ಇದು ಭಾರತದಲ್ಲಿ ಕ್ರಿಕೆಟನ್ನು ಹೊರತುಪಡಿಸಿದ ಕ್ರೀಡಾಪಟುಗಳಿಗೆ ಸಲ್ಲುತ್ತಿರುವ ಪ್ರೋತ್ಸಾಹಕ್ಕೆ ಮತ್ತೊಂದು ಉದಾಹರಣೆ. ಮಲೇಷಿಯಾದಲ್ಲಿ ನಡೆದ ಕ್ರೀಡಾಕೂಟವೊಂದರಲ್ಲಿ ಭಾಗವಹಿಸಿ ಎರಡು ಚಿನ್ನ ಹಾಗೂ ಒಂದು ಕಂಚಿನ ಪದಕ ಗೆದ್ದಿದ್ದಕ್ಕೆ ಪೊಲೀಸ್ ಇಲಾಖೆ ನೀಡಿದ ಬಹುಮಾನ ಕೇವಲ 400 ರೂಪಾಯಿ ಎಂದು ಕಾನ್ಸ್‌ಟೇಬಲ್ ಅನಿತಾ ಯಾದವ್ ತನಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ.
ನವೆಂಬರ್‌ನಲ್ಲಿ ಮಲೇಷಿಯಾದ ಇಫಾದಲ್ಲಿ ನಡೆದ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡು ಎರಡು ಚಿನ್ನ ಹಾಗೂ ಒಂದು ಕಂಚಿನ ಪದಕ ಗೆದ್ದಿದ್ದಕ್ಕೆ ಪೊಲೀಸ್ ಇಲಾಖೆ ನೀಡಿದ್ದು ಕೇವಲ 400 ರೂಪಾಯಿಗಳ ಪುರಸ್ಕಾರ ಎನ್ನುವ ಅನಿತಾಗೆ ಮೆಚ್ಚುಗೆಯ ಮಾತಾಗಲೀ, ಪುಷ್ಪಗುಚ್ಛಗಳಾಗಲೀ ಅಥವಾ ಕನಿಷ್ಠ ಪ್ರೋತ್ಸಾಹದಾಯಕ ಮಾತುಗಳೂ ಬಂದಿಲ್ಲ ಎಂದು ಅಲವತ್ತುಕೊಂಡಿದ್ದಾರೆ.
ತಾನು ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿರುವುದನ್ನು ತಾನು ಕೆಲಸ ಮಾಡುತ್ತಿರುವ ಪೊಲೀಸ್ ಇಲಾಖೆಗೆ ಅರ್ಜಿ ಮೂಲಕ ಆಕೆ ತಿಳಿಸಿದ್ದರು.
ನನ್ನ ಸಾಧನೆಯನ್ನು ಮಾಧ್ಯಮಗಳೂ ಗುರುತಿಸಿಲ್ಲ. ಕ್ರಿಕೆಟ್ ಆಟಗಾರರನ್ನಾದರೆ ಪ್ರತಿಯೊಬ್ಬರೂ ಗುರುತಿಸಿ ಗೌರವಿಸುತ್ತಾರೆ. ನನ್ನಂತಹ ಕ್ರೀಡಾಪಟುಗಳನ್ನು ಕೇಳುವವರೇ ಇಲ್ಲ ಎಂದು ಇದುವರೆಗೆ ಹಲವು ಪ್ರಶಸ್ತಿಗಳನ್ನು ಗೆದ್ದಿರುವ ಅನಿತಾ ಹೇಳುತ್ತಾರೆ.
ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಅನಿತಾ ಸತತವಾಗಿ ಭಾಗವಹಿಸುತ್ತಿದ್ದು, ಹಲವು ಕೇಜಿಗಳಷ್ಟು ಪದಕಗಳು ಆಕೆಯ ಮನೆಯಲ್ಲಿ ರಾಶಿ ಬಿದ್ದಿವೆ. ಆದರೆ ಜನ ಸಾಮಾನ್ಯರಿಂದ ಸೇರಿದಂತೆ ತನ್ನ ಇಲಾಖೆಯೂ ಪ್ರೋತ್ಸಾಹ ನೀಡದಿರುವುದು ಆಕೆಗೆ ತೀರಾ ನೋವು ತಂದಿದೆ.
ಕಠಿಣ ಶ್ರಮವಹಿಸಿ ಮಲೇಷಿಯಾದಲ್ಲಿನ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಾಲ್ಗೊಂಡು 15 ದಿನಗಳ ನಂತರ ವಾಪಸಾದ ನಂತರ ಮೂರು ದಿನಗಳ ರಜೆಗಾಗಿ ನನ್ನ ಮೇಲಧಿಕಾರಿಗೆ ಅರ್ಜಿ ಸಲ್ಲಿಸಿದಾಗ ಅವರು ಹೇಳಿದ್ದು, 'ನೀನು ಈಗಾಗಲೇ ದೂರ ಪ್ರಯಾಣ ಮತ್ತು ವಿಶ್ರಾಂತಿಯಲ್ಲಿದ್ದಿ. ಸುಮ್ಮನೆ ಕೆಲಸಕ್ಕೆ ಹಾಜರಾಗು' ಎಂಬುತ್ತರ. ಈ ರೀತಿಯ ನಿಲುವುಗಳು ಕ್ರೀಡೆಗೆ ಯಾವ ರೀತಿಯಲ್ಲಿ ಸಹಕಾರಿಯೆನಿಸೀತು ಎಂದು ಅನಿತಾ ಪ್ರಶ್ನಿಸುತ್ತಾರೆ.
ನವೆಂಬರ್ 7 ಮತ್ತು 8ರಂದು ನಡೆದಿದ್ದ ಮಲೇಷಿಯನ್ ಇಂಟರ್‌ನ್ಯಾಷನಲ್ ಓಪನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಅನಿತಾ 'ಶ್ರೇಷ್ಠ ಮಹಿಳಾ ಕ್ರೀಡಾಪಟು ಪ್ರಶಸ್ತಿ'ಯನ್ನು ಗೆದ್ದಿದ್ದರು.
ಅವರು 5 ಮೀಟರ್ 40 ಸೆಂಟಿ ಮೀಟರ್ ಉದ್ದ ಜಿಗಿತದಲ್ಲಿ ಮತ್ತು ಜಾವೆಲಿನ್ ಎಸೆತದಲ್ಲಿ ಚಿನ್ನ ಹಾಗೂ ಮೆಡ್ಲೇ ರಿಲೇ ರೇಸ್‌ನಲ್ಲಿ ಕಂಚಿನ ಪದಕ ಪಡೆದುಕೊಂಡಿದ್ದರು. ಈ ಟೂರ್ನಮೆಂಟ್‌ನಲ್ಲಿ ಉತ್ತರ ಪ್ರದೇಶವನ್ನು ಪ್ರತಿನಿಧಿಸಿದ ಏಕೈಕ ಕ್ರೀಡಾಪಟು ಆಕೆ.
ಆಗ್ರಾದ ಸದಾರ್ ಪೊಲೀಸ್ ಠಾಣೆಯಲ್ಲಿ ಕಾನ್ಸ್‌ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಅನಿತಾಗೆ ಕರ್ತವ್ಯ ಮತ್ತು ಕ್ರೀಡೆ ಎರಡರಲ್ಲೂ ತೊಡಗಿಸಿಕೊಳ್ಳುವುದು ಕಠಿಣವಾಗುತ್ತಿದೆ. ಆದರೆ ಕುಟುಂಬದವರ ಸಹಕಾರದಿಂದ ಇದೆಲ್ಲ ಸಾಧ್ಯವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.
ನನ್ನ ಗಂಡ ಕೂಡ ಪೊಲೀಸ್. ಅವರು ನನ್ನ 11 ವರ್ಷದ ಮಗಳು, ಆರು ವರ್ಷದ ಮಗ ಮತ್ತು ಮನೆಯನ್ನು ನೋಡಿಕೊಳ್ಳುತ್ತಾರೆ. ಹಾಗಾಗಿ ನನಗೆ ಹೆಚ್ಚಿನ ಸಮಸ್ಯೆಗಳಾಗಿಲ್ಲ. ಮನೆಯವರು ನನಗೆ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ ಎಂದು ಅನಿತಾ ತಿಳಿಸಿದ್ದಾರೆ.