Widgets Magazine

'ಜಬ್ ವಿ ಮೆಟ್' ಕರೀನಾ, ಶಾಹಿದ್ ಅತ್ಯುತ್ತಮ ನಟ, ನಟಿ

ಮುಂಬಯಿ| ಇಳಯರಾಜ| Last Modified ಸೋಮವಾರ, 28 ಜನವರಿ 2008 (16:02 IST)
ಕಳೆದ ವರ್ಷದ ಹಿಟ್ ಚಿತ್ರ 'ಜಬ್ ವಿ ಮೆಟ್'ನಲ್ಲಿನ ಅಭಿನಯಕ್ಕಾಗಿ ಶಾಹಿದ್ ಕಪೂರ್ ಮತ್ತು ಕರೀನಾ ಕಪೂರ್ ಅವರು ಮ್ಯಾಕ್ಸ್ ಸ್ಟಾರ್‌ಡಸ್ಟ್ ಅತ್ಯುತ್ತಮ ನಟ ಮತ್ತು ನಟಿ ಪ್ರಶಸ್ತಿ ಬಾಚಿಕೊಂಡಿದ್ದಾರೆ.

ಚಿತ್ರವು ಕೂಡ 2007ರ ಅತ್ಯುತ್ತಮ ಚಿತ್ರ ಎಂಬ ಪ್ರಶಸ್ತಿಗೆ ಭಾಜನವಾಗಿದೆ. ಹಲವಾರು ಚಿತ್ರ ಪ್ರಶಸ್ತಿಗಳಲ್ಲಿ ಮ್ಯಾಕ್ಸ್ ಸ್ಟಾರ್‌ಡಸ್ಟ್ ಪ್ರಶಸ್ತಿಯೂ ಒಂದಾಗಿದ್ದು, ಭವಿಷ್ಯದ ಸೂಪರ್‌ಸ್ಟಾರ್‌ಗಳನ್ನು ಪ್ರೋತ್ಸಾಹಿಸುವ ಉದ್ದೇಶ ಹೊಂದಿದೆ.

ಫೆಬ್ರವರಿ 16ರಂದು ಈ ಪ್ರಶಸ್ತಿ ಪ್ರದಾನ ಸಮಾರಂಭದ ಟೆಲಿವಿಷನ್ ಪ್ರಸಾರ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಚಿತ್ರ ನಿರ್ದೇಶಕ ಕುನಾಲ್ ಕೋಹ್ಲಿ ಮತ್ತು ಗ್ಲ್ಯಾಮರ್ ತಾರೆ ನೇಹಾ ಧುಪಿಯಾ ಈ ಪ್ರಶಸ್ತಿ ಪ್ರದಾನ ಸಮಾರಂಭದ ಆತಿಥ್ಯ ವಹಿಸಿದ್ದು, ಪ್ರೇಕ್ಷಕರನ್ನು ರಂಡಿಸಿದರು. ಲಾರಾ ದತ್ತಾ, ಕರೀನಾ ಕಪೂರ್, ಸೈಫ್ ಆಲಿ ಖಾನ್, ಗೋವಿಂದ, ನೇಹಾ ಧುಪಿಯಾ ಮುಂತಾದವರ ನೃತ್ಯ ಕಣ್ಮನ ತಣಿಸಿತು.

ರಣಬೀರ್ ಕಪೂರ್ ಮತ್ತು ಸೋನಂ ಕಪೂರ್ ಅವರಿಗೆ 'ನಾಳಿನ ಸೂಪರ್‌ಸ್ಟಾರ್' ಟ್ರೋಫಿ ನೀಡಲಾಯಿತು. ಶ್ರೇಯಸ್ ತಾಲ್ಪಡೆ (ಓಂ ಶಾಂತಿ ಓಂ) ಹಾಗೂ ಕಂಗನಾ ರಾಣಾವತ್ (ಲೈಫ್ ಇನ್ ಎ ಮೆಟ್ರೋ) ಅವರಿಗೆ 'ನಟನೆಯ ಆವಿಷ್ಕಾರ' ಪುರಸ್ಕಾರ ನೀಡಲಾಯಿತು. ಹೊಸ ಮೆನೇಸ್ ಪ್ರಶಸ್ತಿಯನ್ನು 'ಚಕ್ ದೇ ಇಂಡಿಯಾ'ದ ಶಿಲ್ಪಾ ಶುಕ್ಲಾ ಪಡೆದುಕೊಂಡರು.

ಹಾಟೆಸ್ಟ್ ಚಿತ್ರ ನಿರ್ಮಾಪಕ ಪುರಸ್ಕಾರ ಅನಿಲ್ ಕಪೂರ್ (ಗಾಂಧಿ ಮೈ ಫಾದರ್), ಹಾಟೆಸ್ಟ್ ಯುವ ಚಿತ್ರನಿರ್ಮಾಪಕ ಪ್ರಶಸ್ತಿ ಶಿಮಿತ್ ಅಮೀನ್ (ಚಕ್ ದೇ ಇಂಡಿಯಾ), ಸಾಂವರಿಯಾ ಚಿತ್ರದಲ್ಲಿ 'ಯೂಂ ಶಬ್ನಮೀ ಪೆಹ್ಲೇ ನಹೀ ಥೀ ಚಾಂದನಿ' ಗೀತೆ ಬರೆದ ಸಂದೀಪ್ ನಾಥ್‌ಗೆ ಅತ್ಯುತ್ತಮ ಗೀತರಚನೆಕಾರ ಪುರಸ್ಕಾರ ಪ್ರದಾನಿಸಲಾಯಿತು.

ವರ್ಷದ ಸ್ಟಾರ್ ಪ್ರಶಸ್ತಿಯು ನಮಸ್ತೇ ಲಂಡನ್ ಮತ್ತು ಹೇಯ್ ಬೇಬಿ ಚಿತ್ರದ ನಟನೆಗಾಗಿ ಅಕ್ಷಯ್ ಕುಮಾರ್ ಪಡೆದುಕೊಂಡರೆ, ಅದ್ಭುತ ನಟ ಪ್ರಶಸ್ತಿಯು ಶೂಟೌಟ್ ಎಟ್ ಲೋಖಂಡ್‌ವಾಲಾದ ನಡನೆಗಾಗಿ ವಿವೇಕ್ ಒಬೆರಾಯ್ ಪಾಲಾಯಿತು. ಜೀವಮಾನದ ಸಾಧನೆ ಪುರಸ್ಕಾರವನ್ನು ಹಿರಿಯ ನಟ ಧರ್ಮೇಂದ್ರ ಅವರಿಗೆ ನೀಡಲಾಯಿತು. ಕನಸಿನ ನಿರ್ದೇಶಕ ಪುರಸ್ಕಾರವು 'ಓಂ ಶಾಂತಿ ಓಂ'ಗಾಗಿ ಫರಾ ಖಾನ್ ಪಡೆದುಕೊಂಡರು.


ಇದರಲ್ಲಿ ಇನ್ನಷ್ಟು ಓದಿ :