ಚೌತಿ ವಿಶೇಷ: 'ವಕ್ರ'ತುಂಡ 'ಮಹಾ'ಕಾಯ ನಮಗೆಷ್ಟು ಮುಖ್ಯ?

ಅವಿನಾಶ್ ಬಿ.

Ganesha Chatirthi
PTI
ಪ್ರಥಮ ವಂದಿತ, ಆದಿ ಪೂಜಿತ, ಬುದ್ಧಿ ಪ್ರದಾಯಕ, ಸಿದ್ಧಿ ದಾಯಕ, ಗಣಗಳ ಅಧೀಶ್ವರ, ಚಿಣ್ಣರ ಪ್ರೀತಿಯ ದೇವ, ಮೋದಕ-ಗರಿಕೆ ಪ್ರಿಯ, ವಿಘ್ನ ಹರ ಎಲ್ಲವೂ ಆದ ಶ್ರೀ ಗಣೇಶನ ಚೌತಿ ಉತ್ಸವದ ಸಡಗರದಲ್ಲಿ ನಾಡಿಗೆ ನಾಡೇ ಮಿಂದೇಳುತ್ತಿದೆ.

ಈ ವಕ್ರತುಂಡನನ್ನು ಹಾಸ್ಯ ಸಾಹಿತಿಗಳು ಹಲವಾರು ವಕ್ರ ತುಂಡೋಕ್ತಿಗಳ ಮೂಲಕ ಆವಾಹಿಸಿದ್ದಾರೆ, ಸ್ತುತಿಸಿದ್ದಾರೆ, ಭಜಿಸಿದ್ದಾರೆ, ಅರ್ಚಿಸಿದ್ದಾರೆ, ಮೆಚ್ಚಿಸಿದ್ದಾರೆ. ಅದೇ ರೀತಿ ಈತನ ಮಹಾಕಾಯದ ಸ್ವರೂಪವನ್ನು ಕೂಡ ಭಜಕ ಜನತೆ ತಮ್ಮದೇ ಆದ ವ್ಯಾಖ್ಯಾನಗಳ ಮೂಲಕ ಭಕ್ತಿಯ ಸಾಗರದಲ್ಲಿ ಮಿಂದಿದ್ದಾರೆ.

ಲಂಬ ಉದರ, ಉದ್ದನೆಯ ವಕ್ರವಾದ ತುಂಡ (ಸೊಂಡಿಲು), ಮೊರದಗಲದ ಕಿವಿ, ಕೋರೆ ದಾಡೆ, ನಾಲ್ಕು ಕೈ, ಚತುರ್ಭುಜಗಳಲ್ಲಿ ಪಾಶ-ಅಂಕುಶ-ಲಡ್ಡು, ದೀರ್ಘ ದೇಹ... ಇವಿಷ್ಟು ಮಿತ್ರರ ಮಿತ್ರ, ಎಳೆಯರ ಗೆಳೆಯ ಗಣೇಶ ಎಂದಾಕ್ಷಣ ನೆನಪಿಗೆ ಬರುವ ಅಂಶಗಳು. ಆದರೆ ವಿಶ್ವದ ಭಾರವನ್ನೇ ಮೈಮೇಲೆ ಹೊತ್ತುಕೊಂಡ ಈ ಚಿನ್ಮಯ ಸ್ವರೂಪನ ಸವಾರಿಗೆ ಒಂದು ಪುಟ್ಟ ಇಲಿ... ಅದೆಂತು ಸಾಧ್ಯ?

ಇವನು ವಿದ್ಯೆ, ಬುದ್ಧಿ, ಸಂಪತ್ತು ಮತ್ತು ಜ್ಞಾನದ ಅಧಿದೇವತೆಯೂ ಹೌದು. ಮಾತ್ರವಲ್ಲ, ಎಲ್ಲ ಭಜಕ ಜನರಿಗೆ, ವಿಶೇಷವಾಗಿ ಮಕ್ಕಳಿಗೆ ಅತ್ಯಂತ ಪ್ರಿಯನಾದ ದೇವಾಧಿದೇವನೂ ಹೌದು. ಎಲ್ಲರಿಂದ ಹೊಗಳಿಸಿಕೊಳ್ಳುವ ಮತ್ತು ಎಲ್ಲರ ಆರೋಗ್ಯಕರ ವ್ಯಂಗ್ಯಕ್ಕೆ ತುತ್ತಾದವನೂ ಗಣೇಶ ಎಂದರೆ ತಪ್ಪಿಲ್ಲ.

ಗಣೇಶನ ಕೈಯಲ್ಲಿರುವ ಆಯುಧಗಳನ್ನು ಪರಿಗಣಿಸಿದರೆ, ಅಂಕುಶ ಎಂಬುದು ಅಹಂ ನಿಯಂತ್ರಣ ಪ್ರತೀಕ. ಅಷ್ಟು ಬೃಹತ್ತಾದ ಆನೆಯನ್ನು ಈ ಪುಟ್ಟ ಅಂಕುಶವೊಂದರಿಂದ ನಿಯಂತ್ರಿಸಬಹುದಲ್ಲವೇ? ಅದೇ ರೀತಿ ಮನುಷ್ಯನ ಅಹಂ ಎಂಬುದು ಯಾವ ಪ್ರಮಾಣಕ್ಕೂ ಬೆಳೆಯಬಹುದು. ಅದನ್ನು ನಿಯಂತ್ರಿಸಲು ಈ ಅಂಕುಶವೆಂಬ, ಛಲ, ಮನೋಬಲ ಅಥವಾ ಇಚ್ಛಾಶಕ್ತಿ ಸಾಕು.

ಇನ್ನು ಪಾಶ ಎಂಬುದು ಹುಚ್ಚೆದ್ದ ಮನಸ್ಸಿಗೆ ಕಡಿವಾಣ ಹಾಕುವ ಸಂಕೇತ. ಹುಚ್ಚುಗುದುರೆಯಂತೆ ಮಾನವನ ಮನಸ್ಸು ಓಡಾಡುತ್ತಿರುತ್ತದೆ, ಓಲಾಡುತ್ತಿರುತ್ತದೆ. ಅದನ್ನು ಹಗ್ಗ ಕಟ್ಟಿ, ಆಧ್ಯಾತ್ಮದತ್ತ ಕೇಂದ್ರೀಕರಿಸುವುದರಿಂದ, ನಿಯಂತ್ರಿಸುವುದರಿಂದ ಮಾನಸಿಕ ನೆಮ್ಮದಿ ಸದಾ ಸಾಧ್ಯ ಎಂದು ಬಿಂಬಿಸುತ್ತದೆ ಈ ಆಯುಧ.

ಗಣೇಶನ ಮಾನವರೂಪವು 'ತ್ವಂ'ನ ಪ್ರಾತಿನಿಧಿಕ ರೂಪ ಮತ್ತು ಆನೆಮೊಗವು 'ತತ್'ನ ರೂಪ. ಇವೆರಡನ್ನೂ ಸೇರಿಸಿದರೆ ತತ್ ತ್ವಂ ಎಂದೂ, (ತತ್ ಎಂದರೆ ಬ್ರಹ್ಮ, ಆತ್ಮ ಎಂದೂ ಅರ್ಥೈಸಬಹುದು) ನೀನೇ ಸರ್ವಲೋಕೈಕ ನಾಯಕ ಎಂಬರ್ಥದ 'ತತ್ತ್ವಮಸಿ' ಎಂಬುದು ಮುದ್ಗಲ ಪುರಾಣದಲ್ಲಿ ಉಲ್ಲೇಖಿತವಾದ ವಿಷಯ. ಅದನ್ನು ಹೀಗೂ ವ್ಯಾಖ್ಯಾನಿಸಬಹುದು. ಗಣಪತಿಯ ತಲೆಯು ಆತ್ಮದ ಪ್ರತೀಕವಾದರೆ, ದೇಹವು ಭೌತಿಕ ಇರುವಿಕೆಯ ತತ್ವವಾಗಿರುವ ಮಾಯೆಯ ಪ್ರತೀಕ.

ಇನ್ನು ಮೊರದಗಲದ ಕಿವಿ. ಧಾನ್ಯವನ್ನು ಧೂಳಿನ ಕಣಗಳಿಂದ ಬೇರ್ಪಡಿಸಲು ಮೊರವನ್ನು ಬಳಸುವ ಮಾದರಿಯಲ್ಲಿ, ಸತ್ಯವನ್ನು (ಬ್ರಹ್ಮ) ಅಸತ್ಯದಿಂದ (ಮಾಯೆ) ಬೇರ್ಪಡಿಸಲು ವಿವೇಕವನ್ನು ಬಳಸಬೇಕು. ಇದು ಗಣಪತಿಯ ಅಗಲ ಕಿವಿಯ ಸಂದೇಶ. ಅಥವಾ ಬ್ರಹ್ಮಸತ್ಯವನ್ನು ಮಾಯೆಯಿಂದ ಬೇರ್ಪಡಿಸಲು ಪುಣ್ಯಶ್ಲೋಕ ಶ್ರವಣದಿಂದಲೂ ಸಾಧ್ಯ ಎಂಬುದರ ಸಂಕೇತವೂ ಇದಾಗಿರುತ್ತದೆ.

ಹೀಗೆ, ಋದ್ಧಿ-ಸಿದ್ಧಿ ದಾಯಕನಾದ, ಬುದ್ಧಿಗೆ ಅಧಿದೇವತೆಯೂ ಆದ, ವಿಘ್ನ ನಿವಾರಕನ ಆರಾಧನೆಯು ಸಮಸ್ತರಿಗೂ ಸನ್ಮಂಗಳವುಂಟುಮಾಡುತ್ತದೆ, ಮಾನವನ ಪಾಪದ ಕೊಳೆ ತೊಳೆಯುತ್ತದೆ, ಮನಸ್ಸನ್ನು ಶುದ್ಧೀಕರಿಸುತ್ತದೆ. ಶುದ್ಧಮನದಿಂದ ಪ್ರಾರ್ಥಿಸಿದರೆ "ಕ್ಷಿಪ್ರ ಪ್ರಸಾದಕ" ಎಂದು ಕರೆಸಿಕೊಂಡಿರುವ ಆ ಭಗವಂತ ಸ್ವರೂಪಿಯನ್ನು ಅನವರತ ಕೊಂಡಾಡೋಣ.

ವೆಬ್‌ದುನಿಯಾದ ಸಕಲ ಓದುಗರಿಗೆ, ಹಿತೈಷಿಗಳಿಗೆ, ಆತ್ಮೀಯರಿಗೆ ಚೌತಿ ಹಬ್ಬದ ಶುಭಾಶಯಗಳು.ಇದರಲ್ಲಿ ಇನ್ನಷ್ಟು ಓದಿ :  

ಸಂಬಂಧಿಸಿದ ಸುದ್ದಿ

ವೆಬ್‌ದುನಿಯಾ ವಿಶೇಷ 08

ಗಣೇಶ ಚತುರ್ಥಿ ಮತ್ತು ವಿಘ್ನ...

ದೇಶ-ವಿದೇಶಗಳಲ್ಲೂ ಜನಪ್ರಿಯಗೊಂಡಿರುವ ಗಣೇಶ ಚತುರ್ಥಿ ಇಂದು ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ತುಂಬಾ ...

ಗಣೇಶೋತ್ಸವಗಳು ಬಿಂದಾಸ್ ಆಗದಿರಲಿ

ವರ್ಷಂಪ್ರತಿ ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿಯ ದಿನ ವಿನಾಯಕ ಚತುರ್ಥಿಯನ್ನು ಆಚರಿಸಲಾಗುತ್ತದೆ. ಹಬ್ಬದ ...

ಪ್ರಥಮ ಬಹುಮಾನ ತಂದ ಆ ಹಾಡು...

ಮುಸ್ಸಂಜೆಯ ಹೊತ್ತಲ್ಲಿ ಕೈಕಾಲು ಮುಖ ತೊಳೆದು ದೇವರ ಮುಂದೆ ಕುಳಿತು ನಾನು ಮೊದಲು ಹೇಳುವ ಭಜನೆ ಇದೇ ...

ವಿಡಂಬನೆ: ಭೂಲೋಕದಲ್ಲಿ ಗಣೇಶ ವಿಹಾರ!

ಅಪ್ಪಾ ಅಪ್ಪಾ ಈ ಸಲ ನನ್ನನ್ನು ಹಬ್ಬಕ್ಕೆ ಭೂ ಲೋಕಕ್ಕೆ ಕಳುಹಿಸಲೇ ಬೇಕು... ಹಾಗಂತ ಗಣೇಶ ಬೆಳಬೆಳಗ್ಗೆ ...

Widgets Magazine