ಸಡಗರ, ಭಕ್ತಿ ಭಾವದ ಕ್ರಿಸ್ಮಸ್

PTI
ವಿಶ್ವದೆಲ್ಲೆಡೆ ಡಿಸೆಂಬರ್ ಬಂತೆಂದರೆ ಹಬ್ಬದ ಆರಂಭವಾಗಿರುತ್ತದೆ. ಅದರಲ್ಲೂ ಕ್ರೈಸ್ತ ಬಾಂಧವರಿಗೆ ಇದು ಪರ್ವ ಕಾಲ. ಪ್ರಭು ಯೇಸು ಕ್ರಿಸ್ತ ಹುಟ್ಟಿದ ದಿನದ ಆಚರಣೆಯ ಸಂಭ್ರಮ. ಇತ್ತೀಚಿನ ದಿನಗಳಲ್ಲಿ ಕ್ರಿಸ್ಮಸ್ ಎಂಬುದು ಸೌಹಾರ್ದತೆಯ ಸಡಗರವಾಗಿ, ಜಾತಿ-ಧರ್ಮಗಳ ಭೇದವಿಲ್ಲದೆ ವಿವಿಧೆಡೆ ಸಾಂಘಿಕವಾಗಿ, ಸಾಮೂಹಿಕವಾಗಿ ಆಚರಿಸಲ್ಪಡುತ್ತಿದೆ.

ಕ್ರಿಸ್ಮಸ್ ಹೆಸರು ಬಂದದ್ದು ಹಳೆಯ ಇಂಗ್ಲಿಷ್ ಭಾಷೆಯ ಕ್ರಿಸ್ಟಿಸ್ ಮೇಸೀ (Cristes Maesse) ಶಬ್ದದಿಂದ. ಕ್ರಿಸ್ತನ ದಿವ್ಯಪೂಜೆ ಎಂಬುದು ಇದರರ್ಥ. ಕ್ರಿಸ್ಮಸ್ ಕಥೆ ಆರಂಭವಾಗುವುದು ಸುಮಾರು ಎರಡು ಸಹಸ್ರಮಾನಗಳ ಹಿಂದೆ, ಬೆತ್ಲಹೆಮ್‌ನಲ್ಲಿ ಮಗುವೊಂದರ ಜನನದಿಂದ. ಕ್ರೈಸ್ತ ಸುವಾರ್ತೆ (ಗಾಸ್ಪೆಲ್) ಪ್ರಕಾರ, ಯೇಸು ಕ್ರಿಸ್ತನು ವರ್ಜಿನ್ ಮೇರಿಗೆ ಬೆತ್ಲಹೆಮ್‌ನಲ್ಲಿ ಹುಟ್ಟಿದ. ಯೇಸುವನ್ನು ಜೀಸಸ್ ಎಂದೂ ಕರೆಯುತ್ತಾರೆ.

ಇದು ಸುಮಾರು ಎರಡು ಸಾವಿರ ವರ್ಷದ ಹಿಂದಿನ ಕಥೆ. ಇಸ್ರೇಲಿನಿಂದ ವರ್ಜಿನ್ ಮೇರಿಯು ಜೋಸೆಫ್ ಜತೆಗೆ ಬೆತ್ಲಹೆಮ್‌ಗೆ ತೆರಳಿದ ಬಳಿಕ ಅಲ್ಲಿ ಮಗುವಿಗೆ ಜನ್ಮ ನೀಡಿದಳು. ಕುರಿ ಕಾಯುವ ಹಟ್ಟಿಯಲ್ಲಿ ಜನಿಸಿದ ಕಾಂತಿಯುತವಾದ ಮಗು ಜೀಸಸ್ ಎಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು. ಈ ಯೇಸುವು ಇಸ್ರೇಲನ್ನು ಆಳುತ್ತಾನೆ ಎಂದು ಹೆರೋಡ್ ಎಂಬ ರಾಜನಿಗೆ ಅಲ್ಲಿನವರು ಕೆಲವರು ಹೇಳಿದರು. ದುಷ್ಟಬುದ್ಧಿಯ ಈ ರಾಜು ಬೆತ್ಲಹೆಮ್‌ನಲ್ಲಿರುವ ಎಲ್ಲ ಮಕ್ಕಳನ್ನು ಕೊಲ್ಲುವಂತೆ ತನ್ನ ಸೈನಿಕರನ್ನು ಕಳುಹಿಸಿದ. ದೇವತೆಯಿಂದ ಎಚ್ಚರಿಸಲ್ಪಟ್ಟ ಜೋಸೆಫ್ ತನ್ನ ಕುಟುಂಬವನ್ನು ಈಜಿಪ್ಟ್‌ಗೆ ಸ್ಥಳಾಂತರಿಸಿದ. ಹೆರೋಡ್ ಕಾಲಾನಂತರ, ಅವರು ಇಸ್ಲೇರಿಗೆ ಮರಳಿ ಬಂದು, ನಜರೆತ್ ಎಂಬ ಹಳ್ಳಿಯಲ್ಲಿ ಜೀಸಸ್‌ನನ್ನು ಬೆಳೆಸಿದರು.

ಜೀವಿತಾವಧಿಯಲ್ಲಿ ಹಲವಾರು ಪವಾಡಗಳಿಂದಾಗಿ ಯೇಸುವು ಎಲ್ಲರ ಗಮನ ಸೆಳೆದ ಸಂದರ್ಭದಲ್ಲೇ, ಯಹೂದಿಗಳ ಕೆಂಗಣ್ಣಿಗೂ ಗುರಿಯಾಗಬೇಕಾಯಿತು. ರೋಮ್ ದೊರೆ ಪೈಲೇಟ್ ಎಂಬಾತ ಯೇಸುವನ್ನು ವಿಚಾರಣೆಗೆ ಗುರಿಪಡಿಸಿದ. ಯಹೂದಿಗಳ ಒತ್ತಡದಿಂದಾಗಿ ಜೀಸಸ್‌ಗೆ ಮರಣದಂಡನೆ ವಿಧಿಸಲಾಯಿತು. ಅದರಂತೆ ಜೀಸಸ್‌ನನ್ನು ಶಿಲುಬೆಗೇರಿಸಲಾಯಿತು. ಮರಣದ ಬಳಿಕ ಹಿಂತಿರುಗಿ ಬರುವುದಾಗಿ ಜೀಸಸ್ ತನ್ನ ಶಿಷ್ಯರಿಗೆ ವಾಗ್ದಾನ ಮಾಡಿದ. ಇದರ ಅರಿವಿದ್ದ ಸೈನಿಕರು ಜೀಸಸ್ ಸಮಾಧಿಯಲ್ಲಿ ಬಲವಾದ ಕಾವಲು ಇರಿಸಿದರು.

ಜೀಸಸ್ ಮರಣದ ಮೂರನೇ ದಿನ, ದೇವತೆಯೊಂದು ಧರೆಗಿಳಿಯಿತು ಮತ್ತು ಸೈನಿಕರು ಓಡಿ ಹೋದರು. ಶಿಷ್ಯರು ಬಂದು ನೋಡಿದಾಗ ಸಮಾಧಿ ಖಾಲಿಯಾಗಿತ್ತು. ಅಂದರೆ ಜೀಸಸ್ ಮತ್ತೆ ಎದ್ದು ಬಂದಿದ್ದ! ಆ ನಂತರ ಜೀಸಸ್ ಹಲವಾರು ಶ್ರದ್ಧಾಳುಗಳಿಗೆ ದರ್ಶನ ನೀಡಿದ ಮತ್ತು ಧರ್ಮ ಪಾಲನೆಗಾಗಿ ಬೋಧಿಸಿದ. ಇದು ಯೇಸುವಿನ ಕುರಿತ ಸ್ಥೂಲ ಕಥೆ.

ಯೇಸು ಕ್ರಿಸ್ತನು 25ನೇ ತಾರೀಕಿಗೆ ಹುಟ್ಟಿದ ಅಂತ ನಂಬಿಕೆಯಿದೆ. ಆದರೆ ತಿಂಗಳ ಬಗ್ಗೆ ನಿಖರ ಮಾಹಿತಿ ಇಲ್ಲವಾದರೂ, ಕೆಥೋಲಿಕ್ ಚರ್ಚು ಡಿಸೆಂಬರ್ ತಿಂಗಳನ್ನು ಸಂಭ್ರಮಾಚರಣೆಯ ಪರ್ವಕಾಲವಾಗಿ ಆರಿಸಿಕೊಂಡಂದಿನಿಂದ ಇದು ಅನೂಚಾನವಾಗಿ ನಡೆದುಕೊಂಡುಬರುತ್ತಿದೆ. ಸಾಮಾನ್ಯವಾಗಿ ಬಹುತೇಕ ಎಲ್ಲ ದೇಶಗಳಲ್ಲೂ ಕ್ರಿಸ್ಮಸ್ ಹಬ್ಬವನ್ನು ಡಿ.25ರ ಆಚೀಚಿನ ಕೆಲವು ದಿನಗಳನ್ನೂ ಸೇರಿಸಿಕೊ೦ಡು ಆಚರಿಸಲಾಗುತ್ತದೆ.

ಕ್ರಿಸ್ಮಸ್ ಹಬ್ಬದ ಹಿಂದಿನ ದಿನವನ್ನು ಕ್ರಿಸ್ಮಸ್ ಈವ್ ಎಂದೂ, ಕ್ರಿಸ್ಮಸ್ ನಂತರದ ಹನ್ನೆರಡನೆ ದಿನವನ್ನು "ಎಪಿಫನಿ" ಎ೦ದೂ ಸಡಗರದಿಂದ ಆಚರಿಸಲಾಗುತ್ತದೆ.

ಕ್ರಿಸ್ಮಸ್ ಹಬ್ಬವು ವಿಶೇಷವಾಗಿ ಉಡುಗೊರೆಗಳಿಗೆ ಪ್ರಸಿದ್ಧ. ಉಡುಗೊರೆಗಳನ್ನು ಹೊತ್ತು ಬರುವ ಸಾಂತಾ ಕ್ಲಾಸ್, ಪುಟಾಣಿಗಳನ್ನೆಲ್ಲಾ ರಂಜಿಸುತ್ತಾನೆ. ಸಂತ ನಿಕೊಲಾಸ್ ಎಂಬ ಕ್ರೈಸ್ತ ಪಾದ್ರಿಯ ಪ್ರತೀಕವೇ ಸಾಂತಾ ಕ್ಲಾಸ್ ಎಂಬ ನಂಬಿಕೆಯಿದೆ.

ಮನೆ ಮನೆಗಳಲ್ಲಿ ಕ್ರಿಸ್ಮಸ್ ವೃಕ್ಷ ನೆಡಲಾಗುತ್ತದೆ, ಅದನ್ನು ವಿದ್ಯುದ್ದೀಪಗಳಿಂದ ಸಿಂಗರಿಸಲಾಗುತ್ತದೆ. ವಿವಿಧೆಡೆ ಮನೆಯ ಒಳ ಹೊರಗೆಲ್ಲಾ ದೀಪಗಳ ಅಲಂಕಾರ ನಡೆಯುತ್ತದೆ. ನಕ್ಷತ್ರಾಕಾರದ ಗೂಡು ದೀಪ ಕೂಡ ಇರಿಸಲಾಗುತ್ತದೆ.

ಕ್ರಿಸ್ಮಸ್ ಔತಣಗಳು, ಕ್ರಿಸ್ಮಸ್ ಕೇಕ್‌ಗಳು ಇದೀಗ ಪ್ರಸಿದ್ಧವಾಗುತ್ತಿವೆ. ಕ್ರಿಸ್ಮಸ್ ಹೆಸರಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ, ಜಗತ್ತಿನ ಪ್ರಸಿದ್ಧ ತಾಣಗಳನ್ನು, ಅರಮನೆಗಳನ್ನು, ಕಟ್ಟಡಗಳನ್ನು ಹೋಲುವ ಬೃಹದಾಕಾರದ ಕೇಕುಗಳ ಪ್ರದರ್ಶನವೂ ಅಲ್ಲಲ್ಲಿ ನಡೆಯುತ್ತದೆ. ಇದಲ್ಲದೆ ಕ್ರೈಸ್ತ ಬಾಂಧವರು ಮನೆ ಮನೆಗಳಲ್ಲಿ ಕ್ರಿಸ್ಮಸ್ ಹಟ್ ರಚಿಸಿರುತ್ತಾರೆ. ಅಂದರೆ, ಬೊಂಬೆಗಳು, ಕುರಿಗಳು, ಹಸಿರುಹುಲ್ಲುಗಾವಲು ಮುಂತಾದವುಗಳೊಂದಿಗೆ ಯೇಸು ಜನಿಸಿದ ಗುಡಿಸಲು, ಯೇಸು ಜನನದ ದೃಶ್ಯಾವಳಿಗಳನ್ನು ಹೊಂದಿರುವ ಒಂದು ಪುಟ್ಟ ಚಿತ್ರಣವು ಅಲ್ಲಲ್ಲಿ ಸ್ಥಾಪಿಸಲ್ಪಟ್ಟಿರುತ್ತದೆ. ಅದನ್ನು ಗೋದಲಿ ಎಂದೂ ಕರೆಯಲಾಗುತ್ತದೆ.

ಕ್ರಿಸ್ಮಸ್ ಮುನ್ನಾದಿನ ಅಂದರೆ ಕ್ರಿಸ್ಮಸ್ ಈವ್‌ನಂದು ಹಾಗೂ ಕ್ರಿಸ್ಮಸ್ ದಿನ ಎಲ್ಲಾ ಚರ್ಚುಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ನೆರವೇರುತ್ತದೆ.

ಇತ್ತೀಚಿನ ದಿನಗಳಲ್ಲಿ ಕ್ರಿಸ್ಮಸ್ ಭಕ್ತಿ ಭಾವಗಳ, ಸೌಹಾರ್ದತೆಯ, ಸಡಗರದ ಮತ್ತು ಸಾರ್ವಜನಿಕ ಬಾಂಧವ್ಯ ಬೆಸೆಯುವ ಹಬ್ಬವಾಗಿ ವಿಶ್ವಾದ್ಯಂತ ಆಚರಿಸಲ್ಪಡುತ್ತಿದೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರೈಸ್ತ ಧರ್ಮದ ಕುರಿತು

ಕ್ರಿಸ್ತ ಧರ್ಮದ ಆರಾಧನೆ ಮತ್ತು ಆಚರಣೆಗಳು

ತಮ್ಮ ದೈನಂದಿನ ಆಚರಣೆಗಳಲ್ಲಿ ಎಲ್ಲರೂ ಏಸುಕ್ರಿಸ್ತನ ಜೀವನವನ್ನು ಅನುಸರಿಸಲು ಪ್ರಯತ್ನಿಸಬೇಕು ಎಂದು ...

ಬೈಬಲ್ ಹಾಗೂ ಕ್ರಿಶ್ಚನ್‌ಧರ್ಮ

ಬೈಬಲ್ ಕ್ರಿಶ್ಚಿಯನ್ನರ ಪವಿತ್ರ ಗ್ರಂಥ. ಗ್ರೀಕ್ ಭಾಷೆಯ ಬಿಬ್ಲಿಯಾ (BIBLIA) ಎಂಬ ಪದದ ಆಂಗ್ಲ ರೂಪ ಬೈಬಲ್. ...

ಭೂಲೋಕ ರಾಜ: ಏಸುಪ್ರಭು

ಭೂಲೋಕ ರಾಜನಾದ ಏಸುವಿಗೆ ಜನ್ಮದ ಪ್ರಾರಂಭದಿಂದಲೇ ಅನೇಕ ವಿರೋಧಿಗಳಿದ್ದರು. ಏಸು ಜನಿಸಿದಾಗ ಹೇರೋದ್ ರಾಜನ ...

ಸಂತ ಫ್ರಾನ್ಸಿಸ್ ಕ್ಸೇವಿಯರ್

ಸಂತ ಫ್ರಾನ್ಸಿಸ್ ಕ್ಸೇವಿಯರ್ 1506ರ ಎಪ್ರಿಲ್ 7ರಂದು ಸ್ಪೇನ್‌ನಲ್ಲಿ ಜನಿಸಿದವರು. ಬರಿಯ 46 ವರ್ಷಗಳ ಕಾಲ ...