ದೇವಭಾಷೆ ಈ ಜನರ ಭಾಷೆ...ಅದೆಲ್ಲಿ ಗೊತ್ತಾ?

ಬೆಂಗಳೂರು| guru| Last Modified ಶುಕ್ರವಾರ, 8 ಜೂನ್ 2018 (14:25 IST)
ಕರ್ನಾಟಕ ಹಲವು ಸಂಸ್ಕೃತಿಕ ಮತ್ತು ಶೈಕ್ಷಣಿಕ ನೆಲೆಗಟ್ಟಿನ ಮೇಲೆ ನಿಂತಿರುವ ರಾಜ್ಯ. ಇಲ್ಲಿ ಎಲ್ಲವೂ ಇದೆ. ವಿವಿಧ ಭಾಷೆ, ಸಂಸ್ಕೃತಿ, ಆಚಾರ ವಿಚಾರವನ್ನು ತನ್ನ ಒಡಲಲ್ಲಿ ಇರಿಸಿಕೊಂಡು ಪ್ರಕೃತಿ ಸೌಂದರ್ಯದ ಜೊತೆಗೆ ಸಂಸ್ಕೃತಿಯ ಸಾರವನ್ನು ದೇಶದೂದ್ದಕ್ಕೂ ಪಸರಿಸುತ್ತಿರುವ ಹೆಮ್ಮೆಯ ನಾಡು ನಮ್ಮ ಕರ್ನಾಟಕ ಎಂದರೆ ತಪ್ಪಾಗಲಾರದು.

ಇಲ್ಲಿ ಹಲವು ವಿಶೇಷಗಳಿಗೆ, ವಿಸ್ಮಯಗಳಿವೆ, ಚಕಿತಗಳು ಇವೆ. ಅಷ್ಟೇ ಅಲ್ಲ ಇದೇ ಕರ್ನಾಟಕದಲ್ಲಿ ಕನ್ನಡವನ್ನು ಬಳಸದೇ ಬೇರೆಯದೇ ಭಾಷೆಯನ್ನು ಬಳಸಿ ತಮ್ಮ ದಿನನಿತ್ಯದ ಕಾಯಕವನ್ನು ಮಾಡುವ ಒಂದು ಹಳ್ಳಿ ಕೂಡಾ ಇದೆ ಎಂದರೆ ನೀವು ಆಶ್ಚರ್ಯಪಡಬಹುದು ಅದ್ಯಾವುದು ಎಂಬುದರ ಫುಲ್ ಡಿಟೇಲ್ಸ್ ಇಲ್ಲಿದೆ ಓದಿ.
 
ದೇವಭಾಷೆ ಎಂದು ಕರೆಯಲಾಗುವ ಭಾಷೆಯನ್ನು ಇಲ್ಲಿನ ಜನರು ಬಳಸುತ್ತಾರೆ. ಸುಮಾರು 5000 ನಿವಾಸಿಗಳನ್ನು ಹೊಂದಿರುವ ಗ್ರಾಮವಿರುವುದು ಕರ್ನಾಟಕದ ಜಿಲ್ಲೆಯಲ್ಲಿ, ಮತ್ತೂರು ಎಂದು ಕರೆಯಲ್ಪಡುವ ಈ ಗ್ರಾಮದಲ್ಲಿ ಪ್ರತಿಯೊಬ್ಬರು ಸಂಸ್ಕೃತವನ್ನು ತಮ್ಮ ಮಾತೃ ಭಾಷೆಯಾಗಿ ಬಳಸುತ್ತಾರೆ. ಆಧುನಿಕ ಕಾಲದಲ್ಲಿ ಪ್ರಾಚೀನತೆಯ ಸೆಳತವನ್ನು ನಾವು ಈ ಗ್ರಾಮದಲ್ಲಿ ಕಾಣಬಹುದಾಗಿದೆ. ಪುರಾತನ, ಸಂಸ್ಕೃತಿ ಮತ್ತು ನಮ್ಮ ಪ್ರಾಚೀನ ಇತಿಹಾಸದ ಸಂಪ್ರದಾಯದ ಕುರಿತು ಅಂದಿನಿಂದ ಇಂದಿನವರೆಗೆ ಅದನ್ನು ಬಳಸಿಕೊಂಡು ಉಳಿಸಿಕೊಂಡು ಬಂದಿರುವ ಗ್ರಾಮ ಇದಾಗಿದೆ.
ಇಲ್ಲಿನ ಹಳ್ಳಿಗರು ವೈದಿಕ ಜೀವನ ಶೈಲಿಯನ್ನು ನಡೆಸುತ್ತಾರೆ ಮತ್ತು ಅವರು ಸಂಸ್ಕೃತದಲ್ಲಿ ಪ್ರಾಚೀನ ಗ್ರಂಥಗಳನ್ನು ಪಠಿಸುವುದರ ಜೊತೆಗೆ ಸಂಸ್ಕೃತದಲ್ಲೇ ದೈನಂದಿನ ವ್ಯವಹಾರವನ್ನು ನಡೆಸುತ್ತಾರೆ.
 
ಇವರು ಜಗತ್ತಿನ ಅತೀ ಹಳೆಯ ಭಾಷೆಯಾದ ಸಂಸ್ಕೃತವನ್ನು ನಿರರ್ಗಳವಾಗಿ ಮಾತನಾಡುತ್ತಾರೆ ಹಾಗೂ ತಮ್ಮ ಮಕ್ಕಳಿಗೆ 10 ವರ್ಷ ಆಗುತ್ತಿದ್ದಂತೆ ಅವರಿಗೆ ವೇದಾಧ್ಯಯನವನ್ನು ಪ್ರಾರಂಭಿಸುವುದು ಇವರು ರೂಢಿಸಿಕೊಂಡು ಬಂದ ಪದ್ಧತಿಯಾಗಿದೆ. ವೇದದ ಕಾಲದಲ್ಲಿ ಇಲ್ಲಿ ಈ ಪುರಾತನ ಭಾಷೆ ಚಾಲನೆಯಲ್ಲಿ ಬಂತು ಎಂದು ಹೇಳಲಾಗುತ್ತದೆ.
 
ತುಂಗಾನದಿಯ ದಡದ ಮೇಲಿರುವ ಒಂದು ಸಣ್ಣ ಹಳ್ಳಿ ಇದಾಗಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಪ್ರಗತಿ ಸಾಧಿಸಿದೆ. ಉತ್ತಮವಾದ ರಸ್ತೆಗಳು, ಉತ್ತಮ ಪೃಕೃತಿ ಸೌಂದರ್ಯವನ್ನು ಒಳಗೊಂಡಿರುವ ಈ ಹಳ್ಳಿಯಲ್ಲಿ ಸರಣಿ ಕಾಂಕ್ರಿಟ್ ಮನೆಗಳು ಕಂಡುಬರುತ್ತವೆ. ಇಲ್ಲಿ ಭತ್ತವನ್ನು ಹೆಚ್ಚಾಗಿ ಬೆಳೆಯುತ್ತಾರೆ ಹಾಗೂ ಇದು ಭಾರತದಲ್ಲಿರುವ ಎಲ್ಲಾ ಹಳ್ಳಿಗಳ ರೀತಿಯಲ್ಲೇ ಕಂಡುಬರುತ್ತದೆ.
ಮನೆಗಳ ಗೋಡೆಗಳ ಮೇಲೆ ಸಂಸ್ಕೃತದ ಗೀಚು ಬರಹಗಳು ಕಂಡುಬರುತ್ತದೆ. ಅದರಲ್ಲೂ ವಿಶೇಷವಾಗಿ ಪುರಾತನ ಉಲ್ಲೇಖಗಳು ನಿಮ್ಮನ್ನು ಬಿಂಬಿಸುತ್ತವೆ. ಸಾಮಾನ್ಯವಾಗಿ ಈ ಹಳ್ಳಿಯಲ್ಲಿ ಬಿಳಿಯ ನಿಲುವಂಗಿ ತೊಟ್ಟ ಯುವಕರು ಕಂಡುಬರುತ್ತಾರೆ. ಅಷ್ಟೇ ಅಲ್ಲ ಇಲ್ಲಿನ ಮಕ್ಕಳು ಕ್ರಿಕೆಟ್ ಮತ್ತಿತ್ತರ ಆಟಗಳನ್ನು ಆಡುವಾಗ ಸಂಸ್ಕೃತದಲ್ಲೇ ಸಂಭಾಷಣೆಗಳನ್ನು ಮಾಡುತ್ತಾರೆ. ಹಿರಿಯರು ನದಿ ತೀರದಲ್ಲಿ ಮಂತ್ರಗಳನ್ನು ಪಠಿಸುತ್ತಾ ಜಪ ತಪ ಮಾಡುತ್ತಿರುವುದು ಇಲ್ಲಿ ಸಾಮಾನ್ಯವಾಗಿದೆ.
 
ಈ ಹಳ್ಳಿಯಲ್ಲಿ ಸಂಕೇತಿ ಬ್ರಾಹ್ಮಣರು ಹೆಚ್ಚಾಗಿದ್ದು, ಇವರು ಕೇರಳ ಮೂಲದಿಂದ ವಲಸೆ ಬಂದವರೆಂದು ಹೇಳಲಾಗುತ್ತದೆ. ಇಲ್ಲಿ ಪ್ರತಿಯೊಬ್ಬರೂ ಸಹ ಸಂಸ್ಕೃತದಲ್ಲಿ ವ್ಯವಹಾರಿಸುತ್ತಾರೆ. ಅಷ್ಟೇ ಅಲ್ಲದೇ ಸಂಕೇತಿ ಬ್ರಾಹ್ಮಣರು ಸಹ ಸಂಕೇತಿ ಎನ್ನುವ ಆಡು ಭಾಷೆಯನ್ನು ಬಳಸುತ್ತಾರೆ. ಈ ಭಾಷೆಯು ಸಂಸ್ಕೃತ, ತಮಿಳು, ಕನ್ನಡ ಮತ್ತು ತೆಲುಗು ಭಾಷೆಗಳ ಮಿಶ್ರಣವಾಗಿದೆ. ಇದು ಯಾವುದೇ ಲಿಪಿಯನ್ನು ಹೊಂದಿಲ್ಲ. ಇವರು ಸಂವಹನಕ್ಕಾಗಿ ದೇವನಾಗರಿ ಲಿಪಿಯನ್ನು ಬಳಸುತ್ತಾರೆ ಮತ್ತು ಸಂಸ್ಕೃತದೊಂದಿಗೆ ಸಂಕೇತಿ ಭಾಷೆಯನ್ನು ಬಳಸುತ್ತಾರೆ ಮತ್ತು ಕನ್ನಡದಲ್ಲೂ ಕೂಡಾ ಗ್ರಾಮಸ್ಥರು ಮಾತನಾಡುವುದು ಕಂಡುಬರುತ್ತದೆ.
 
ಮತ್ತೂರಿನಲ್ಲಿ ಎಲ್ಲಾ ಫಲಕಗಳು ಭಾಷೆಯಲ್ಲಿರುತ್ತವೆ, ಇದು ನಿಮಗೆ ಆಶ್ಚರ್ಯಗೊಳಿಸಬಹುದು. ಅಷ್ಟೇ ಅಲ್ಲ ಇಲ್ಲಿನ ಹಳ್ಳಿಯ ಶಾಲೆಯಲ್ಲಿ ಸರಸ್ವತಿಯ ದೊಡ್ಡ ಪ್ರತಿಮೆಯನ್ನು ನೀವು ಕಾಣಬಹುದು.
ಇದರ ಹೊರತಾಗಿ ಮತ್ತೂರಿನಲ್ಲಿ ರಾಮ ಮಂದಿರ  ಶಿವ ದೇವಸ್ಥಾನ, ಸೋಮೇಶ್ವರ ದೇವಸ್ಥಾನ ಮತ್ತು ಲಕ್ಷ್ಮೀಕೇಶವಾ ದೇವಸ್ಥಾನಗಳನ್ನು ಈ ಊರಿನ ಮೆರಗನ್ನು ಹೆಚ್ಚಿಸಿದೆ. ಹಳ್ಳಿ ಶಾಲೆಯಲ್ಲಿ ವೇದಗಳನ್ನು ಸಾಂಪ್ರದಾಯಿಕ ರೀತಿಯಲ್ಲಿ ಪಠಿಸಲಾಗುತ್ತದೆ. ವೇದಗಳು ಮತ್ತು ಇತರ ಪುರಾತನ ಗ್ರಂಥಗಳನ್ನು ಕಲಿಯುವುದರ ಜೊತೆಗೆ ಕನ್ನಡ ಮತ್ತು ಇಂಗ್ಲಿಷ್ ಅನ್ನು ಸಹ ಇಲ್ಲಿನ ಮಕ್ಕಳು ಕಲಿಯುತ್ತಾರೆ. ಪುರಾತನ ತಾಳೆಗರಿಗಳಲ್ಲಿ ಹಾನಿಗೊಳಗಾದ ಪಠ್ಯಗಳನ್ನು ಸಂರಕ್ಷಿಸುವುದು ಕೂಡಾ ಇಲ್ಲಿನ ಒಂದು ಅಭ್ಯಾಸ ಕ್ರಮವಾಗಿದೆ. ಅಷ್ಟೇ ಅಲ್ಲದೇ ಪುರಾತನ ತಾಳೆಗರಿಗಳನ್ನು ಸಂಗ್ರಹಿಸಿ ಅದನ್ನು ಕಂಪ್ಯೂಟರ್‌ನಲ್ಲಿ ನಕಲಿಸಲಾಗುತ್ತದೆ. ಹಾನಿಗೊಳಗಾದ ಪಠ್ಯವನ್ನು ನಕಲು ಬರಹ ಮಾಡಲಾಗುತ್ತದೆ. ಅಲ್ಲದೇ ಬೇರೆ ಸಮುದಾಯದ ವಿದ್ಯಾರ್ಥಿಗಳು ಮತ್ತು ಹೊರ ದೇಶ ವಿದೇಶದ ವಿದ್ಯಾರ್ಥಿಗಳು ಸಹ ಭಾಷೆಯನ್ನು ಕಲಿಯಲು ಮತ್ತೂರಿಗೆ ಆಗಮಿಸುತ್ತಾರೆ ಅನ್ನುವುದು ಮತ್ತೊಂದು ವಿಶೇಷ.
 
ಸಂಸ್ಕೃತವನ್ನು ಕಲಿಯುವುದರಿಂದ ಗಣಿತ ಮತ್ತು ತರ್ಕಶಾಸ್ತ್ರದ ಜ್ಞಾನವನ್ನು ಸುಧಾರಿಸಲು ಮಕ್ಕಳಿಗೆ ಸಹಾಯಕಾರಿಯಾಗುತ್ತದೆ ಎಂಬುದು ಇಲ್ಲಿನವರ ವಾದ. ಈ ಶಾಲೆಯಲ್ಲಿ ಕಲಿತ ಮಕ್ಕಳು ಇಂಜಿನಿಯರ್, ಡಾಕ್ಟರ್ ಉದ್ಯಮ ಹೀಗೆ ಮುಂತಾದ ವೃತ್ತಿಯನ್ನು ಮಾಡುತ್ತಿದ್ದಾರೆ. ಹಾಗೆಯೇ ಇಲ್ಲಿನ ಪ್ರತಿ ಮನೆಯಲ್ಲಿಯೂ ಒಬ್ಬರು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅದರ ಹೊರತಾಗಿ ಈ ಹಳ್ಳಿಯಲ್ಲಿ ಆಸ್ತಿ ಮತ್ತು ಜಮೀನಿನ ವಿಚಾರವಾಗಿ ಯಾವುದೇ ವಿವಾದಗಳು ಕೋರ್ಟ್‌ನಲ್ಲಿ ದಾಖಲಾಗಿಲ್ಲ ಮತ್ತು  ಅಪರಾಧ ದರವು ಸಹ ಈ ಹಳ್ಳಿಯಲ್ಲಿ ತುಂಬಾನೇ ಕಡಿಮೆ ಎಂದು ಹೇಳಬಹುದು.
ಪುರಾತನವಾದ ಭಾಷೆಯನ್ನು ತಮ್ಮ ದಿನ ನಿತ್ಯದ ಜೀವನದಲ್ಲಿ ಬಳಸುವ ಮತ್ತು ವ್ಯವಹಾರಿಕ ಭಾಷೆಯನ್ನಾಗಿಸಿಕೊಂಡ ಕೆಲವು ಹಳ್ಳಿಗಳು ಭಾರತದಾದ್ಯಂತ ಇದ್ದು ಕರ್ನಾಟಕದಲ್ಲಿ ಮಾತ್ರ ಇದೊಂದೇ ಎಂದು ಹೇಳಬಹುದು. ಇತ್ತೀಚಿನ ದಿನಗಳಲ್ಲಿ ಸಂಸ್ಕೃತಕ್ಕೆ ಸ್ಥಾನಮಾನಗಳು ಸಿಗುತ್ತಿದ್ದು ಇತ್ತೀಚಿನ ದಿನಗಳಲ್ಲಿ ಎಲ್ಲಾ ಶಾಲೆಗಳಲ್ಲಿ ಕೂಡಾ ಒಂದು ಭಾಗವಾಗಿ ಸಂಸ್ಕೃತವನ್ನು ಕಲಿಸಲಾಗುತ್ತಿದೆ. ಒಟ್ಟಿನಲ್ಲಿ ಪುರಾತನ ಭಾಷೆಯನ್ನು ಅಂದಿನಿಂದ ಇಂದಿನವರೆಗೂ ಕಾಪಾಡುತ್ತಾ ಅದರ ಪ್ರಯೋಜನ ಮುಂದಿನ ಪೀಳಿಗೆಗೂ ಇರುವ ಹಾಗೆ ಕಳಕಳಿಯಿಂದ ಕಾಪಾಡಿಕೊಂಡು ಬರುತ್ತಿರುವ ಮತ್ತೂರಿನ ಗ್ರಾಮ ಇತರ ಗ್ರಾಮಗಳಿಗೆ ಹೋಲಿಸಿದರೆ ವಿಭಿನ್ನ ಎಂದೇ ಹೇಳಬಹುದು.ಇದರಲ್ಲಿ ಇನ್ನಷ್ಟು ಓದಿ :