Widgets Magazine

ನರೇಂದ್ರ ಮೋದಿಗೆ ತಾಕತ್ತಿದ್ರೆ ಬಹಿರಂಗ ಚರ್ಚೆಗೆ ಬರಲಿ: ಮುಲಾಯಂ ಸವಾಲ್

ಲಕ್ನೋ| ರಾಜೇಶ್ ಪಾಟೀಲ್|
PTI
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ನಿರಂತರವಾಗಿ ಪುತ್ರ ಅಖಿಲೇಶ್ ಸಿಂಗ್ ಸರಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವುದನ್ನು ವಿರೋಧಿಸಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್, ಮೋದಿಗೆ ತಾಕತ್ತಿದ್ರೆ ಅಭಿವೃದ್ಧಿಯ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲ್ ಹಾಕಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ಜಯಗಳಿಸಲು ಬಿಜೆಪಿ ರಾಜ್ಯದಲ್ಲಿ ಕೋಮುಹಿಂಸಾಚಾರ ನಡೆಸಲು ಪ್ರಯತ್ನಿಸುತ್ತಿದೆ. ಶಿಕ್ಷಣ ಮತ್ತು ನೀರಾವರಿಯನ್ನು ಉಚಿತವಾಗಿ ನೀಡುತ್ತಿದ್ದರೂ ಮುಸ್ಲಿಂ ಸಮುದಾಯ ಯಾಕೆ ನಿಮ್ಮನ್ನು ವಿರೋಧಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

ನಿನ್ನೆ ನಡೆದ ಬಿಜೆಪಿ ಸಭೆಯಲ್ಲಿ ನರೇಂದ್ರ ಮೋದಿ ನನ್ನನ್ನು ನೇತಾಜಿ ಎಂದು ಸಂಬೋಧಿಸಿ ಅನೇಕ ಪ್ರಶ್ನೆಗಳನ್ನು ಜನತೆಗೆ ಕೇಳಿದ್ದಾರೆ. ಅವರ ಪ್ರತಿಯೊಂದು ಪ್ರಶ್ನೆಗೆ ನಾನು ಉತ್ತರಿಸಲು ಸಿದ್ದವಿದ್ದೇನೆ. ಮೋದಿ ಬಹಿರಂಗವಾಗಿ ಚರ್ಚೆಗೆ ಬರಲಿ ಎಂದು ಆಹ್ವಾನ ನೀಡಿದ್ದಾರೆ.

ಸಮಾಜವಾದಿ ಪಕ್ಷದ ಸರಕಾರ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿದಾಗ ನಿಮ್ಮ ಬಿಜೆಪಿ ಪಕ್ಷ ಕೋಮುದಂಗೆಯಲ್ಲಿ ಭಾಗಿಯಾಗಿತ್ತು. ನಿಮ್ಮ ಪಕ್ಷದ ಶಾಸಕರು ದಂಗೆಯಲ್ಲಿ ಭಾಗಿಯಾಗಿಲ್ಲ ಎಂದು ಮೋದಿ ಎದೆ ತಟ್ಟಿ ಹೇಳಲಿ ಎಂದು ಗುಡುಗಿದ್ದಾರೆ.

ಗುಜರಾತ್ ದಂಗೆಯ ಬಗ್ಗೆ ನ್ಯಾಯಾಲಯ ನಿಮ್ಮನ್ನು ನಿರಪರಾಧಿ ಎಂದು ಘೋಷಿಸಿದ್ದರಿಂದ ನಿಮ್ಮ ಬಗ್ಗೆ ಹೇಳಿಕೆ ನೀಡುವುದಿಲ್ಲ. ಆದರೆ, ನಿಮ್ಮ ಪಕ್ಷದವರು ಗುಜರಾತ್ ದಂಗೆಯ ರೂವಾರಿಗಳಾಗಿದ್ದಾರೆ. ನಿಮ್ಮ ಗೃಹ ಸಚಿವ ಗುಜರಾತ್ ದಂಗೆಯಲ್ಲಿ ಭಾಗಿಯಾಗಿದ್ದಾರೆ ಎಂದು ಅಮಿತ್ ಶಾ ಹೆಸರು ಹೇಳದೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಆರೋಪಿಸಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :