ಒಳ್ಳೆಯ ಮಾತು ಪ್ರೇರೇಪಿಸುವ ಮಕರ ಸಂಕ್ರಾಂತಿ

 
WD
ಜನವರಿ 15 ರಂದು, ಎಳ್ಳು - ಬೆಲ್ಲವನ್ನು ಬಂಧು ಮಿತ್ರರಿಗೆ ಹಂಚುವ ನಲ್ಮೆಯ ಸಾಮಾಜಿಕ ಸಂಪ್ರದಾಯ, ಮಕರ ಸಂಕ್ರಾಂತಿಯ ಒಂದು ವಿಶೇಷ.

ಸೂರ್ಯನು ಒಂದು ರಾಶಿಯಿಂದ, ಮತ್ತೊಂದು ರಾಶಿಗೆ ಪ್ರವೇಶಿಸುವುದಕ್ಕೆ ಸಂಕ್ರಾಂತಿ ಕಾಲ, ಸಂಕ್ರಮಣ ಘಟ್ಟ ಎಂದೆಲ್ಲಾ ಹೆಸರು. ಈ ಸಂಕ್ರಾಂತಿಯ ಕಾಲ ಅತ್ಯಂತ ಪುಣ್ಯಪ್ರದವಾಗಿರುತ್ತದೆ. ಮೇಷ ಸಂಕ್ರಾಂತಿ - ವಿಷುವತ್ ಪುಣ್ಯಕಾಲ, ವೃಷಭ ಸಂಕ್ರಾಂತಿ - ವಿಷ್ಣುಪದ ಪುಣ್ಯಕಾಲ, ಮಿಥುನ ಸಂಕ್ರಾಂತಿ - ಷಡಶೀತಿ ಪುಣ್ಯಕಾಲ, ಕಟಕ ಸಂಕ್ರಾಂತಿ - ದಕ್ಷಿಣಾಯನ ಪುಣ್ಯಕಾಲ, ಸಿಂಹ ಸಂಕ್ರಾಂತಿ ವಿಷ್ಣುಪದ ಪುಣ್ಯಕಾಲ, ಕನ್ಯಾ ಸಂಕ್ರಾಂತಿ - ಷಡಶೀತಿ ಪುಣ್ಯಕಾಲ, ತುಲಾ ಸಂಕ್ರಾಂತಿ - ವಿಷುವತ್ ಪುಣ್ಯಕಾಲ, ವೃಶ್ಚಿಕ ಸಂಕ್ರಾಂತಿ - ವಿಷ್ಣುಪದ ಪುಣ್ಯಕಾಲ, ಧನಸ್ಸು ಸಂಕ್ರಾಂತಿ - ಷಡಶೀತಿ ಪುಣ್ಯಕಾಲ, ಮಕರ ಸಂಕ್ರಾಂತಿ - ಉತ್ತರಾಯಣ ಪುಣ್ಯಕಾಲ, ಕುಂಭ ಸಂಕ್ರಾಂತಿ - ವಿಷ್ಣುಪದ ಪುಣ್ಯಕಾಲ, ಮೀನ ಸಂಕ್ರಾಂತಿ - ಷಡಶೀತಿ ಪುಣ್ಯಕಾಲವೆಂದು ಪ್ರಸಿದ್ಧಿಯಾಗಿದೆ.

ವಿಷ್ಣುಪದ ಪುಣ್ಯಕಾಲಕ್ಕಿಂತಲೂ, ಷಡಶೀತಿ ಪುಣ್ಯಕಾಲ ಶ್ರೇಷ್ಠವಾಗಿದೆ. ಷಡಶೀತಿ ಪುಣ್ಯ ಕಾಲಕ್ಕಿಂತಲೂ, ವಿಷ್ಣುವತ್ ಪುಣ್ಯಕಾಲ ಶ್ರೇಷ್ಠವಾಗಿದೆ. ವಿಷ್ಣುವತ್ ಪುಣ್ಯಕಾಲಕ್ಕಿಂತಲೂ ಆಯನ ಪುಣ್ಯ ಕಾಲ ಅತ್ಯಂತ ಶ್ರೇಷ್ಠವಾಗಿದೆ. ದಕ್ಷಿಣಾಯನ ಕಾಲಕ್ಕಿಂತಲೂ, ಉತ್ತರಾಯಣ ಕಾಲ ಶ್ರೇಷ್ಠವಾಗಿದೆ.

ಸಂಕ್ರಾಂತಿ ಪುಣ್ಯ ಕಾಲದಲ್ಲಿ, ನದಿ ಸ್ನಾನ, ದೇವತೆಗಳಿಗೆ, ಪಿತೃಗಳಿಗೆ ತರ್ಪಣ, ಉಪವಾಸ, ಹೋಮ, ಜಪ, ದಾನಗಳಿಗೆ ಪ್ರಶಸ್ತವೆನಿಸಿದ್ದು, ವಿಧ್ಯುಕ್ತವಾಗಿ ನಡೆಸಬೇಕಾದ ಕಾರ್ಯಗಳು.

ಆಯನವೆಂದರೆ ಸೂರ್ಯನು ಚಲಿಸುವ ಮಾರ್ಗ. ಸೂರ್ಯನು ಕಟಕ ಸಂಕ್ರಾಂತಿಯಿಂದ ದಕ್ಷಿಣದತ್ತ ವಾಲಿ ಚಲಿಸುತ್ತಿದ್ದು, ಮಕರ ಸಂಕ್ರಾಂತ್ರಿಯಿಂದ ತನ್ನ ಮಾರ್ಗವನ್ನು ಬದಲಾಯಿಸಿ, ಉತ್ತರದ ಕಡೆ ವಾಲಿ ಚಲಿಸುತ್ತಾನೆ. ಹಗಲು ಜಾಸ್ತಿಯಾಗಿ, ಕತ್ತಲು ಕಡಿಮೆಯಾಗುತ್ತದೆ. ದೇವತೆಗಳಿಗೆ ಹಗಲು, ರಾಕ್ಷಸರಿಗೆ ರಾತ್ರಿ ಪ್ರಾರಂಭವೆಂದು ಪುರಾಣದಲ್ಲಿದೆ. ದಕ್ಷಿಣಾಯನದಲ್ಲಿ ಮುಚ್ಚಿದ ಸ್ವರ್ಗದ ಬಾಗಿಲು, ಈ ಉತ್ತರಾಯಣದಲ್ಲಿ ತೆರೆಯುತ್ತದೆ. ಅದಕ್ಕಾಗಿಯೇ ಭೀಷ್ಮ ಪಿತಾಮಹರು ದೇಹ ತ್ಯಜಿಸಲು, ಉತ್ತರಾಯಣದ ಕಾಲದವರೆಗೂ, ಶರಶಯ್ಯೆಯಲ್ಲಿ ಹರಿಸ್ಮರಣೆ ಮಾಡುತ್ತಾ ಕಾದಿದ್ದರು. ಉತ್ತರಾಯಣವು ದೇವತೆಗಳ ಕಾಲ, ದಕ್ಷಿಣಾಯನ ಪಿತೃಗಳ ಕಾಲವಾಗಿರುತ್ತದೆ. ಆದ್ದರಿಂದ ಯಜ್ಞ ಯಾಗಾದಿಗಳಿಗೆ, ಸಮಸ್ತ ದೇವತಾ ಕಾರ್ಯ ಶುಭಕಾರ್ಯಗಳಿಗೆ ಉತ್ತರಾಯಣ ಕಾಲ ಶ್ರೇಷ್ಠವಾಗಿದೆ.

ಸೂರ್ಯನು ಜನವರಿ 14 ರಂದು ಸಾಯಂಕಾಲ 6 ಗಂಟೆ 44 ನಿಮಿಷಕ್ಕೆ ನಿರಯಣ ಮಕರ ರಾಶಿಗೆ ಪ್ರವೇಶಿಸುತ್ತಾನೆ. ಈ ವೇಳೆಗೆ ಸೂರ್ಯಾಸ್ತವಾಗಿರುವುದರಿಂದ, ಜನವರಿ 15ರಂದು ಮಕರ ಸಂಕ್ರಾತಿಯನ್ನು ಆಚರಿಸಲಾಗುತ್ತದೆ. ಜನವರಿ 15 ರಂದು ಹಗಲು ಪೂರ್ತಿ ಅಂದರೆ ಸೂರ್ಯೋದಯದಿಂದ, ಸೂರ್ಯಾಸ್ತದವರೆಗೆ ಪುಣ್ಯ ಕಾಲವಿರುತ್ತದೆ. ಈ ಪುಣ್ಯ ಕಾಲದಲ್ಲಿ ಕಪ್ಪು ಎಳ್ಳಿನೊಂದಿಗೆ ಸ್ನಾನ ಮಾಡಿ, ಎಳ್ಳು ದಾನ ಮಾಡಬೇಕು. ದೇವಸ್ಥಾನಗಳಲ್ಲಿ ಎಳ್ಳೆಣ್ಣೆ ದೀಪ ಹಚ್ಚಬೇಕು. ಮಾಡಿದ ದಾನಕ್ಕೆ ಜನ್ಮ ಜನ್ಮದಲ್ಲೂ ಸದಾ ನಮಗೆ ಫಲ ಸಿಗುವಂತೆ ಸೂರ್ಯನು ಅನುಗ್ರಹಿಸುತ್ತಾನೆ. ಇದಕ್ಕಾಗಿಯೇ ಎಳ್ಳು - ಹಂಚುವುದು.

ಎಳ್ಳು - ಬೆಲ್ಲ, ಶೀತ - ವಾತದಿಂದ ಉಂಟಾಗುವ ಜಡ್ಡು, ಆಲಸ್ಯಗಳನ್ನು ದೂರಮಾಡುವ ಸ್ನೇಹ ದ್ರವ್ಯಗಳ ಹಂಚಿಕೆ, ಸೇವನೆ, ದಾನ ಈ ಸಂಕ್ರಾಂತಿಯ ವೈಶಿಷ್ಟ. 'ಎಳ್ಳು - ಬೆಲ್ಲ ತಿಂದು ಒಳ್ಳೆ ಮಾತಾಡು' ಎನ್ನುವುದೇ ಮಕರ ಸಂಕ್ರಾಂತಿಯ ಸಂದೇಶವಾಗಿದೆ.

 

ಆರ್. ಸೀತಾರಾಮಯ್ಯ

ಜ್ಯೋತಿಷ್ಯರು

'ಕಮಲ' 5ನೇ ಕ್ರಾಸ್, ಬಸವನಗುಡಿ

ಶಿವಮೊಗ್ಗ

ಪೋನ್ : 08182 - 227344



ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

ಸೂರ್ಯನ ರಾಶಿ ಪರಿವರ್ತನೆ: ನಿಮ್ಮ ರಾಶಿಯ ಮೇಲೆ ಪರಿಣಾಮವೆಷ್ಟು ?

ರಾಶಿ ಪರಿವರರ್ತನೆ ಮಾಡಿದ ಸೂರ್ಯ , ನಿಮ್ಮ ಮೇಲೆ ಏನು ಪ್ರಭಾವಬೀರಲಿದೆ.? ಎಪ್ರಿಲ್‌‌ 14 ರಂದು ಸೂರ್ಯ ಮೇಷ ...

ನಿಮಗೆ ಶನಿ ಕಾಡುತ್ತಿದೆಯೇ? ಶನಿ ಕಾಟದಿಂದ ತಪ್ಪಿಸಿಕೊಳ್ಳಲು ಈ ಮಂತ್ರ ಪಠಿಸಿ

ಓಂ ಶನ್ನೋದೇವಿರಾಭಿಷ್ಟಯ ಆಪೋ ಭವಂತು ಶನ್ಯೋರಭಿಸ್ತವಂತು ನಃ . ಓಂ ಪ್ರಾಂ ಪ್ರಿಂ ಪ್ರೊಂ ಸಃ ಶನೇಶ್ವರಾಯ ನಮಃ ...

ನಾಗದೋಷವಿದೆಯಾ? ಇತ್ತ ಕಣ್ಣಾಯಿಸಿ

ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯನೂ ಒಂದಲ್ಲಾ ಒಂದು ರೀತಿಯ ಸಮಸ್ಯೆಯಿಂದ ಬಳಲುತ್ತಿರುತ್ತಾನೆ. ಹಿಂದೂ ಧರ್ಮದ ...

ಮದುವೆ ಓಕೆ... ಮಹೂರ್ತ ಯಾಕೆ ?

ಹಿಂದೂ ಧರ್ಮಪರಂಪರೆಯಲ್ಲಿ ವಿವಾಹವೆಂಬುದು ಒಬ್ಬ ವ್ಯಕ್ತಿ ಗೃಹಸ್ಥಾಶ್ರಮವನ್ನು ಪ್ರವೇಶಿಸುವ ಒಂದು ...