ಕನ್ಯಾ ರಾಶಿಯವರದ್ದೊಂದು ವಿಶೇಷ ವ್ಯಕ್ತಿತ್ವ!

ಈ ಬಾರಿ ಕನ್ಯಾ ರಾಶಿಯಲ್ಲಿ ಜನಿಸಿದ ಮಂದಿಯ ಗುಣಾವಗುಣಗಳನ್ನು ಬರೆಯಲಾಗಿದೆ. ಮಕ್ಕಳು, ಮಹಿಳೆ ಹಾಗೂ ಪುರುಷ ಈ ಮೂರು ವರ್ಗಗಳಲ್ಲಿ ಕನ್ಯಾ ರಾಶಿಯ ಮನುಷ್ಯ ಸಹಜ ಗುಣಗಳು ಹೇಗಿರುತ್ತವೆ ಎಂಬುದು ಇಲ್ಲಿ ಪರಾಮರ್ಶಿಸಲಾಗಿದೆ.

PTI
ಮಕ್ಕಳು: ಕನ್ಯಾ ರಾಶಿಯ ಮಗು ತುಂಬ ಮೌನವಾಗಿರುತ್ತದೆ. ಇತರ ಮಕ್ಕಳಿಗಿಂತ ಭಿನ್ನವಾಗಿ ಕಾಣುವ ಈ ರಾಶಿಯ ಮಕ್ಕಳು ತಮ್ಮಷ್ಟಕ್ಕೆ ಯಾರ ತಂಟೆಗೂ ಹೋಗದೆ ಇರುವುದೇ ಹೆಚ್ಚು. ಆದರೆ ಚುರುಕು ಬುದ್ಧಿ, ವಿಷಯವನ್ನು ಬಹುಬೇಗ ಗ್ರಹಿಸಬಲ್ಲ ಚಾಕಚಕ್ಯತೆ ಹಾಗೂ ತುಂಬಾ ಏಕಾಗ್ರತೆ ಹೊಂದಿರುತ್ತಾರೆ. ಈ ಮಕ್ಕಳು ಬೇರೆಯವರು ತಮಗೆ ಉಣಿಸುವುದನ್ನು ಇಷ್ಟಪಡಲಾರರು. ಆದರೆ, ತಾವೇ ಕೈಯಾರೆ ತಿನ್ನುತ್ತೇವೆಂದು ಹೊರಟ ಈ ಮಕ್ಕಳ ಹೊಟ್ಟೆ ಬಿಟ್ಟು ಊಟ ಬೇರೆಡೆ ಇರುವುದಂತೂ ಖಂಡಿತ. ಇದೊಂದನ್ನು ಹೊರತುಪಡಿಸಿದರೆ, ತಂಟೆ ತಕರಾರಿಲ್ಲದ ಮಕ್ಕಳು ಇವರು. ತುಂಬ ಕ್ಲೀನ್ ಹಾಗೂ ನೀಟಾಗಿ ತಮ್ಮ ವಸ್ತುಗಳನ್ನು ಇವರು ಇಟ್ಟುಕೊಳ್ಳುತ್ತಾರೆ.

ಈ ಮಕ್ಕಳು ಅಪರಿಚಿತ ವ್ಯಕ್ತಿಗಳೊಂದಿಗೆ ಇವರು ಬೇಗ ಹೊಂದಿಕೊಳ್ಳುವುದಿಲ್ಲ. ಆದರೆ ತಮಗೆ ತುಂಬ ಚೆನ್ನಾಗಿ ಪರಿಚಯವಿರುವವರೊಂದಿಗೆ ಆರಾಮವಾಗಿ ಕಾಲ ಕಳೆಯಬಲ್ಲರು. ಈ ಮಕ್ಕಳಿಗೆ ಶಿಸ್ತು ಕಲಿಸುವುದು ತುಂಬಾ ಸುಲಭ. ತಮ್ಮ ಹೋಂವರ್ಕನ್ನು ಬಹು ಬೇಗನೆ ನಿಗದಿತ ಸಮಯದೊಳಗೆ ಮುಗಿಸುವ ಈ ಮಕ್ಕಳು ಅದಕ್ಕಾಗಿ ರಚ್ಚೆ ಹಿಡಿಯುವುದಿಲ್ಲ. ಆದರೆ ಈ ಮಕ್ಕಳನ್ನು ತುಂಬಾ ತೆಗಳುವುದು, ಬೈಯುವುದು ಅಥವಾ ದೂರುವುದು ಮಾಡಿದರೆ ಇವರು ಬೇಗ ಬಾಡಿಹೋಗುತ್ತಾರೆ. ಹಾಗಾಗಿ ತಿದ್ದಬೇಕಾದ ಸಂದರ್ಭ ತುಂಬ ಮೆದುವಾಗಿ, ಪ್ರೀತಿಯಿಂದ ಹೇಳಿದರೆ ಈ ಮಕ್ಕಳು ಬಹುಬೇಗನೆ ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳುತ್ತಾರೆ.

ಈ ಮಕ್ಕಳು ಸ್ವಲ್ಪ ಅವಲಂಬಿಗಳಾಗಿರುವುದು ಹೆಚ್ಚು. ಗೆಳೆಯ ಗೆಳತಿಯರೊಂದಿಗೆ ಹೊಂದಿಕೊಂಡು ಆಟವಾಡಿದರೂ, ಅಮ್ಮ, ಅಪ್ಪ ಹಾಗೂ ತನ್ನ ಆಪ್ತ ಕುಟುಂಬದ ಆಸರೆ ಇವರು ಹೆಚ್ಚಾಗಿ ಬಯಸುತ್ತಾರೆ. ಅವರಿಗೆ ವಿಧೇಯರಾಗಿಯೂ ಇರುತ್ತಾರೆ. ಆದರೆ ಶಿಕ್ಷಕರು ಅಥವಾ ಇತರ ಯಾರೇ ಆದರೂ ತಾನು ಮಾಡಿಲ್ಲದ ತಪ್ಪಿಗೆ ಕೆಟ್ಟದಾಗಿ ಬೈದರೆ, ಹೊಡೆದರೆ ಇವರು ಖಂಡಿತಾ ಸಹಿಸಲಾರರು.

ಹೆಚ್ಚು ಹೆಚ್ಚು ಹೊಸ ವಿಷಯಗಳನ್ನು ಕಲಿಯುವುದೆಂದರೆ ಇವರಿಗೆ ಅಚ್ಚುಮೆಚ್ಚು. ತುಂಬ ಆತ್ಮೀಯ ಗೆಳಯ ಗೆಳತಿಯರನ್ನು ಇವರು ಹೊಂದಿರುವುದಿಲ್ಲ. ಅಷ್ಟೇ ಅಲ್ಲ, ಅಷ್ಟು ಬೇಗನೆ ತಮ್ಮ ಗೆಳೆಯ ಗೆಳತಿಯಾಗಿ ಬೇರೆಯವರನ್ನು ಸ್ವೀಕರಿಸುವುದಿಲ್ಲ. ತುಂಬ ಭಾವುಕರಾದಾಗ ಈ ಮಕ್ಕಳು ಕೇವಲ ಮಾನಸಿಕ ಸಾಂತ್ವನವಷ್ಟೇ ಅಲ್ಲ, ತಮ್ಮ ಹೆತ್ತವರಿಂದ ದೈಹಿಕ ಸಾಂತ್ವನವನ್ನೂ ಬಯಸುತ್ತಾರೆ. ಆದರೆ ತಾವು ದೈಹಿಕ ಸಾಂತ್ವನ ಬಯಸುತ್ತಿದ್ದೇವೆಂದು ನೇರವಾಗಿ ಹೇಳದಿದ್ದರೂ, ಅಮ್ಮ-ಅಪ್ಪನ ಪ್ರೀತಿಯ ಬೆಚ್ಚನೆಯ ಸ್ಪರ್ಶ, ಕೆನ್ನೆಗೊಂದು ಮುತ್ತು ದಕ್ಕಿದರೆ ಇವರಿಗೆ ಸಮಾಧಾನ.

ಈ ಮಕ್ಕಳು ಸ್ವಲ್ಪ ನಾಚಿಕೆಯ ಸ್ವಭಾವದವರಾದರೂ, ಇತರ ಮಕ್ಕಳಂತೆ ತಾವೂ ಕೂಡಾ ಬೇಗನೆ ಬೇರೆಯವರನ್ನು ಆಕರ್ಷಿಸುವ ವ್ಯಕ್ತಿತ್ವ ಹೊಂದಿರುತ್ತಾರೆ. ಶಾಲೆಗೆ ಹೋಗುವುದರಲ್ಲೂ ಇವರು ತುಂಬ ಪ್ರಾಮಾಣಿಕರು. ತಡವಾಗಿ ಎಂದಿಗೂ ಶಾಲೆಗೆ ಹೋಗುವವರಲ್ಲ. ತಾವು ಸರಿಯಾಗಿ ನೀಟಾಗಿ ತಮ್ಮ ವಸ್ತುಗಳನ್ನು ಇಡುವುದಲ್ಲದೆ, ಇತರರೂ ಹಾಗೆಯೇ ಇರಬೇಕೆಂದು ಬಯಸುವ ಮಕ್ಕಳು ಇವರು. ಹಾಗಾಗಿ ಬೇರೆಯವರು ನೀಟಾಗಿ ಇಲ್ಲದಿದ್ದರೆ ನೇರವಾಗಿ ಅವರೆದುರೇ ದೂರುವ ಗುಣವೂ ಇವರಲ್ಲಿದೆ.

IFM
ಪುರುಷ: ಕನ್ಯಾ ರಾಶಿಯ ಪುರುಷನ ಜತೆಗೆ ನೀವು ಪ್ರೀತಿಯಲ್ಲಿ ಬಿದ್ದಿದ್ದೀರಿ ಎಂದಾದರೆ ನೀವು ಪ್ರಾಕ್ಟಿಕಲ್ ಜಗತ್ತಿಗೆ ಕಾಲಿಟ್ಟಂತೆ. ಅಲ್ಲಿ ಸುಖಾಸುಮ್ಮನೆ ಕನಸು ಕಾಣುವುದಕ್ಕೆ ಜಾಗವಿಲ್ಲ. ಹಾಗಾಗಿ ತುಂಬ ಸೆಂಟಿಮೆಂಟಲ್ ನೀವಾಗಿದ್ದರೆ, ಮುಂದುವರಿಯದಿರುವುದೇ ಒಳ್ಳೆಯದು. ಕನ್ಯಾ ರಾಶಿಯ ಪುರುಷ ಬಹುಬೇಗನೆ ಯಾವ ಹುಡುಗಿಯನ್ನೂ ಇಷ್ಟಪಡುವುದಿಲ್ಲ. ಹಾಗೆ ಆತ ಪ್ರೀತಿಸಿದರೂ ಆತನಿಂದ ರೊಮ್ಯಾಂಟಿಕ್ ಹಾಡುಗಳನ್ನೆಲ್ಲ ನಿರೀಕ್ಷಿಸಬೇಡಿ. ಹಾಗೆಂದ ಮಾತ್ರಕ್ಕೆ ಕನ್ಯಾ ರಾಶಿಯ ಪುರುಷನಿಗೆ ಪ್ರೀತಿಯಸಲು ಗೊತ್ತೇ ಇಲ್ಲವೆಂದು ತಿಳಿಯುವ ಅಗತ್ಯವಿಲ್ಲ. ಆತನಿಗೂ ಪ್ರೀತಿ- ಪ್ರೇಮ ಎಲ್ಲವೂ ಬೇಕು. ಆದರೆ ಆತ ಅದನ್ನು ವ್ಯಕ್ತಪಡಿಸುವ ವಿಧಾನ ಇತರರಿಗಿಂತ ಡಿಫರೆಂಟ್ ಅಷ್ಟೆ.

ತನ್ನ ಕುಟುಂಬ, ಗೆಳೆಯ ವರ್ಗಕ್ಕೆ ತುಂಬ ನಿಷ್ಠನಾಗಿರುವ ಈತ, ಅವರಿಗೆ ಎಂಥ ಸಹಾಯ ಮಾಡಲೂ ಸಿದ್ಧನಿರುತ್ತಾನೆ. ತುಂಬ ಭಾವುಕರಾಗಿರುವುದು ಇವರಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ತುಂಬ ಸೆಂಟಿಮೆಂಟ್‌ಗಳನ್ನು ಪ್ರದರ್ಶಿಸುವುದು, ಕಣ್ಣೀರಾಗಿ ಹೇಳುವುದು ಮುಂತಾದ ಭಾವುಕ ಗಳಿಗೆಗಳನ್ನೆಲ್ಲಾ ಆತ ಇಷ್ಟಪಡುವುದಿಲ್ಲ. ಆದರೆ ಗಂಡನಾಗಿ ನಿಭಾಯಿಸಬೇಕಾದ ಎಲ್ಲ ಕರ್ತವ್ಯಗಳನ್ನೂ ನಿಭಾಯಿಸುತ್ತಾನೆ. ಹಾಗಂತ ಈತ ಶುದ್ಧ ಒರಟ, ಮಾನವನ ಭಾವನೆಗಳೇ ಈತನಿಗೆ ಅರ್ಥವಾಗುವುದಿಲ್ಲ ಎಂದು ತಿಳಿಯಬೇಕಾಗಿಲ್ಲ.

ತನ್ನ ಜತೆಗೇ ಒಂದು ಉತ್ತಮ ಸಂಬಂಧ, ಪ್ರೀತಿ, ಸಹಾನುಭೂತಿ, ತನ್ನ ಸಮಸಮಕ್ಕಿರುವ ಬುದ್ಧಿವಂತಿಕೆ... ಹೀಗೆ ಇವೆಲ್ಲವೂ ಈತ ಇಷ್ಟಪಡಲು ಕಾರಣವಾಗುತ್ತದೆ. ತನ್ನದೇ ಆದ ಖಾಸಗಿ ವಲಯವನ್ನು ಈತ ಸದಾ ಬಯಸುತ್ತಾನೆ. ತೀರಾ ಅದರೊಳಗೆ ಪ್ರವೇಶಿಸುವುದು ಈತನಿಗೆ ಸರಿಬರೋದಿಲ್ಲ.

ಜನರೊಂದಿಗೆ ಬಹಳ ಎಚ್ಚರಿಕೆಯಿಂದ ವ್ಯವಹರಿಸುವ ಇವರು, ಹುಡುಗಿಯರೊಂದಿಗೆ ಫ್ಲರ್ಟ್ ಮಾಡುತ್ತಾ ರೊಮ್ಯಾನ್ಸ್ ಮಾಡುತ್ತಾ ಕಾಲ ತಳ್ಳುವವರಲ್ಲ. ತಮಗೆ ಯಾವುದೇ ಗರ್ಲ್‌ಫ್ರೆಂಡೇ ಇಲ್ಲದಿದ್ದರೂ ಅದಕ್ಕಾಗಿ ತಲೆಕೆಡಿಸಿಕೊಳ್ಳುವ ಜಾಯಮಾನ ಇವರದಲ್ಲ. ಹಾಗಾಗಿ ಕನ್ಯಾ ರಾಶಿಯ ಪುರುಷೊಂದಿಗೆ ನಿಜಕ್ಕೂ ಪ್ರೀತಿಯಲ್ಲಿ ಬಿದ್ದರೆ, ಆತ ಈ ಪ್ರೀತಿಯನ್ನು ಸಂಬಂಧವಾಗಿ ಮಾರ್ಪಡಿಸಲು ಇಷ್ಟಪಡುತ್ತಾನೆ ಎಂದೇ ಅರ್ಥ. ಸುಮ್ಮನೆ ನಾಲ್ಕು ದಿನ ಚೆಲ್ಲಾಟವಾಗಿ ಐದನೇ ದಿನ ಕೈಕೊಟ್ಟು ಓಡಿ ಹೋಗುವ ಪ್ರೇಯಸಿಯರು ಈತನಿಗೆ ಬೇಕಾಗಿಲ್ಲ. ಇವರೂ ಕೂಡಾ ಹೃದಯದಲ್ಲಿ ತುಂಬಾ ಸೆನ್ಸಿಟಿವ್ ಆಗಿರುತ್ತಾರೆ. ಪ್ರಾಮಾಣಿಕತೆ ಹಾಗೂ ದಯೆ ಇವರ ಇನ್ನೆರಡು ಗುಣಗಳು. ಕನ್ಯಾ ರಾಶಿಯ ಪುರುಷನ ಪ್ರೀತಿ ತುಂಬ ಪರಿಶುದ್ಧವಾಗಿರುವುದಲ್ಲದೆ, ಮುಗ್ಧ ಹಾಗೂ ಪ್ರಾಮಾಣಿಕವಾಗಿರುತ್ತದೆ. ಆದರೆ ಅದನ್ನು ಗಳಿಸಲು ಮಾತ್ರ ಸ್ವಲ್ಪ ಸಮಯ ಬೇಕಾಗುತ್ತದೆ ಅಷ್ಟೆ.

ಮೊದಲ ನೋಟದಲ್ಲೇ ಪ್ರೀತಿಗೆ ಬೀಳುವ ಮಂದಿ ಇವರಲ್ಲ. ಪ್ರೀತಿ, ಸಂಬಂಧದ ವಿಷಯವೂ ಸೇರಿದಂತೆ ಎಲ್ಲ ವಿಷಯದಲ್ಲೂ ಇವರು ತುಂಬ ಎಚ್ಚರಿಕೆಯಿಂದ ಹೆಜ್ಜೆಯಿಡುವವರು. ಒಮ್ಮೆ ಇಂಥ ಪುರುಷರ ಮನಗೆದ್ದುಬಿಟ್ಟರೆ ಮತ್ತೆಂದೂ ನೀವು ವಾಪಾಸು ಹೋಗುವ ದಾರಿ ನೋಡುವುದಿಲ್ಲ. ಅಷ್ಟೊಂದು ಕಾಳಜಿ, ಪ್ರೀತಿ ಇವರು ನೀಡುತ್ತಾರೆ. ತುಂಬ ತಾಳ್ಮೆಯ, ವಿಧೇಯ, ನಿಷ್ಠ ಹಾಗೂ ಪ್ರಾಮಾಣಿಕ ಗಂಡನಾಗಿರುತ್ತಾರೆ ಇವರು. ಆತನ ನಿಷ್ಠತೆಯ ಬಗ್ಗೆ ಹೆಂಡತಿಯಾದವಳು ಯಾವತ್ತೂ ಚಿಂತಿಸಬೇಕಾದ, ಸಂಶಯಪಡಬೇಕಾದ ಅಗತ್ಯ ಇರುವುದಿಲ್ಲ. ಆದರೆ ಹೆಂಡತಿಯ ಸೆರಗು ಹಿಡಿದೇ ಓಡಾಡಿಕೊಂಡು ಮುದ್ದು ಮಾಡುತ್ತಲೇ ಇರುವ ಸ್ವಭಾವವೂ ಇವರದಲ್ಲ.

ಇವರ ಸ್ಮರಣ ಶಕ್ತಿ ಅದ್ಭುತವಾಗಿರುತ್ತದೆ. ತುಂಬಾ ಅಸೂಯೆ ಪಡುವ ವ್ಯಕ್ತಿತ್ವ ಇವರದಲ್ಲವಾದರೂ, ತುಂಬಾ ಪೊಸೆಸಿವ್ ಸ್ವಭಾವ ಇವರದ್ದು. ತಾವು ಹೆಂಡತಿಗೆ ನಿಷ್ಠರಾಗಿರುವ ಹಾಗೆಯೇ ಹೆಂಡತಿಯೂ ತನಗೆ ನಿಷ್ಠಳಾಗಿರಬೇಕೆಂದು ಬಯಸುತ್ತಾರೆ. ಏನಾದರೂ ಘಟಿಸಿಹೋದರೆ ಇವರ ಪಾಲಿಗೆ ಅಷ್ಟೇ ಸಾಕು. ಕಣ್ಣೀರಿನ ಮನವಿಗೆಲ್ಲ ಇವರು ಕರಗುವುದಿಲ್ಲ.

ತಲೆಯಲ್ಲಿ ಮಿದುಳೇ ಇಲ್ಲದ ಸೌಂದರ್ಯಕ್ಕೆ ಇವರು ಚಿಕ್ಕಾಸಿನ ಬೆಲೆಯನ್ನೂ ನೀಡುವುದಿಲ್ಲ. ಬುದ್ಧಿಮತ್ತೆಗೆ ಸದಾ ಮೊದಲ ಪ್ರಾಶಸ್ತ್ಯ ನೀಡುವ ಇವರು ಅಂತಹ ಹುಡುಗಿಯೇ ತನ್ನ ಹೆಂಡತಿಯಾಗುವುದನ್ನು ಬಯಸುತ್ತಾರೆ. ಉತ್ತಮ ಡ್ರೆಸ್ಸಿಂಗ್ ಸೆನ್ಸ್, ನೀಟಾದ ಒಪ್ಪ ಓರಣವಿರುವ ಮನೆ, ಉತ್ತಮ ಅಡುಗೆ ಮಾಡುವ ಕಲೆ ಇವೆಲ್ಲವೂ ತಮ್ಮ ಹೆಂಡತಿಗಿರಬೇಕು ಎಂದು ಬಯಸುವವರು ಇವರು. ಇವರು ಸ್ವಲ್ಪ ಎಗರಾಡಲು, ಸಿಟ್ಟು ಮಾಡಲು ಶುರು ಮಾಡಿದರೆ ಇವರನ್ನು ಸುಮ್ಮನೆ ಅವರಷ್ಟಕ್ಕೆ ಬಿಡಿ. ಸ್ವಲ್ಪ ಹೊತ್ತಿನಲ್ಲೇ ಸರಿಯಾಗಿಬಿಡುತ್ತಾರೆ.

ತಂದೆಯಾಗಿ ಉತ್ತಮ ಜವಾಬ್ದಾರಿ ನಿಭಾಯಿಸುವ ಇವರು ತಮ್ಮ ಮಕ್ಕಳ ಬುದ್ಧಿವಂತಿಕೆಯ್ನನು ಹೆಚ್ಚು ಮಾಡಲು ಸರ್ವ ಪ್ರಯತ್ನವನ್ನೂ ಮಾಡುತ್ತಾರೆ. ಉತ್ತಮ ನಡತೆ, ಇನ್ನೊಬ್ಬರಿಗೆ ಸಹಾಯ ಮಾಡುವ ಗುಣ, ಶಿಸ್ತು ಎಲ್ಲವನ್ನೂ ತಮ್ಮ ಮಕ್ಕಳಿಗೆ ಕಲಿಸುತ್ತಾರೆ. ಆರ್ಥಿಕವಾಗಿ ಯಾವತ್ತೂ ತುಂಬ ಪಕ್ಕಾ ಆಗಿರುವ ಇವರು ಉತ್ತಮ ಲೆಕ್ಕಾಚಾರ ಹೊಂದಿರುತ್ತಾರೆ. ಎಲ್ಲಿಯೂ ತಪ್ಪುವುದಿಲ್ಲ. ಅಷ್ಟೇ ಅಲ್ಲ, ಉತ್ತಮವಾಗಿ ಹಣಕಾಸು ವ್ಯವಹಾರ ನಿಭಾಯಿಸಬಲ್ಲವರಾಗಿರುತ್ತಾರೆ.

IFM
ಮಹಿಳೆ: ಕನ್ಯಾ ರಾಶಿಯ ಮಹಿಳೆಯನ್ನು ನೋಡುವಾಗ ತುಂಬ ನಾಚಿಕೆಯ ಸ್ವಭಾವದಂತೆ ಕಂಡರೂ ಆಕೆ ಕಂಡಷ್ಟು ನಾಚಿಕೆಯ ಸ್ವಭಾವದವಳಾಗಿರುವುದಿಲ್ಲ ಎಂಬುದು ಮೊದಲ ಸತ್ಯ. ಆಕೆಗೆ ಸಾಕಷ್ಟು ಮನೋಬಲ ಇರುತ್ತದೆ. ತನ್ನನ್ನು ಪ್ರೀತಿಸುವವರಿಗಾಗಿ ಏನೂ ಮಾಡಬಲ್ಲವಳು ಈಕೆ. ಲವ್ ಎಂದರೆ ಈಕೆಗೆ ಹುಡುಗಾಟವಲ್ಲ. ಅದು ನಿಜವಾದ, ಪರಿಶುದ್ಧವಾದ ಪ್ರೀತಿ.

ಪರಿಪೂರ್ಣ ನಾರಿ ಎಂದು ಹೇಳಬಹುದಿದ್ದರೆ ಧಾರಾಳವಾಗಿ ಕನ್ಯಾ ರಾಶಿಯ ಮಹಿಳೆಯನ್ನು ಹೇಳಬಹುದು. ಇತರ ಮಹಿಳೆಯರಿಗಿರುವಂತೆ ಎಲ್ಲ ಚಾರ್ಮ್ ಅವಳಿಗಿದ್ದರೂ, ಆಕೆ ದುರ್ಬಲಳಲ್ಲ. ಒಮ್ಮೆ ಆಕೆ ತನ್ನ ಮನಸ್ಸನ್ನು ಯಾವುದಾದರೂ ಒಂದು ಕಾರ್ಯದಲ್ಲಿ ಕೇಂದ್ರೀಕರಿಸಿದರೆ ಆಕೆ ಅದನ್ನು ಮಾಡದೆ ಅರ್ಧದಲ್ಲೇ ಬಿಡಳು.

ಈಕೆ ಪ್ರೀತಿ ಹಾಗೂ ಕೌಟುಂಬಿಕ ಸಂಬಂಧಕ್ಕೆ ಯಾವತ್ತೂ ನಿಷ್ಠಳಾಗಿ ಇರುತ್ತಾಳೆ. ಈಕೆ ಭಾವುಕಳೂ ಹೌದು. ಆದರೆ ಅಷ್ಟೇ ಪ್ರಾಕ್ಟಿಕಲ್ ಕೂಡಾ ಹೌದು. ಆಕೆ ರೊಮ್ಯಾನ್ಸ್ ಮಾಡಿದಷ್ಟೇ ಕಾಮನ್ ಸೆನ್ಸ್ ಕೂಡಾ ಹೊಂದಿರುವವಳು. ಪ್ರೀತಿಯಲ್ಲಿ ಆಕೆ ಬಿದ್ದಳೆಂದಾದರೆ ಆಕೆ ಅತ್ಯಂತ ಹೆಚ್ಚು ಪ್ರೀತಿ ಕಾಳಜಿ ಇವೆಲ್ಲವನ್ನೂ ಧಾರೆಯೆರೆಯುತ್ತಾಳೆ. ಇಂತಹ ಗುಣ ಎಲ್ಲ ಮಹಿಳೆಯರಲ್ಲಿ ಸಿಗಲಿಕ್ಕಿಲ್ಲ. ಆದರೆ ಅವರನ್ನು ಪ್ರೀತಿಯಲ್ಲಿ ಬೀಳಿಸುವುದೇ ಕಷ್ಟದ ಕೆಲಸ. ಅಷ್ಟೆಲ್ಲಾ ಸುಲಭವಾಗಿ ಪ್ರೀತಿಯಲ್ಲಿ ಇವರು ಬೀಳುವುದೂ ಇಲ್ಲ. ಸಂಪೂರ್ಣ ಪರ್ಫೆಕ್ಟ್ ಪ್ರೀತಿಯನ್ನು ಬಯಸುವ ಇವರು ಅಂತಹುಗಳನ್ನು ಅಳೆದು ತೂಗಿಯಷ್ಟೇ ಪ್ರೀತಿಸಲು ಶುರು ಮಾಡುತ್ತಾರೆ.

ಇದರ ಜತೆಗೆ ಕನ್ಯಾ ರಾಶಿಯ ಮಹಿಳೆ ತಾನು ಅತ್ಯಂತ ಪರ್ಫೆಕ್ಟ್ ಎಂದು ನಂಬಿರುವವಳು. ಹೀಗಾಗಿ ತಾನು ಮಾಡಿದ್ದೆಲ್ಲಾ ಸರಿ ಎಂಬ ಭಾವನೆ ಆಕೆಯಲ್ಲಿರುತ್ತದೆ. ಆಕೆ ತುಂಬ ಸಿಟ್ಟಾದಾಗ ಇನ್ನೊಬ್ಬರಿಗೆ ಕಿರಿಕಿರಿ ಉಂಟು ಮಾಡಿಬಿಡುವಷ್ಟು ಬದಲಾಗುತ್ತಾಳೆ. ಹಾಗಾಗಿ ಆಕೆಯೊಂದಿಗೆ ವಾದಕ್ಕಿಳಿಯದಿರುವುದೇ ಒಳ್ಳೆಯದು. ಅಷ್ಟೇ ಅಲ್ಲ, ಆಕೆಯ ತಾಳ್ಮೆ ಪರೀಕ್ಷೆ ಮಾಡುವುದು ಕೂಡಾ ಅಷ್ಟು ಒಳ್ಳೆಯದಲ್ಲ. ಆಕೆಗೆ ಸಿಟ್ಟು ಬಂದಿರುವಾಗ ಆಕೆಯನ್ನು ಆಕೆಯಷ್ಟಕ್ಕೇ ಬಿಟ್ಟುಬಿಡುವುದು ಒಳ್ಳೆಯದು. ಆಕೆಯ ಜತೆಗೆ ವಾದಕ್ಕಿಳಿದರೆ, ಆಕೆಯ ಸಿಟ್ಟು ಏರುತ್ತಾ ಹೋಗುತ್ತದೆ. ಹಾಗಾಗಿ ಮೌನವಾಗಿದ್ದರೆ, ಆಕೆ ಸ್ವಲ್ಪ ಹೊತ್ತಿನಲ್ಲೇ ಸಹಜ ಸ್ಥಿತಿಗೆ ಬರುತ್ತಾಳೆ.

ಕನ್ಯಾ ರಾಶಿಯ ಹುಡುಗಿ ನಿಮ್ಮ ಪತ್ನಿಯಾಗಿದ್ದರೆ ಖಂಡಿತಾ ನೀವು ಸ್ವಲ್ಪ ಬದಲಾಗಬೇಕಾಗುತ್ತದೆ. ಯಾಕೆಂದರೆ, ಆಕೆ ಯಾರನ್ನೇ ಆಗಲಿ ಕೆಟ್ಟ ಪದಗಳಿಂದ ಬೈಯುವುದನ್ನು ಇಷ್ಟಪಡುವುದಿಲ್ಲ. ಅಷ್ಟೇ ಅಲ್ಲ. ಹೇಳಿದ ಸಮಯಕ್ಕಿಂತ ತಡವಾಗಿ ಬರುವುದು, ಕೆಟ್ಟದಾಗಿ ಡ್ರೆಸ್ ಮಾಡಿಕೊಳ್ಳುವುದು, ಟೇಬಲ್ ಮ್ಯಾನರ್ಸ್ ಇಲ್ಲದಿರುವುದು... ಇವೆಲ್ಲ ಆಕೆಗೆ ಸಹಿಸಲ ಸಾಧ್ಯವಾಗುವುದೇ ಇಲ್ಲ. ಆಕೆ ಹಣಕಾಸಿನ ವಿಚಾರದಲ್ಲಿ ತುಂಬ ಜಾಗ್ರತೆ ಹೊಂದಿದವಳಾಗಿದ್ದು, ಚೆನ್ನಾಗಿ ಹಣಕಾಸು ವ್ಯವಹಾರಗಳ್ನು ಇಟ್ಟುಕೊಳ್ಳುವ ಚಾಕಚಕ್ಯತೆ ಹೊಂದಿರುತ್ತಾಳೆ. ಆದರೆ ಸಿಕ್ಕಸಿಕ್ಕವುಗಳಿಗೆಲ್ಲಾ ಹಣ ಖರ್ಚು ಮಾಡುವುದು ಆಕೆಗೆ ಇಷ್ಟವಿಲ್ಲ.

ತೋರಿಕೆಯ ಪ್ರೀತಿ ಆಕೆಗೆ ಆಗಿಬರುವುದಿಲ್ಲ. ಅಲ್ಲದೆ ತಾನೆಷ್ಟು ಪ್ರೀತಿಸುತ್ತಿದ್ದೇನೆಂದು ಎಲ್ಲರಿಗೂ ಕಾಣುವಂತೆ ವ್ಯವಹರಿಸುವುದೂ ಆಕೆಗಿಷ್ಟವಿಲ್ಲ. ಆದರೆ, ಏನನ್ನೂ ತೋರ್ಪಡಿಸದೇ ನಿಜವಾದ ಪ್ರೀತಿ ಆಕೆಯ ರಕ್ತದಲ್ಲೇ ಬಂದಿರುತ್ತದೆ. ಆಕೆಯ ಅಭಿರುಚಿ ತುಂಬಾ ಚೆನ್ನಾಗಿರುತ್ತದೆ. ಪ್ರೌಢತೆ ಆಕೆಯ ಮತ್ತೊಂದು ಗುಣ. ಯಾವುದನ್ನೂ ಪ್ರೌಢವಾಗಿ ಯೋಚಿಸುತ್ತಾಳಲ್ಲದೆ, ವಸ್ತುಗಳ ಆಯ್ಕೆಯಲ್ಲೂ ಆಕೆಯದ್ದು ಎತ್ತಿದ ಕೈಯೇ. ನೀವು ಸಂಗಾತಿಯಾಗಿ ಆಕೆಯನ್ನು ನಿಜಕ್ಕೂ ಇಂಪ್ರೆಸ್ ಮಾಡಬೇಕೆಂಬ ಬಯಕೆಯಿದ್ದರೆ, ಆಕೆಯನ್ನು ಯಾವುದಾದರೂ ಪ್ರಶಾಂತವಾದ ನೈಸರ್ಗಿಕವಾಗಿರುವ ಹಸಿರು ಪ್ರಕೃತಿಯ ಮಡಿಲಿಗೋ, ಯಾವುದಾದರೂ ಆರ್ಟ್ ಗ್ಯಾಲರಿಗೋ, ನಾಟಕ ಮಂದಿರಕ್ಕೋ ಕರೆದುಕೊಂಡು ಹೋಗಿ.

ಕನ್ಯಾ ರಾಶಿಯ ಮಹಿಳೆ ನಿಜಕ್ಕೂ ಒಂದು ಸಂಪೂರ್ಣ ಸ್ತ್ರೀ. ಎಲ್ಲ ಕೆಲಸವನ್ನೂ ಪರ್ಫೆಕ್ಟ್ ಆಗಿ ಮಾಡಬಯಸುವ ಇವರು ತಮ್ಮ ವಿಶೇಷ ನಾರೀ ಕಳೆ ಹಾಗೂ ನಡತೆಯಿಂದಲೇ ಸಂಗಾತಿಯನ್ನು ಪ್ರಸನ್ನರಾಗಿಸುತ್ತಾರೆ. ತುಂಬಾ ಸೆನ್ಸಿಟಿವ್ ಆಗಿದ್ದರೂ, ನಿಮಗೆ ಅವರ ಸಪೋರ್ಟ್ ಬೇಕೆಂಬ ಸಂದರ್ಭದಲ್ಲಿ ಗಟ್ಟಿಯಾಗಿ ನಿಮ್ಮ ಜತೆಗೆ ಎದೆಗುಂದದೆ ನಿಲ್ಲುತ್ತಾರೆ. ಮಕ್ಕಳೊಂದಿಗೆ ತುಂಬ ಫ್ರೆಂಡ್ಲೀ ಆಗಿದ್ದರೂ, ತನ್ನ ಬೆನ್ನ ಹಿಂದೆಯೇ ಅವರು ಸುತ್ತುವುದನ್ನು ಆಕೆ ಬಯಸೋದಿಲ್ಲ. ಅವರಿಗೆ ಅವರದೇ ಆದ ಸ್ವಾತಂತ್ರ್ಯ ನೀಡುವ ಈಕೆ ಮಕ್ಕಳಿಂದ ಸಂಪೂರ್ಣ ಶಿಸ್ತನ್ನೂ ಬಯಸುತ್ತಾಳೆ. ಆಕೆ ಇನ್ನೊಬ್ಬರು ತಪ್ಪು ಮಾಡಿದಾಗ ನೇರವಾಗಿಯೇ ಟೀಕಿಸುವ ಗುಣ ಹೊಂದಿದ್ದರೂ, ತಾನು ತಪ್ಪು ಮಾಡಿದಾಗ ಇನ್ನೊಬ್ಬರು ತನ್ನನ್ನು ಟೀಕಿಸುವುದನ್ನು ಮಾತ್ರ ಒಪ್ಪಲಾರರು. ಇದಕ್ಕೆ ಕಾರಣವೂ ಇದೆ. ಆಕೆಗೆ ತನ್ನ ತಪ್ಪುಗಳು ಗೊತ್ತು. ಆ ತಪ್ಪುಗಳನ್ನು ಮತ್ತೆ ಮತ್ತೆ ನೆನಪಿಸೋದು ಆಕೆಗೆ ಬೇಕಿರುವುದಿಲ್ಲ.

ಕನ್ಯಾ ರಾಶಿಯ ಮಹಿಳೆಯೊಂದಿಗಿರುವುದೇ ಒಂದು ಉತ್ತಮ ಬೆಚ್ಚಗಿನ ಅನುಭವ. ಮನೆಯನ್ನು ಒಪ್ಪ ಓರಣವಾಗಿಡುವ ಇವರು, ಎಲ್ಲವನ್ನೂ ನೀಟ್ ಹಾಗೂ ಕ್ಲೀನ್ ಆಗಿ ಇಟ್ಟಿರುತ್ತಾರೆ. ಆಕೆಗೆ ತಮಾಷೆ, ಹಾಸ್ಯದ ಮುಖವೂ ಇದೆ. ಆಕೆ ನಕ್ಕಾಗ ಪುಟ್ಟ ಪುಟ್ಟ ಗಂಟೆಗಳು ಒಂದಕ್ಕೊಂದು ತಾಗಿ ಕಿಣಿಕಿಣಿ ಎಂಬ ಸದ್ದು ಬಂದಂತೆ ಅನಿಸುತ್ತದೆ. ಹೌದು ಕೂಡಾ... ಗಮನಿಸಿ ನೋಡಿ!!!ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

ನಾಗದೋಷವಿದೆಯಾ? ಇತ್ತ ಕಣ್ಣಾಯಿಸಿ

ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯನೂ ಒಂದಲ್ಲಾ ಒಂದು ರೀತಿಯ ಸಮಸ್ಯೆಯಿಂದ ಬಳಲುತ್ತಿರುತ್ತಾನೆ. ಹಿಂದೂ ಧರ್ಮದ ...

ಮದುವೆ ಓಕೆ... ಮಹೂರ್ತ ಯಾಕೆ ?

ಹಿಂದೂ ಧರ್ಮಪರಂಪರೆಯಲ್ಲಿ ವಿವಾಹವೆಂಬುದು ಒಬ್ಬ ವ್ಯಕ್ತಿ ಗೃಹಸ್ಥಾಶ್ರಮವನ್ನು ಪ್ರವೇಶಿಸುವ ಒಂದು ...

ನಿಮ್ಮ ಬೆರಳಲ್ಲಿ ಶಂಖ, ಚಕ್ರ, ಕಳಶ! ಯಾವುದಿದೆ?

ಭಾರತೀಯ ಹಸ್ತ ಸಾಮುದ್ರಿಕಾಶಾಸ್ತ್ರದ ಪ್ರಕಾರ ವ್ಯಕ್ತಿಯ ಕೈಬೆರಳುಗಳಲ್ಲಿ ಚಕ್ರ, ಶಂಖ, ಕಳಶ, ಶೀಪ ಆಕಾರದ ...

ಶುಭ ಮುಹೂರ್ತಕ್ಕಾಗಿ 'ಚೌಘಡಿಯಾ'

ಪ್ರತಿಯೊಂದು ಕಾರ್ಯ ಆರಂಭಿಸುವ ಮುನ್ನ, ಅದರ ಸಾಫಲ್ಯಕ್ಕಾಗಿ ಶುಭ ಮುಹೂರ್ತ ನೋಡುವುದು ಭಾರತೀಯ ...