Widgets Magazine

ಸೌಂದರ್ಯ ಚಿಕಿತ್ಸೆ ನಿಮ್ಮ ಪ್ರಾಣಕ್ಕೆ ಮುಳುವಾಗದಿರಲಿ!

ಇಳಯರಾಜ|
IFM
ಚೆಂದದ ಬಳುಕುವ ಸೊಂಟ, ಬೇಕಾದ ಆಕಾರದ ಮೂಗು, ಸುಂದರ ಪುಟಾಣಿ ಗಲ್ಲ, ಯೌವನಭರಿತವಾಗಿ ಕಾಣುವ ಚರ್ಮ, ಸೆಕ್ಸೀ ಫಿಗರ್... ಹೀಗೆ ನಾನಾ ಚಿಕಿತ್ಸೆ ಮಾಡಿಸುತ್ತೇವೆಂಬ ಹಲವು ಜಾಹಿರಾತುಗಳೀಗ ಸರ್ವೇ ಸಾಮಾನ್ಯ. ಭಾರತದಲ್ಲಿ ಇಂತಹ ಸೌಂದರ್ಯ ಶಸ್ತ್ರಚಿಕಿತ್ಸೆಗಳ ಸಂಖ್ಯೆಯೂ, ಜಾಹಿರಾತುಗಳ ಮೋಡಿಗೊಳಗಾಗಿ ಮಾಡಿಸಿಕೊಳ್ಳುವವರ ಸಂಖ್ಯೆಯೂ ದಿನೇ ದಿನೇ ಜಾಸ್ತಿಯಾಗುತ್ತಲೇ ಇವೆ. ಆದರೆ, ಸೌಂದರ್ಯ ಶಸ್ತ್ರಚಿಕಿತ್ಸೆಗಳನ್ನಾಗಲೀ, ಕೃತಕ ಸೌಂದರ್ಯ ಚಿಕಿತ್ಸೆಯನ್ನಾಗಲೀ ಮಾಡಿಸುವ ಮೊದಲು ಒಂದು ಕ್ಷಣ ಯೋಚಿಸುವುದು ಒಳಿತು.

ಇತ್ತೀಚೆಗೆ ಕೆಲ ದಿನಗಳ ಹಿಂದಷ್ಟೇ, ಅರ್ಜೆಂಟೈನಾದ ಮಾಜಿ ಸುಂದರಿ ಗುಡಾಲುಪೆ ಮ್ಯಾಗ್‌ನ್ಯಾನೋ ತನ್ನ ಸುಂದರ ಸೆಕ್ಸೀ ಹಿಂಭಾಗಕ್ಕಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಆಸ್ಪತ್ರೆಗೆ ದಾಖಲಾದವಳು ಮತ್ತೆ ಮರಳಿ ಜೀವ ಪಡೆಯಲಿಲ್ಲ. ತನ್ನ ಸೌಂದರ್ಯ ಇಮ್ಮಡಿಗೊಳಿಸಿ ಪ್ರಪಂಚಕ್ಕೇ ತನ್ನ ಸುಂದರ ಹಿಂಭಾಗ ಪ್ರದರ್ಶಿಸುವ ಯೋಚನೆಯಿಂದ ಶಸ್ತ್ರಚಿಕಿತ್ಸೆಗೆ ಹೊರಟ ಈ ಸುಂದರಿ ಇಹಲೋಕ ತ್ಯಜಿಸಿದಳು. ಇದು ಕೇವಲ ಒಬ್ಬರ ಕಥೆಯಲ್ಲ. ಇಂತಹ ಎಷ್ಟೋ ಪ್ರಕರಣಗಳು ನಡೆಯುತ್ತವೆ. ಸೌಂದರ್ಯಕ್ಕೇ ಪ್ರಾಣವನ್ನೇ ಒತ್ತೆಯಿಟ್ಟ ಪ್ರಕರಣಗಳು ಅದೆಷ್ಟೋ ಇವೆ. ಆದರೆ ಬೆಳಕಿಗೆ ಬರೋದು ಕಡಿಮೆಯಷ್ಟೆ.

IFM
ನವದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಯ ಪ್ಲಾಸ್ಟಿಕ್ ಹಾಗೂ ಕಾಸ್ಮೆಟಿಕ್ ಸರ್ಜರಿ ವಿಭಾಗದ ಹಿರಿಯ ವೈದ್ಯ ರಾಕೇಶ್ ಖಜಾಂಚಿ ಹೇಳುವ ಪ್ರಕಾರ, ಕಳೆದೈದು ವರ್ಷಗಳಿಂದ ಕಾಸ್ಮೆಟಿಕ್ ಸರ್ಜರಿಗಳಾದ ರಿನೋಪ್ಲಾಸ್ಟಿ (ಸುಂದರ ಮೂಗಿಗಾಗಿ ಇರುವ ಶಸ್ತ್ರಚಿಕಿತ್ಸೆ), ಲಿಪೋಸಕ್ಷನ್ (ತುಟಿಗಳ ಶಸ್ತ್ರಚಿಕಿತ್ಸೆ), ಮೇಲ್ ಬ್ರೆಸ್ಟ್ ರಿಡಕ್ಷನ್ (ಪುರುಷರ ಎದೆ ಸರಿಪಡಿಸುವ ಶಸ್ತ್ರಚಿಕಿತ್ಸೆ), ಫೀಮೇಲ್ ಬ್ರೆಸ್ಟ್ ಎನ್‌ಹ್ಯಾನ್ಸ್‌ಮೆಂಟ್ (ಮಹಿಳೆಯರ ಎದೆಯುಬ್ಬಿಸುವ ಶಸ್ತ್ರಚಿಕಿತ್ಸೆ), ಅಬ್ಡಮಿನೋಪ್ಲಾಸ್ಟಿ (ಹೊಟ್ಟೆಯನ್ನು ತೆಳ್ಳಗಾಗಿಸಿ ಆಕಾರ ಸರಿಪಡಿಸುವ ಶಸ್ತ್ರಚಿಕಿತ್ಸೆ) ಮುಂತಾದ ಶಸ್ತ್ರಚಿಕಿತ್ಸೆಗಳು ಶೇ.150ರಷ್ಟು ಹೆಚ್ಚಾಗಿವೆ. ಸರ್ಜಿಕಲ್ ಸಾಧನಗಳನ್ನು ಬಳಸದೆ ಮಾಡುವಂಥ ಸೌಂದರ್ಯ ಚಿಕಿತ್ಸೆಗಳಾದ ಬಟೋಕ್ಸ್ ಟ್ರೀಟ್‌ಮೆಂಟ್‌ಗಳಂತೂ ತೀರಾ ಹೆಚ್ಚಿವೆ. ಇಂಥವುಗಳನ್ನು ಸಾಮಾನ್ಯರೂ ಮಾಡಿಸಿಕೊಳ್ಳುವುದು ತೀರಾ ಸಾಮಾನ್ಯವಾಗಿದೆ ಎನ್ನುತ್ತಾರೆ ಅವರು.

ಮೈಕ್ರೋಡರ್ಮಾಬ್ರೇಶನ್ ಕೂಡಾ ಸದ್ಯ ಅತ್ಯಂತ ಪ್ರಚಾರದಲ್ಲಿರುವ ಕಾಸ್ಮೆಟಿಕ್ ಚಿಕಿತ್ಸೆ. ಈ ಚಿಕಿತ್ಸೆ ಮೂಲಕ ಚರ್ಮದ ಸತ್ತ ಹೊರಪದರ ಹಾಗೂ ಒಣಗಿರುವಂಥ ಕಳಾಹೀನ ಪದರವನ್ನು ತೆಗೆದು ಹಾಕಿ ಒಳಚರ್ಮ ಕಾಣುವಂತೆ ಮಾಡಲಾಗುತ್ತದೆ. ಇದರಿಂದ ಇನ್ನೂ ಯೌವನಭರಿತರಾಗಿ ಕಾಣುವಂತಾಗುತ್ತದೆ. ಇದಲ್ಲದೆ, ಕೊಲಾಜೆನ್ ಇಂಜೆಕ್ಷನ್, ಲೇಜರ್ ಹೇರ್ ರಿಮೂವಲ್ (ಶಾಶ್ವತವಾಗಿ ಬೇಡದ ಕೂದಲುಗಳನ್ನು ತೆಗೆಯುವ ಚಿಕಿತ್ಸೆ), ಕೆಮಿಕಲ್ ಪೀಲ್ (ರಸಾಯನಿಕಗಳನ್ನು ಉಪಯೋಗಿಸಿ ಮುಖದ ಹಳೆ ಚರ್ಮ ತೆಗೆದು ಆ ಜಾಗದಲ್ಲಿ ಹೊಸ ಚರ್ಮ ಬೆಳೆಯುವಂತೆ ಮಾಡಿ ಯೌವನಭರಿತರಾಗಿಸುವ ಚಿಕಿತ್ಸೆ) ಮುಂತಾದ ಚಿಕಿತ್ಸೆಗಳಿಗೆ ಈಗ ಭಾರೀ ಬೇಡಿಕೆಯಿದೆ ಎನ್ನುತ್ತಾರೆ ಅವರು.

ಇದಕ್ಕಿಂತಲೂ ಹೆಚ್ಚು ಪ್ರಸಿದ್ಧಿ ಪಡೆಯುತ್ತಿರುವ ಸೌಂದರ್ಯ ಚಿಕಿತ್ಸೆಯೆಂದರೆ ಬಟೋಕ್ಸ್ ಟ್ರೀಟ್‌ಮೆಂಟ್. ಸದಾ ಯೌವನಭರಿತರಾಗಿ ಕಾಣಲು ಅಪೇಕ್ಷೆಯಿರುವ ನಾರೀಮಣಿಯರು ಇಂತಹ ಚಿಕಿತ್ಸೆಯ ಮೊರೆಹೋಗುತ್ತಾರೆ. ಸುಕ್ಕುಗಟ್ಟಿರುವ ಚರ್ಮವನ್ನು ಯೌವನಭರಿತವಾಗಿ ಕಾಣಿಸಲು ಚರ್ಮದ ಆ ಭಾಗಕ್ಕೆ ಬಟೋಕ್ಸ್ ಇಂಜೆಕ್ಷನ್ ತೆಗೆದುಕೊಳ್ಳುವ ಮೂಲಕ ಸರಿಪಡಿಸುವ ಚಿಕಿತ್ಸೆಯಿದು. 1997ರಿಂದ ಈವರೆಗೆ ವಿಶ್ವದಾದ್ಯಂತ ಈ ಚಿಕಿತ್ಸೆ 2,400 ಶೇಕಡಾಗಳಷ್ಟು ಹೆಚ್ಚಿದೆಯೆಂದರೆ ಈ ಚಿಕಿತ್ಸೆಯ ಬೇಡಿಕೆಯನ್ನು ಊಹಿಸಿಕೊಳ್ಳಬಹುದು. ಟಿವಿ ವಾಹಿನಿಗಳಲ್ಲಿ ಸದಾ ಕ್ಯಾಮರಾ ಮುಂದೆ ನಿಲ್ಲುವ ನಿರೂಪಕಿಯರು, ಸೆಲೆಬ್ರಿಟಿಗಳು, ಫ್ಯಾಷನ್ ಲೋಕದ ಬೆಡಗಿಯರು, ನಟೀಮಣಿಯರು ಸೇರಿದಂತೆ ಈಗ ಸಾಮಾನ್ಯ ಮನುಷ್ಯವರೆಗೂ ತಲುಪಿರುವ ಚಿಕಿತ್ಸೆಯಿದು.

IFM
ಇಂಟರ್‌ನ್ಯಾಷನಲ್ ಕಾನ್ಫೆಡರೇಶನ್ ಫಾರ್ ಪ್ಲಾಸ್ಟಿಕ್ ರಿಕನ್‌ಸ್ಟ್ರಕ್ಷನ್ ಅಂಡ್ ಏಸ್ತೆಟಿಕ್ ಸರ್ಜರಿಯ ಅಧ್ಯಕ್ಷ ರಾಜೀವ್ ಬಿ.ಅಹುಜಾ ಹೇಳುವಂತೆ, ಜಾಹಿರಾತುಗಳು ಪ್ರದರ್ಶಿಸುವ ಚಿತ್ರಗಳಿಂದ ಬಹುಬೇಗನೆ ಜನರ ಇಂತಹ ಸೌಂದರ್ಯ ಚಿಕಿತ್ಸೆಗಳನ್ನು ಮಾಡಿಸಿಕೊಳ್ಳುವತ್ತ ಜನರು ವಾಲುತ್ತಾರೆ. ಸೌಂದರ್ಯ ಇಮ್ಮಡಿಗೊಳಿಸುವ ಬಲವಾದ ಆಸೆಯಿಂದಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಮನಸ್ಥಿತಿಯನ್ನೂ ತಲುಪುತ್ತಾರೆ. ಹಾಗಾಗಿ ಇಂತಹ ಒತ್ತಡ ಮನಸ್ಥಿತಿ ತಲುಪುವ ಸೌಂದರ್ಯ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವವರಿಗೆ ನಿಜವಾಗಿ ಮಾನಸಿಕ ವೈದ್ಯರ ಅಗತ್ಯವಿದೆ ಎಂದು ನನಗಿಸುತ್ತದೆ ಎನ್ನುತ್ತಾರೆ ಅಹುಜಾ.

ಜಾಹಿರಾತುಗಳಲ್ಲಿ ಶೇ.100ರಷ್ಟು ಅಡ್ಡಪರಿಣಾಮಗಳಿಲ್ಲದ ಶಸ್ತ್ರಚಿಕಿತ್ಸೆ ಎಂದು ಬರೆಯುತ್ತಾರಾದರೂ, ಹಲವು ಪ್ರಕರಣಗಳಲ್ಲಿ ಅತಿ ರಕ್ತಸ್ರಾವ, ಭಯ ಹೊಂದುವಂತಹ ಮಾನಸಿಕ ದಗುಡ ಹೆಚ್ಚಾಗುವಿಕೆ, ನರ ದೌರ್ಬಲ್ಯ, ಹೊಸ ಚರ್ಮ ಬೆಳೆಯುವ ಮೊದಲೇ ಚರ್ಮ ಸತ್ತುಹೋಗುವುದು ಮುಂತಾಹ ರೋಗಗಳಿಗೂ ಕಾರಣವಾಗುತ್ತದೆ. ಹಲವು ಸಂದರ್ಭಗಳಲ್ಲಿ ಪಾರ್ಶ್ವವಾಯುವಿನಂಥ ಕಾಯಿಲೆಗಳೂ ಇಂಥ ಚಿಕಿತ್ಸೆಗಳಿಂದ ಬರುವ ಸಾಧ್ಯತೆಗಳಿವೆ ಎನ್ನುತ್ತಾರೆ ಅವರು.

ಮಹಿಳೆಯರು ಇಂಥ ಸೌಂದರ್ಯ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಳ್ಳುವುದು ತೀರಾ ಸಾಮಾನ್ಯ. ಪುರುಷರೂ ಇಂಥ ಚಿಕಿತ್ಸೆಗಳತ್ತ ಇತ್ತೀಚೆಗೆ ಹೆಚ್ಚು ಆಸಕ್ತಿ ಬೆಳೆಸಿಕೊಂಡಿದ್ದಾರೆ ಅನ್ನೋದು ಕೂಡಾ ಅಷ್ಟೇ ಸತ್ಯ. ಇವರೆಲ್ಲಾ, ಇಂಥ ಎಷ್ಟೋ ಸಂಗತಿಗಳು ಗೊತ್ತಿದ್ದೂ ಗೊತ್ತಿದ್ದೂ ಶಸ್ತ್ರಚಿಕಿತ್ಸೆಯಡಿ ತಮ್ಮನ್ನು ಒಡ್ಡಿಕೊಳ್ಳುವ ಪ್ರಜ್ಞಾವಂತ ಮಂದಿ! ಬಾಲಿವುಡ್ ಬೆಡಗಿಯರಾದ ಪ್ರಿಯಾಂಕಾ ಛೋಪ್ರಾ, ಕಂಗನಾ ರಾಣಾವತ್, ಕೊಯಿನಾ ಮಿತ್ರಾ ಮತ್ತಿತರರು ತಮ್ಮ ತುಟಿಗಳನ್ನು ಸರಿಪಡಿಸುವ ಶಸ್ತ್ರಚಿಕಿತ್ಸೆ ಮಾಡಿಕೊಂಡರೆ, ಶಿಲ್ಪಾ ಶೆಟ್ಟಿ ಮೂಗು ಸರಿಪಡಿಸುವ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಇದಲ್ಲದೆ, ಶೆರ್ಲಿನ್ ಛೋಪ್ರಾರಂತಹ ಹಲವು ಬಿಚ್ಚಮ್ಮ ನಟಿಯರು ಸೆಕ್ಸೀಯಾಗಿ ಕಾಣಲು ಬ್ರೆಸ್ಟ್ ಎನ್‌ಹ್ಯಾನ್ಸ್‌ಮೆಂಟ್ ಕೂಡಾ ಮಾಡಿಸಿಕೊಂಡಿದ್ದು ಸುದ್ದಿಯಾಗಿವೆ.

ದುಬಾರಿಯಾಗಿರುವ ಇಂಥ ಚಿಕಿತ್ಸೆಗಳೀಗ ಸಾಕಷ್ಟು ಕೈಗೆಟಕುವ ಕಡಿಮೆ ಬೆಲೆಗೂ ಬರುತ್ತಿವೆ. ಅಡ್ಡಪರಿಣಾಮಗಳಿಲ್ಲದೆ ಎಷ್ಟೋ ಮಂದಿ ಇಂತಹ ಕೃತಕ ವಿಧಾನಗಳಿಂದ ಜಗತ್ತಿಗೇ ತಮ್ಮ ಸೌಂದರ್ಯ ಪ್ರದರ್ಶಿಸಿದ್ದಾರೆ ಎಂಬುದೂ ಕೂಡಾ ಅಷ್ಟೇ ಸತ್ಯ. ಆದರೂ, ಅದೇನೇ ಇರಲಿ, ಸೌಂದರ್ಯ ಪ್ರಾಕೃತಿಕವಾದುದು ಎಂಬುದಂತೂ ಸಾರ್ವಕಾಲಿಕ ಸತ್ಯ. ಅದನ್ನು ಹೆಚ್ಚಿಸಲು ಎಷ್ಟೇ ಕೃತಕ ಉಪಾಯಗಳನ್ನು ಮಾಡಿದರೂ ಅದು ನೈಸರ್ಗಿಕ ಸೌಂದರ್ಯವಾಗಲಾರದು. ಬಾಹ್ಯ ಸೌಂದರ್ಯಕ್ಕಿಂತಲೂ ಆಂತರಿಕ ಸೌಂದರ್ಯದತ್ತ ಹೆಚ್ಚು ಗಮನ ನೀಡಿದರೆ, ಬಾಹ್ಯ ಸೌಂದರ್ಯ ತನ್ನಿಂದ ತಾನೇ ಇಮ್ಮಡಿಗೊಳ್ಳುತ್ತದೆ. ನೈಸರ್ಗಿಕ ವಿಧಾನಗಳಿಂದಲೇ ಸೌಂದರ್ಯ ಹೆಚ್ಚಿಸಲು ಪ್ರಯತ್ನಿಸಲು ಅಂದಿನಿಂದಲೂ ತಲೆತಲಾಂತರಗಳಿಂದ ಹಿರಿಯರು ಬೋಧಿಸುತ್ತಲೇ ಬಂದುದು ಬಹುಶಃ ಇದಕ್ಕೇ ಇರಬೇಕು ಅಲ್ಲವೇ?


ಇದರಲ್ಲಿ ಇನ್ನಷ್ಟು ಓದಿ :