ಬಿಜೆಪಿಯ ವೇದಿಕೆಯಲ್ಲಿ ಕಾಂಗ್ರೆಸ್ ಉಮೇದುವಾರ

ನೊಯ್ಡಾ, ಶುಕ್ರವಾರ, 4 ಏಪ್ರಿಲ್ 2014 (16:32 IST)

ಟಿಕೆಟ್ ವಾಪಸ್ ಮಾಡುವುದು ಈ ಬಾರಿಯ ಚುನಾವಣೆಗಳಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಆದರೆ ನೊಯ್ಡಾದ ರಮೇಶ್ಚಂದ್ರ ತೋಮರ್ ಮಾಡಿರುವ ಕೆಲಸವನ್ನು ಇಲ್ಲಿಯವರೆಗೆ ಯಾರೂ ಮಾಡಿರಲಾರರು. ನೊಯ್ಡಾದಿಂದ ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆದಿದ್ದ ಅವರು, ಮತದಾನಕ್ಕೆ ಏಳು ದಿನಗಳಿರುವಾಗ ಕಾಂಗ್ರೆಸ್ ಪಾರ್ಟಿಗೆ ಕೈಕೊಟ್ಟು ಬಿಜೆಪಿ ಸೇರುವುದರ ಮೂಲಕ ದೇಶದ ಗಮನ ಸೆಳೆದಿದ್ದಾರೆ.

PTI

ನಾಮಪತ್ರ ಹಿಂತೆಗೆದು ಕೊಳ್ಳುವ ಅವಧಿಯು ಕೂಡ ಮುಗಿದು ಹೋಗಿದ್ದು ಅವರೀಗ ಬಿಜೆಪಿ ಪರ ಮತಯಾಚಿಸುತ್ತಿದ್ದಾರೆ. ಇಂದು ತಮ್ಮ ಸಮರ್ಥರನ್ನುದ್ದೇಶಿಸಿ ಮಾತನಾಡಿದ ಅವರು "ನನಗಲ್ಲ, ಬಿಜೆಪಿ ಅಭ್ಯರ್ಥಿ ಡಾ.ಮಹೇಶ ಶರ್ಮಾಗೆ ಮತ ನೀಡಿ" ಎಂದು ಕೇಳಿಕೊಂಡಿದ್ದಾರೆ.

ಮೋದಿಯವರ ವೇದಿಕೆಯನ್ನೇರಿದ ಅವರು "ದೇಶ ಮೋದಿಯವರನ್ನುಅಪೇಕ್ಷಿಸುತ್ತಿದೆ. ಹೀಗಿರುವಾಗ ನಾನು ಕಾಂಗ್ರೆಸ್ಸಿನಲ್ಲಿದ್ದರೆ ಅದು ತಪ್ಪಾಗುತ್ತದೆ" ಎಂದು ಭಾಷಣ ಮಾಡಿದರು.

ರಮೇಶ್ಚಂದ್ರ ಬಿಜೆಪಿಯಿಂದ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಕಳೆದ ಬಾರಿ ಬಿಜೆಪಿಯಿಂದ ಟಿಕೆಟ್ ನೀಡದ ಕಾರಣಕ್ಕೆ ಅವರು ಕಾಂಗ್ರೆಸ್ ಸೇರಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ಸಿಂದ ಬಿಜೆಪಿಗೆ ಹಾರಿ ಸೋನಿಯಾರವರ ನಾಯಕತ್ವದ ಪಕ್ಷಕ್ಕೆ ಚಳ್ಳೆ ಹಣ್ಣು ತಿನ್ನಿಸಿದ್ದಾರೆ.

ತೋಮರ್‌ವರ ನಾಚಿಕೆಗೇಡಿನ ವರ್ತನೆಯಿಂದ ಸಿಟ್ಟಿಗೆದ್ದಿರುವ ಕಟ್ಟಾ ಕಾಂಗ್ರೆಸ್ ಕಾರ್ಯಕರ್ತರು ತೋಮರ್ ಪುತ್ಥಲಿಯನ್ನು ಸುಟ್ಟಿದ್ದಾರಲ್ಲದೇ ಅವರ ಕಚೇರಿಯನ್ನು ನಾಶಗೊಳಿಸಿದ್ದಾರೆ. ತೋಮರ್ ದೊಡ್ಡ ಮೊತ್ತದ ಹಣ ಪಡೆದು ಬಿಜೆಪಿಗೆ ಹಾರಿದ್ದಾರೆ ಎಂದು ಅವರು ಆಪಾದಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :