ಸಂತ ಫ್ರಾನ್ಸಿಸ್ ಕ್ಸೇವಿಯರ್

HolyCross
WD
ಸಂತ ಫ್ರಾನ್ಸಿಸ್ ಕ್ಸೇವಿಯರ್ 1506ರ ಎಪ್ರಿಲ್ 7ರಂದು ಸ್ಪೇನ್‌ನಲ್ಲಿ ಜನಿಸಿದವರು. ಬರಿಯ 46 ವರ್ಷಗಳ ಕಾಲ ಬದುಕಿದ ಇವರು ಅತಿ ಹೆಚ್ಚು ಮಂದಿಯನ್ನು ಕ್ರೈಸ್ತಧರ್ಮಕ್ಕೆ ಪರಿವರ್ತಿಸಿದ್ದರು ಎಂಬ ಪ್ರತೀತಿ ಇದೆ.

ಕುಲೀನ ಮನೆತನದಲ್ಲಿ ಜನಿಸಿದ ಕ್ಸೇವಿಯರ್ ತನ್ನ 9ನೆ ವಯಸ್ಸಿನಲ್ಲಿ ತಂದೆಯನ್ನು ಕಳಕೊಂಡರು. 19ನೆ ವಯಸ್ಸಿಗೆ ಅಧ್ಯಯನಕ್ಕಾಗಿ ಪ್ಯಾರಿಸ್ ವಿಶ್ವವಿದ್ಯಾನಿಲಯಕ್ಕೆ ತೆರಳಿದರು. ಬಳಿಕ ಅವರು ಕ್ರೈಸ್ತ ಧರ್ಮಶಾಸ್ತ್ರ ಅಧ್ಯಯನ ಮಾಡಿದರು. ತದನಂತರ ಅವರಿಗೆ ಇಗ್ನಿಷಿಯಸ್ ಲೊಯೋಲಾರ ಪರಿಚಯವಾಯಿತು. ಕ್ಸೇವಿಯರ್, ಇಗ್ನಿಷಿಯಸ್ ಮತ್ತು ಇತರ ಐವರು ಸೇರಿ 1534ರಲ್ಲಿ ಸೊಸೈಟಿ ಆಫ್ ಜೀಸಸ್ ಸ್ಥಾಪಿಸಿದರು.

ಪರಿಶುದ್ಧತೆ ಮತ್ತು ಬಡತನದ ಶಪಥದೊಂದಿಗೆ ಅವರು ಈ ಸಂಘಟನೆಯನ್ನು ಹುಟ್ಟಿಹಾಕಿದರು.ಹಲವಾರು ಧಾರ್ಮಿಕ ಕಾರ್ಯಗಳಲ್ಲಿ ಒಳಗೊಂಡಿದ್ದ ಅವರು ಕ್ರೈಸ್ತ ಧರ್ಮವನ್ನು ಏಷ್ಯಾಗೆ ತಂದ ಸಂತರೆಂದು ನಂಬಲಾಗಿದೆ.

ಇವರು 1552ರ ನವೆಂಬರ್ 21ರಂದು ಶಾಂಗ್ಚುವಾನ್ ದ್ವೀಪದಲ್ಲಿ ದಿವ್ಯಪೂಜೆಯ ಬಳಿಕ ಕುಸಿದರು. ಇದಾದ ಹದಿಮೂರು ದಿನಗಳ ಬಳಿಕ, 46ರ ಹರೆಯದಲ್ಲಿ ಸಾವನ್ನಪ್ಪಿದರು. ಇವರನ್ನು ಮೊದಲಿಗೆ ಶಾಂಗ್ಚುವಾನ್ ದ್ವೀಪದ ಸಮುದ್ರ ಕಿನಾರೆಯಲ್ಲಿ ದಹನ ಮಾಡಲಾಗಿತ್ತು. ಬಳಿಕ ಅವರ ದೇಹವನ್ನು 1553ರ ಮಾರ್ಚ್‌ನಲ್ಲಿ ಮಲಕ್ಕಾದ ಸಂತ ಪೌಲ್ ಚರ್ಚಿನಲ್ಲಿ ಹೂಳಲಾಗಿತ್ತು. ಯಾವುದೇ ಹಾನಿಯಾಗದೇ ಉಳಿದಿದ್ದ ಅವರ ದೇಹವನ್ನು 1553ರ ಡಿಸೆಂಬರ್ 11ರಂದು ಹಡಗಿನ ಮೂಲಕ ಗೋವಾಕ್ಕೆ ಒಯ್ಯಲಾಯಿತು.

ನಾಲ್ಕೂವರೆ ಶತಮಾನಗಳು ಕಳೆದರೂ ಇವರ ದೇಹವು ಇಂದಿಗೂ ಕೊಳೆಯದೇ ಉಳಿದಿರುವುದು ಒಂದು ವಿಸ್ಮಯ. ಗೋವಾದ ಬೆಸಿಲಿಕ ಚರ್ಚ್‌ನಲ್ಲಿ ಇವರ ದೇಹವನ್ನು ಗಾಜಿನ ಪೆಟ್ಟಿಗೆಯಲ್ಲಿ ಇರಿಸಲಾಗಿದೆ.

ಪ್ರತೀ ಹತ್ತು ವರ್ಷಗಳಿಗೊಮ್ಮೆ ಕ್ಸೇವಿಯರ್ ಅವರ ದೇಹವನ್ನು ಆರು ವಾರಗಳ ಕಾಲ ಸಾರ್ವಜನಿಕ ದರ್ಶನಕ್ಕಾಗಿ ಇಡಲಾಗುತ್ತಿದೆ. ಇತ್ತೀಚೆಗೆ 2004ರಲ್ಲಿ ಕ್ಸೇವಿಯರ್ ದೇಹವನ್ನು ವೀಕ್ಷಿಸುವ ಅವಕಾಶವನ್ನು ಸಾರ್ವಜನಿಕರಿಗೆ ಒದಗಿಸಲಾಗಿತ್ತು.ಇದರಲ್ಲಿ ಇನ್ನಷ್ಟು ಓದಿ :