದಂತೆ ಫುಟ್ಬಾಲ್ ಅಭಿಮಾನಿಗಳು ಆಶ್ಚರ್ಯಚಕಿತರಾಗಿದ್ದಾರೆ. ಬೆನ್ನಿಗೆ ಇದು ಯೂರೋಪ್‌ನ ಅತಿ ದೊಡ್ಡ ಹಗರಣ ಎಂದು ಐರೋಪ್ಯ ಫುಟ್ಬಾಲ್ ಸಂಘಟನೆಗಳ ಒಕ್ಕೂಟ ಬಣ್ಣಿಸಿದೆ.
ಪೊಲೀಸರು ಸ್ವಿಟ್ಜರ್ಲೆಂಡ್, ಜರ್ಮನಿ, ಆಸ್ಟ್ರಿಯಾ ಮತ್ತು ಬ್ರಿಟನ್ ಸೇರಿದಂತೆ ಹಲವು ದೇಶಗಳಲ್ಲಿ 50 ಕಡೆ ದಾಳಿಗಳನ್ನು ನಡೆಸಿ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. 1.48 ಮಿಲಿಯನ್ ಡಾಲರ್ ನಗದು ಹಣ ಸೇರಿದಂತೆ ಇತರ ಅಮೂಲ್ಯ ವಸ್ತುಗಳನ್ನು ಕೂಡ ಇದೇ ಸಂದರ್ಭದಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದುವರೆಗೆ ಬಂಧನಕ್ಕೊಳಗಾದವರಲ್ಲಿ 15 ಮಂದಿ ಜರ್ಮನಿ ಪ್ರಜೆಗಳು, ಮತ್ತಿಬ್ಬರು ಸ್ವಿಟ್ಜರ್ಲೆಂಡಿನವರು. ಇನ್ನುಳಿದವರನ್ನು ಕೆಲವೇ ದಿನಗಳಲ್ಲಿ ಸೆರೆ ಹಿಡಿಯಲಾಗುತ್ತದೆ ಎಂದು ಮೂಲಗಳು ಹೇಳಿವೆ.
ಚಾಂಪಿಯನ್ಸ್ ಲೀಗ್‌ನಲ್ಲಿನ ಕನಿಷ್ಠ ಮೂರು ಪಂದ್ಯಗಳು, ಯೂರೋಪಾ ಲೀಗ್‌ನ 12 ಪಂದ್ಯಗಳು ಸೇರಿದಂತೆ ಯೂರೋಪಿನಲ್ಲಿ ನಡೆದ ಒಟ್ಟು 200 ಪಂದ್ಯಗಳಲ್ಲಿ ಮೋಸದಾಟ ನಡೆದಿದೆ. ಇದರಲ್ಲಿ ಕನಿಷ್ಠ 32 ಮಂದಿ ಪ್ರಮುಖ ಆಟಗಾರರು ಪಾಲ್ಗೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಜರ್ಮನಿ, ಬೆಲ್ಜಿಯಂ, ಸ್ವಿಟ್ಜರ್ಲೆಂಡ್, ಕ್ರೊವೇಶಿಯಾ, ಸ್ಲೊವೇನಿಯಾ, ಟರ್ಕಿ, ಹಂಗೇರಿ, ಬೋಸ್ನಿಯಾ-ಹರ್ಜೆಗೋವಿನಾ ಮತ್ತು ಆಸ್ಟ್ರಿಯಾಗಳಲ್ಲಿ ನಡೆದ ಪಂದ್ಯಗಳ ಕುರಿತು ತನಿಖೆ ನಡೆಸಲಾಗುತ್ತಿದ್ದು, ಹಗರಣದಲ್ಲಿ ಬ್ರಿಟನ್ ಹೆಸರು ಕೇಳಿ ಬಂದಿಲ್ಲ.
ಆಟಗಾರರು, ತರಬೇತುದಾರರು, ರೆಫ್ರಿಗಳು ಮತ್ತು ಅಧಿಕಾರಿಗಳಿಗೆ ಲಂಚ ನೀಡುವ ಮೂಲಕ ಪಂದ್ಯಗಳು ನಡೆಯುವ ಮೊದಲೇ ಫಲಿತಾಂಶವನ್ನು ನಿಗದಿಪಡಿಸಿ ಮೋಸದ ಮೂಲಕ ಬಾಜಿ ನಡೆಸುವ ಬೃಹತ್ ಕ್ರಿಮಿನಲ್ ಗ್ಯಾಂಗ್ ಇದರ ಹಿಂದಿದೆ ಎಂದು ಅಭಿಪ್ರಾಯಪಡಲಾಗಿದೆ.