Widgets Magazine

ಟಿ -ಟ್ವೆಂಟಿ ಸಾಮ್ರಾಟನಾಗಲು ಪದ್ಮ ಶ್ರೀ ವಿರಾಟ್ ಕೊಹ್ಲಿ ರೆಡಿ!

ಕಾನ್ಪುರ| ಕೃಷ್ಣವೇಣಿ ಕೆ| Last Updated: ಬುಧವಾರ, 25 ಜನವರಿ 2017 (17:37 IST)
ಕಾನ್ಪುರ: ಟೆಸ್ಟ್ ಸರಣಿ ಗೆಲುವಾಯ್ತು. ಏಕದಿನ ಸರಣಿಯೂ ಕೈವಶವಾಯಿತು. ಇದೀಗ ಕ್ರಿಕೆಟ್ ನ ಮೂರನೇ ಮಾದರಿಯಾದ ಟಿ-ಟ್ವೆಂಟಿ ಕಿರೀಟ ವಶಪಡಿಸಿಕೊಳ್ಳಲು ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಸಕಲ ರೀತಿಯಲ್ಲಿ ಸಜ್ಜಾಗಿದೆ.

 
ನಾಳೆಯಿಂದ ಇಂಗ್ಲೆಂಡ್ ವಿರುದ್ಧ ಆರಂಭವಾಗಲಿರುವ ಕಿರು ಮಾದರಿಯ ಮೂರು ಪಂದ್ಯಗಳ ಸರಣಿಗೆ ಕೊಹ್ಲಿ ಪಡೆ ಸಜ್ಜಾಗಿದೆ. ಉಭಯ ತಂಡಗಳೂ ಈಗಾಗಲೇ ಕಾನ್ಪುರದ ಗ್ರೀನ್ ಪಾರ್ಕ್ ನಲ್ಲಿ ಬೀಡು ಬಿಟ್ಟಿದೆ. ನಾಳೆ 4.30 ರಿಂದ ಪಂದ್ಯ ಆರಂಭವಾಗುತ್ತಿದೆ. ಪ್ರೇಕ್ಷಕರೂ ಹೌಸ್ ಫುಲ್ ಆಗಿ ಟೀಂ ಇಂಡಿಯಾವನ್ನು ಹುರಿದುಂಬಿಸಲಿದ್ದಾರೆ.
 
ಸದ್ಯಕ್ಕೆ 28 ರ ಹರೆಯದಲ್ಲಿರುವ ಕೊಹ್ಲಿ ತಮ್ಮ ನಂತರದ ಜನರೇಷನ್ ಕ್ರಿಕೆಟಿಗರನ್ನು ಹುಟ್ಟು ಹಾಕುವುದಕ್ಕೆ ಇದನ್ನು ವೇದಿಕೆಯಾಗಿ ಬಳಸಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ. ಈ ಸರಣಿಗಾಗಿ ಆರಿಸಲಾದ ತಂಡದಲ್ಲಿ ಹಿರಿಯ ಆಶಿಷ್ ನೆಹ್ರಾರಿಂದ ಹಿಡಿದು, ಯುವ ಪರ್ವೇಜ್ ರಸೂಲ್ ವರೆಗೆ ಎಲ್ಲರೂ ಇದ್ದಾರೆ.
 
ಭಾರತ ಕಿರು ಮಾದರಿಯಲ್ಲಿ ಯುವ ಆಟಗಾರರನ್ನು ಹೆಚ್ಚು ಬಳಸಿಕೊಳ್ಳಲು ಕೊಹ್ಲಿ ಉತ್ಸುಕರಾಗಿದ್ದಾರೆ. ಅವರ ಜತೆಗೆ ಏಕದಿನ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾದ ಹಿರಿಯ ಸುರೇಶ್ ರೈನಾ ಅವರಂತಹವರಿಗೆ ಇದು ಉತ್ತಮ ವೇದಿಕೆ.
 
ಅತ್ತ ಇಂಗ್ಲೆಂಡ್ ಕೂಡಾ ತಿಣುಕಾಡಿ, ಕಷ್ಟಪಟ್ಟು ಕೊನೆಗೂ ಅಂತಿಮ ಏಕದಿನ ಪಂದ್ಯದಲ್ಲಿ ಗೆಲುವಿನ ರುಚಿ ಕಂಡಿದೆ. ಹಾಗೆ ನೋಡಿದರೆ ಕಿರು ಮಾದರಿಯಲ್ಲಿ ಬ್ಯಾಟಿಂಗ್ ಮುಖ್ಯವಾಗಿರುತ್ತದೆ. ಇಂಗ್ಲೆಂಡ್ ಏಕದಿನ ಸರಣಿಯಲ್ಲಿ ಉತ್ತಮವಾಗಿಯೇ ಬ್ಯಾಟಿಂಗ್ ಪ್ರದರ್ಶಿಸಿತ್ತು. ಅವರ ವೇಗಿಗಳಿಗೆ ಕೊನೆಯ ಕ್ಷಣದಲ್ಲಿ ಹೇಗೆ ಬೌಲಿಂಗ್ ಮಾಡಬೇಕೆಂದು ಚೆನ್ನಾಗಿಯೇ ಗೊತ್ತು. ಹಾಗಾಗಿ ಇದುವರೆಗೆ ನಡೆದ ಪಂದ್ಯಗಳಂತೆ ಇಲ್ಲಿ ಇಂಗ್ಲೆಂಡ್ ತಂಡವನ್ನು ಹಗುರವಾಗಿ ಪರಿಗಣಿಸಲಾಗದು.
 
ಪಿಚ್ ಸಂಪೂರ್ಣ ಬ್ಯಾಟಿಂಗ್ ಸ್ನೇಹಿಯಾಗಿರಲಿದೆ. ಅಲ್ಲದೆ ಇದು ಚಳಿಗಾಲವಾದ್ದರಿಂದ ರಾತ್ರಿ ವೇಳೆ ಇಬ್ಬನಿ ಪ್ರಮುಖ ಪಾತ್ರ ವಹಿಸಲಿದೆ. ಹೀಗಾಗಿ ಟಾಸ್ ಗೆದ್ದರೆ ಮೊದಲು ಬ್ಯಾಟಿಂಗ್ ನಡೆಸಿ ರನ್ ಗುಡ್ಡೆ ಹಾಕುವುದೇ ಉತ್ತಮ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :