ಕ್ರೀಡಾಕ್ಷೇತ್ರದ ಸಾಧಕರಿಗಾಗಿ ಏಕಲವ್ಯ ಪ್ರಶಸ್ತಿ ಪ್ರಕಟ

ಮಡಿಕೇರಿ, ಮಂಗಳವಾರ, 28 ಆಗಸ್ಟ್ 2012 (14:01 IST)

ಕ್ರೀಡಾಕ್ಷೇತ್ರದ ಗಣನೀಯ ಸಾಧಕರಿಗೆ ರಾಜ್ಯ ಸರಕಾರ ನೀಡುವ ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ಪ್ರಸಕ್ತ ಸಾಲಿನ 15 ಹಾಗೂ 2010ನೇ ಸಾಲಿನ ನಾಲ್ವರು ಸೇರಿದಂತೆ ಒಟ್ಟು 19 ಮಂದಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವಿಶ್ವಕಪ್‌ ವಿಜೇತ ಭಾರತೀಯ ವನಿತಾ ಕಬಡ್ಡಿ ತಂಡದ ನಾಯಕಿ, ಕಾರ್ಕಳದ ಮಮತಾ ಪೂಜಾರಿ ಹಾಗೂ ಕ್ರಿಕೆಟಿಗ ವಿನಯ್‌ ಕುಮಾರ್‌ ಏಕಲವ್ಯ ಪ್ರಶಸ್ತಿ ಪಡೆಯುವ ಪ್ರಮುಖರಾಗಿದ್ದಾರೆ.

ನಗರದ ಕೋಟೆ ವಿಧಾನ ಸಭಾಂಗಣದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ರಾಜ್ಯ ಯುವಜನ ಸೇವಾ ಮತ್ತು ಕ್ರೀಡಾ ಸಚಿವ ಎಂ.ಪಿ. ಅಪ್ಪಚ್ಚು ರಂಜನ್‌ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಬಿಡುಗಡೆ ಮಾಡಿದರು. ಅನಂತರ ಮಾತನಾಡಿ, ಏಕಲವ್ಯ ಪ್ರಶಸ್ತಿ ವಿಜೇತರಿಗೆ ತಲಾ 2 ಲಕ್ಷ ರೂ. ಹಾಗೂ ಜೀವಮಾನದ ಸಾಧನೆ ಪ್ರಶಸ್ತಿಗೆ ಆಯ್ಕೆಯಾದವರಿಗೆ ತಲಾ 1.50 ಲಕ್ಷ ರೂ. ನಗದು ನೀಡಲಾಗುವುದು ಎಂದು ತಿಳಿಸಿದರು.

ಅಲ್ಲದೆ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಗಮಿಸುವ ಪುರುಷ ಕ್ರೀಡಾಪಟುಗಳಿಗೆ ಸರಕಾರದ ವತಿಯಿಂದ ಸೂಟು, ಕೋಟು, ಟೈಗಳನ್ನು ಒದಗಿಸಲಾಗುವುದು; ಮಹಿಳಾ ಕ್ರೀಡಾಪಟುಗಳಿಗೆ ಅಪ್ಪಟ ಮೈಸೂರು ರೇಷ್ಮೆ ಸೀರೆ ನೀಡಲಾಗುವುದು ಎಂದರು.

ಪ್ರಶಸ್ತಿಗಳಿಗೆ ನಡೆದ ಆಯ್ಕೆಯಲ್ಲಿ ಸಂಪೂರ್ಣ ಪಾರದರ್ಶಕ ನೀತಿಯನ್ನು ಅನುಸರಿಸಲಾಗಿದ್ದು, ಈ ಕ್ರೀಡಾಪಟುಗಳು 5 ವರ್ಷಗಳಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಳಿಸಿದ ಪದಕಗಳ ಆಧಾರದಲ್ಲಿ, ಅವರೇ ನೀಡಿರುವ ಅಂಕಗಳ ಆಧಾರದಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಏಕಲವ್ಯ ಪ್ರಶಸ್ತಿ ವಿಜೇತರು

ಕಾಶೀನಾಥ್‌ ನಾಯಕ್‌ ಓಣಿಕೇರಿ, ಕಾರವಾರ (ಆತ್ಲೆಟಿಕ್ಸ್‌), ಕೃತಿಕಾ ಲಕ್ಷ್ಮಣ್‌, ಮೈಸೂರು (ಬಾಸ್ಕೆಟ್‌ಬಾಲ್‌), ಸ್ಟಾನಿ ಜಿ.ಎ., ಶಿವಮೊಗ್ಗ (ಚೆಸ್‌), ವಿನಯ್‌ ಕುಮಾರ್‌, ಬೆಂಗಳೂರು (ಕ್ರಿಕೆಟ್‌) ಆಲೆಮಾಡ ಬಿ.ಚೀಯಣ್ಣ, ಕೊಡಗು (ಹಾಕಿ), ಮಮತಾ ಪೂಜಾರಿ, ಕಾರ್ಕಳ-ಉಡುಪಿ (ಕಬಡ್ಡಿ), ನೇಹಾ ಎಚ್‌. ಕುಂಬ್ರ, ದಕ್ಷಿಣ ಕನ್ನಡ (ಪವರ್‌ಲಿಫ್ಟಿಂಗ್‌), ರಾಕೇಶ್‌ ಮನ್‌ಪಟ್‌, ಬೆಂಗಳೂರು (ಶೂಟಿಂಗ್‌), ಪ್ರತೀಕ್‌ ರಾಜ್‌, ಮೈಸೂರು (ರೋಲರ್‌ ಸ್ಕೇಟಿಂಗ್‌), ಎ.ಪಿ. ಗಗನ್‌ ಉಲ್ಲಾಳ್‌ಮs…, ಬೆಂಗಳೂರು (ಈಜು), ಎಚ್‌.ಎಸ್‌. ಚಂದ್ರಶೌರಿದೇವಿ, ಭದ್ರಾವತಿ (ವೇಟ್‌ ಲಿಫ್ಟಿಂಗ್‌), ನಾಡಿಯಾ ಹರಿದಾಸ್‌, ಬೆಂಗಳೂರು (ಈಕ್ವೇಸ್ಟ್ರಿಯನ್‌), ಸಾಬು ಈಶ್ವರ್‌ ಗಾಣಿಗೇರ್‌, ಬಿಜಾಪುರ (ಸೈಕ್ಲಿಂಗ್‌), ಶ್ವೇತಾ ಎನ್‌. ಬೆಂಗಳೂರು (ವಾಲಿಬಾಲ್‌), ಸಿ.ವಿ. ರಾಜಣ್ಣ ಕೋಲಾರ (ವಿಕಲಚೇತನ ಕ್ರೀಡಾಪಟು, ಆತ್ಲೆಟಿಕ್ಸ್‌, ಬ್ಯಾಡ್ಮಿಂಟನ್‌).

ಜೀವಮಾನ ಸಾಧನೆ ಪ್ರಶಸ್ತಿ: ಶ್ಯಾಮಲಾ ಶೆಟ್ಟಿ, ಬೆಂಗಳೂರು (ವೇಟ್‌ಲಿಫ್ಟಿಂಗ್‌ ಕೋಚ್‌), ಚೇಂದಂಡ ಯು.ಅಶ್ವಥ್‌, ಕೊಡಗು (ಹಾಕಿ ಕೋಚ್‌), ಪ್ರದೀಪ್‌ ಕುಮಾರ್‌, ಬೆಂಗಳೂರು (ಈಜು ಕೋಚ್‌), ಚಂದ್ರಪ್ಪ ಮಲ್ಲಪ್ಪ ಕುರಣಿ ಬಾಗಲಕೋಟೆ (ಸೈಕ್ಲಿಂಗ್‌ ಕೋಚ್‌).

ಇದರೊಂದಿಗೆ 2010ನೇ ಸಾಲಿನಲ್ಲಿ ಏಕಲವ್ಯ ಪ್ರಶಸ್ತಿಗೆ ಆಯ್ಕೆಗೊಂಡು ಕಾರಣಾಂತರಗಳಿಂದ ತಡೆ ಹಿಡಿಯಲ್ಪಟ್ಟಿದ್ದ ಮೂರು ಮಂದಿಗೆ ಈ ಬಾರಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಅವರಲ್ಲಿ ರೋಷನ್‌ ಫೆರಾವೋ, ಮಂಗಳೂರು (ಬಾಡಿಬಿಲ್ಡಿಂಗ್‌), ಎಸ್‌. ನವೀನ್‌, ಮಂಡ್ಯ (ಕರಾಟೆ) ಪ್ರಜ್ಞಾ ಎಚ್‌.ಎ., ಮೈಸೂರು (ರೋಲರ್‌ ಸ್ಕೇಟಿಂಗ್‌) ಮತ್ತು ರಾಜೇಶ್‌ ಶಿಂಧೆ, ಬೆಳಗಾವಿ (ವಿಕಲಚೇತನ ಕ್ರೀಡಾಪಟು-ಈಜು) ಸೇರಿದ್ದಾರೆ.

ಇವರಲ್ಲಿ ಈ ಹಿಂದೆ ಶರಣ್ಯ ಮಹೇಶ್‌ ಅವರಿಗೆ ನೀಡಲಾಗಿದ್ದ ಏಕಲವ್ಯ ಪ್ರಶಸ್ತಿಯನ್ನು ಪ್ರಶ್ನಿಸಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಹೂಡಲಾಗಿದ್ದ ರಿಟ್‌ ಅರ್ಜಿಯ ಹಿನ್ನೆಲೆಯಲ್ಲಿ, ನ್ಯಾಯಾಲಯ ನೀಡಿದ ತೀರ್ಪಿನ ಅನ್ವಯ ಆ ಪ್ರಶಸ್ತಿಯನ್ನು ಇದೀಗ ಪ್ರಜ್ಞಾ ಅವರಿಗೆ ನೀಡಲಾಗುವುದು. ಹಾಗೆಯೇ ವಿಕಲಚೇತನ ಕ್ರೀಡಾಪಟುವಿಗೆ ಸೋಮಶೇಖರ್‌ ಅವರಿಗೆ ನೀಡಲಾಗಿದ್ದ ಪ್ರಶಸ್ತಿಯನ್ನು ರದ್ದುಪಡಿಸಿ ರಾಜೇಶ್‌ ಶಿಂಧೆಗೆ ನೀಡಲಾಗುತ್ತಿದೆ ಎಂದು ಸಚಿವ ಅಪ್ಪಚ್ಚು ರಂಜನ್‌ ವಿವರಣೆಯಿತ್ತರು.

ಆ. 29 ಸಮಾರಂಭ

ಆ. 29ರ ಸಂಜೆ 6 ಗಂಟೆಗೆ ಬೆಂಗಳೂರು ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌, ಉಪಮುಖ್ಯಮಂತ್ರಿಗಳು, ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರು, ಒಲಂಪಿಕ್‌ ಅಸೋಸಿಯೇಷನ್‌ ಅಧ್ಯಕ್ಷರು ಸೇರಿದಂತೆ ಹಲವು ಗಣ್ಯರು ಭಾಗವ‌ಹಿಸಲಿದ್ದಾರೆ. ಪ್ರಶಸ್ತಿ ವಿಜೇತರ ಕುಟುಂಬ ಹಾಗೂ ಸ್ನೇಹಿತರಿಗಾಗಿ ತಲಾ 10 ಮಂದಿಗೆ ಉಚಿತ ಪಾಸ್‌ಗಳನ್ನು ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

ಭಾರತೀಯ ಹಾಕಿ ತಂಡ ಯೂರೋಪ್‌‌ಗೆ ತೆರಳಲು ಸಜ್ಜಾಗಿದೆ

ನವದೆಹಲಿ :ಮುಂದಿ ದಿನಗಳಲ್ಲಿ ನಡೆಯಲಿರುವ ಹಾಕಿ ವಿಶ್ವ ಕಪ್‌‌ಗಾಗಿ ಸಿದ್ದತೆ ನಡೆಸುತ್ತಿರುವ ಇಂಡಿಯನ್‌ ...

ಧೋನಿ ಹೇಳಿಕೆ ಪರಿಶೀಲಿಸಲು ಅವಕಾಶ ಕೋರಿ ಸುಪ್ರೀಂಕೋರ್ಟ್‌ಗೆ ಬಿಸಿಸಿಐ ಅರ್ಜಿ

ನವದೆಹಲಿ: ಐಪಿಎಲ್ ಬೆಟ್ಟಿಂಗ್ ಮತ್ತು ಫಿಕ್ಸಿಂಗ್ ಹಗರಣದ ತನಿಖೆ ನಡೆಸುತ್ತಿರುವ ಮುದ್ಗಲ್ ಸಮಿತಿಯ ಮುಂದೆ ...

ಟೆನಿಸ್‌‌‌ ಶ್ರೇಯಾಂಕ: ಭಾರತೀಯರ ಶ್ರೇಯಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ

ನವದೆಹಲಿ : ಭಾರತದ ಡೆವಿಸ್‌‌‌‌ಕಪ್‌ನಲ್ಲಿ ಸೋಮದೇವ್ ದೇವವರ್ಮನ್ ಕೊರಿಯಾ ವಿರುದ್ದ ಗೆಲುವನ್ನು ಸಾಧಿಸುವುದರ ...

ಯುವಿಯನ್ನು ಸಮರ್ಥಿಸಿಕೊಂಡು ಸಚಿನ್ ಬ್ಯಾಟಿಂಗ್

ನವದೆಹಲಿ: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಅವರನ್ನು ಸಮರ್ಥಿಸಿಕೊಂಡು ಸಚಿನ್ ತೆಂಡೂಲ್ಕರ್ ...