ಸತತ ಮೂರು ಸೋಲಿನ ನಂತರ ಟಿ20 ಸರಣಿ ಗೆದ್ದ ಟೀಂ ಇಂಡಿಯಾ

ಲಾಡೆರ್ ಹಿಲ್| Krishnaveni K| Last Modified ಸೋಮವಾರ, 5 ಆಗಸ್ಟ್ 2019 (08:49 IST)
ಲಾಡೆರ್ ಹಿಲ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಿನ್ನೆ ನಡೆದ ದ್ವಿತೀಯ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 22 ರನ್ ಗಳ ಗೆಲುವು ದಾಖಲಿಸುವುದರೊಂದಿಗೆ ಸರಣಿ ತನ್ನದಾಗಿಸಿಕೊಂಡಿದೆ. ಇದರೊಂದಿಗೆ ಮೂರು ಸೋಲಿನ ನಂತರ ಟಿ20 ಸರಣಿಯೊಂದನ್ನು ಗೆದ್ದುಕೊಂಡಿದೆ.
 

ಮಳೆಯಿಂದಾಗಿ ಡಕ್ ವರ್ತ್ ಲೂಯಿಸ್ ನಿಯಮ ಅನ್ವಯವಾದ ಪಂದ್ಯದಲ್ಲಿ ಭಾರತಕ್ಕೆ 22 ರನ್ ಗಳ ಜಯ ಸಿಕ್ಕಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ ರೋಹಿತ್ ಶರ್ಮಾ ಅಬ್ಬರದ ಅರ್ಧ ಶತಕದ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು.
 
ರೋಹಿತ್ 51 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ಗಳ ನೆರವಿನಿಂದ 67 ರನ್ ಗಳಿಸಿದರು. ಉಳಿದೆಲ್ಲಾ ಬ್ಯಾಟ್ಸ್ ಮನ್ ಗಳು ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಕೊಹ್ಲಿ 28 ರನ್ ಗಳಿಸಿದರೆ ಶಿಖರ್ ಧವನ್ 23 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಕೃಣಾಲ್ ಪಾಂಡ್ಯ 13 ಎಸೆತಗಳಲ್ಲಿ 20 ರನ್ ಗಳಿಸಿದರು.
 
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ವಿಂಡೀಸ್ ಆರಂಭ ಉತ್ತಮವಾಗಿರಲಿಲ್ಲ. ಸುನಿಲ್ ನಾರಾಯಣ್ 4ರನ್ ಗಳಿಗೆ ವಾಷಿಂಗ್ಟನ್ ಸುಂದರ್ ಗೆ ವಿಕೆಟ್ ಒಪ್ಪಿಸಿದರೆ ಎವಿನ್ ಲೆವಿಸ್ ಶೂನ್ಯ ಸುತ್ತಿದರು. ರೋವನ್ ಪೊವೆಲ್ 54 ರನ್ ಗಳಿಸಿ ಗಮನ ಸೆಳೆದರು. 15.3 ಓವರ್ ಆಟವಾದಾಗ ಮಳೆ ಬಂದು ಪಂದ್ಯ ನಿಂತಿತು. ಈ ಹಂತದಲ್ಲಿ ವಿಂಡೀಸ್ 4 ವಿಕೆಟ್ ನಷ್ಟಕ್ಕೆ 98 ರನ್ ಗಳಿಸಿತ್ತು. ಕೊನೆಗೆ ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ ವಿಜಯಿಯನ್ನು ಘೋಷಿಸಲಾಯಿತು.
ಇದರಲ್ಲಿ ಇನ್ನಷ್ಟು ಓದಿ :