ವಿಡಂಬನೆ: ಭೂಲೋಕದಲ್ಲಿ ಗಣೇಶ ವಿಹಾರ!

ಕೃಷ್ಣವೇಣಿ ಕುಂಜಾರು

WD
ಅಪ್ಪಾ ಅಪ್ಪಾ ಈ ಸಲ ನನ್ನನ್ನು ಹಬ್ಬಕ್ಕೆ ಭೂ ಲೋಕಕ್ಕೆ ಕಳುಹಿಸಲೇ ಬೇಕು... ಹಾಗಂತ ಗಣೇಶ ಬೆಳಬೆಳಗ್ಗೆ ರಚ್ಚೆ ಹಿಡಿದು ಅಳ್ತಾ ಇದ್ದುದನ್ನು ನೋಡಿ ಅಯ್ಯೋ ಪಾಪ ಅಂತ ಅನಿಸಿತು ಶಿವ-ಪಾರ್ವತಿಯರಿಗೆ. ಕೈಲಾಸದಲ್ಲೇ ಲಡ್ಡು, ಉಂಡೆ ಅಂತ ಮಾಡಿ ಮಾಡಿ ಪಾರ್ವತಿಗೂ ಸುಸ್ತು ಹೊಡೆದಿತ್ತು. ಅದಕ್ಕೆ ಮರುಮಾತಾಡದೇ ಒಪ್ಪಿಗೆ ಕೊಟ್ಟುಬಿಟ್ರು ಇಬ್ರೂ.

ಸರಿ. ಯಾವತ್ತಿನ ಹಾಗೇ ತನ್ನ ವಾಹನವೇರಿ ಬರುವಾಗ ನಂಗೆ ಈ ಬಾರಿಯಾದ್ರೂ ಪಿಜ್ಜಾ ಬರ್ಗ್ ಕೊಡಿಸ್ಲೇ ಬೇಕೂಂತ ಇಲಿಯದ್ದು ಒಂದೇ ರಾಗ. ಪ್ರತೀ ಸಾರಿನೂ ಅದೇ ಲಡ್ಡು-ಉಂಡೆ-ಚಕ್ಕುಲಿ ಎಷ್ಟೂಂತ ತಿನ್ನೋದು? ಅಂತ ಅದಕ್ಕೂ ಅನಿಸಿರ್ಬೇಕು.

ಹಾಗೂ ಹೀಗೂ ಭೂಲೋಕಕ್ಕೆ ನೇರವಾಗಿ ಇಳಿದ ತನ್ನ ನಿಜ ವೇಷ ಬದಲಾಯಿಸಿಕೊಂಡು ನೇರವಾಗಿ ಬಾಯಾರಿಸಿಕೊಳ್ಳುವಾಂತ ಸೀದಾ ಸಾರ್ವಜನಿಕ ಗಣೇಶೋತ್ಸವದ ಚಪ್ಪರ ಒಂದಕ್ಕೆ ಹೊಕ್ಕ.

"ನಂಗೆ ಬಾಯಾರಿಕೆ ಆಗ್ತಾ ಇದೆ ಕುಡಿಯೊದಕ್ಕೆ ಏನಾದ್ರೂ ಕೊಡಿ" ಅಂತ ಕೇಳಿದ. ಅಲ್ಲೊಬ್ಬ, ಸ್ವಯಂ ಸೇವಕ ಇರ್ಬೇಕು, ಬನ್ನಿ ಅಂತ ಎಲ್ಲರನ್ನು ಕರೀತಾ ಇದ್ದವ ಹಾಗೆ ಕೇಳಿದ್ದಕ್ಕೆ ಕೈಗೆ ಒಂದು ಕರಿ ನೀರಿನ ಬಾಟಲು ಕೊಟ್ಟ.

ಅದು ಎಂಥ ಪಾನೀಯಾಂತ ಗಣೇಶನಿಗೆ ಮಾತ್ರ ಅಲ್ಲ, ಅವನ ಇಲಿಯಪ್ಪನಿಗೂ ಅರ್ಥವಾಗಲಿಲ್ಲ. ಆದ್ರೆ ಇಲಿದು ಒಂದೇ ಪ್ರಶ್ನೆ; ಸೂಜಿಯ ಬಾಯಿ ಹಾಗಿರುವ ಈ ಬಾಟಲ್ ಒಳಗೆ ತನ್ನ ಮೂತಿಯನ್ನಿಳಿಸೋದು ಹೇಗಪ್ಪಾಂತ ಅವನ ಚಿಂತೆಯಾಗಿತ್ತು.

ಹೊಟ್ಟೆ ಮೇಲಿದ್ದ ನಾಗಪ್ಪ ಇಲ್ಲಿ ಬೇಡ ಯಾವುದಾದ್ರೂ ಮನೆಗೆ ಹೋಗು ಅಂತ ಬುಸ್ ಬುಸ್ ಅಂತ ಒಂದೇ ಸವನೆ ಬುಸುಗುಡ್ತಾ ಇದ್ದದ್ದಕ್ಕೆ ಮರುಮಾತಾಡದೇ ಸೀದಾ ಜಾಗ ಖಾಲಿ ಮಾಡ್ಬಿಟ್ಟ.

ಅದೊಂದು ಸುಂದರ ಮನೆ. ಹೊರಗಿಂದ ನೋಡೋವಾಗ ಅರಮನೆ ಹಾಗಿರೋ ಮನೆ. ಎಲ್ಲೆಲ್ಲೂ ಶುಭ್ರ, ಶಾಂತಿ... ಇಲ್ಲಿ ಖಂಡಿತಾ ನಮ್ಗೆ ಬೇಕಾಗಿದ್ದು ಸಿಗುತ್ತೆ ಅಂತ ಗಣೇಶ ಒಳಗೆ ಹೋಗಲು ಅನುವಾದ. ಆದರೆ ಇಲಿಯಪ್ಪ ಏನೇ ಆದ್ರೂ ಒಳಗೇ ಬರ್ತಾ ಇಲ್ಲ. "ಯಾಕೋ...ಬಾರೋ ಒಳಗೆ ಏನಾದ್ರೂ ಹೊಟ್ಟೆಗೆ ಹಾಕ್ಕೊಳ್ಳುವ" ಅಂತ ಗಣೇಶ ಕರೀತಾ ಇದ್ರೆ, ಬಾಲ ಸುಟ್ಟು ಹೋದಾಂಗೆ ಆಡ್ತಾ ಇದ್ದ ಇಲಿಯಪ್ಪ ಮೆಲ್ಲಗೆ ಹೇಳ್ತು.. "ನೋಡು ಅಲ್ಲಿ ಬೆಕ್ಕಪ್ಪ ಇದ್ದಾನೆ ನಾ ಬರಲ್ಲ..ಇಷ್ಟು ನೀಟಾಗಿ ಇರೋ ಮನೆಯಲ್ಲಿ ನಾ ಎಲ್ಲಿ ಅಡಗೋದು?"

ಸರಿ ಹೋಯ್ತು. "ಸದ್ಯಕ್ಕೆ ಇಲ್ಲೇ ಇರು ನಾನು ಕುಡ್ದು ನಿಂಗೂ ಸ್ವಲ್ಪ ಹಿಡ್ಕೊಂಡು ಬರ್ತೀನಿ ತಡಿ" ಹಾಗಂತ ಹೇಳಿ ಒಳಗೋದ ನಮ್ಮ ಗಣಪ. ಒಳಗೋಗಿ ನಂಗೆ ಕುಡಿಯೋದಕ್ಕೆ ಏನಾದರೂ ಕೊಡಿ ಅಂದದ್ದಕ್ಕೆ ಮನೆಯೊಡತಿ ಕೈಯಲ್ಲೊಂದು ಚೆಂಬು ಹಿಡ್ದು ಸಿಟ್ಟಲ್ಲಿ ಬಂದವಳೇ ಮಳೆ ಇಲ್ಲದೆ ನಮಗೇ ಕುಡಿಯಲು ನೀರಿಲ್ಲ, ಇನ್ನು ನಿಂಗೆಲ್ಲಿಂದ ತರ್ಲಿ ಅಂತ ಜಬರ್ದಸ್ತಾಗಿ ಆಕೆ ಕೇಳಿದ ಶೈಲಿ ಗಣೇಶನಿಗೆ ಹೆದರಿಕೆಯಾಯಿತು.

ಇಲ್ಲಿ ಬೇಡ ರಸ್ತೆ ಬದೀಲಿ ಬೋರ್‌ವೆಲ್ಲೋ, ಕೊಳನೋ ಸಿಗುತ್ತೆ ಅಲ್ಲಿಗೆ ಹೋಗುವಾಂತ ಹೊರಟ ಗಣೇಶ ತನ್ನ ಗಡಣದೊಂದಿಗೆ. ಪುಣ್ಯಕ್ಕೆ ಪಕ್ಕದಲ್ಲೊಂದು ಬಾವಿ ಇತ್ತು. ಅಲ್ಲೊಬ್ಬಳು ಹಣ್ಣು ಹಣ್ಣು ಮುದುಕಿ ಇದ್ದಳು. ಅವಳತ್ರ ಒಂದು ತಂಬಿಗೆ ಕೇಳಿ ಬಾಯಾರಿಸಿಕೊಂಡ್ರು ಎಲ್ಲರೂ.

ಬಾಯಾರಿಸಿಕೊಂಡ್ರೆ ಸಾಕಾ? ಎಷ್ಟಾದ್ರೂ ನಮ್ಮ ಗಣೇಶಂದು ಡೊಳ್ಳೊಟ್ಟೆ. ಹಾಗಾಗಿ ಇಷ್ಟೊತ್ತಿಲ್ಲದ ಹಸಿವು ಈಗ ಪ್ರತ್ಯಕ್ಷವಾಗಿತ್ತು. ಮತ್ತೆ ಹುಡುಕಾಟ ಶುರು.

ಸೀದಾ ದೇವಸ್ಥಾನವನ್ನೊಂದನ್ನು ಹೊಕ್ಕವನೇ ಪ್ರಸಾದನಾದ್ರೂ ಸಿಗುತ್ತಾಂತ ನೋಡಿದ್ರೆ ನೈವೇದ್ಯ ಆಗ್ಲಿಲ್ಲಾಂತ ಭಟ್ರು ದಪ್ಪ ಮುಖ ಮಾಡ್ಕೊಂಡು ಹೇಳೋದೇ? ಅಪ್ಪಾ ತಂದೆ ಭೂಲೋಕದಲ್ಲಿ ದೇವಸ್ಥಾನಕ್ಕೂ ಈ ಗತಿ ಬಂತೇ? ಅಂತ ಮನಸ್ಸಲ್ಲೇ ಅಂದ್ಕೊಂಡು ಹೊರಟ ಗಣಪ ಏನಾದ್ರೂ ಆಗ್ಲಿ ಇನ್ನಾರ ಮನೆಗೂ ಹೋಗಲಾರೇಂತ ಪೂಜೆ ಆಗೋದನ್ನೇ ಕಾಯುತ್ತಾ ಕೂತ.

ಸ್ವಲ್ಪ ಹೊತ್ತಿಗೆ ಕಿವಿಯ ತಮಟೆ ಒಡೆದು ಹೋಗೋ ಹಾಗೇ ಶಬ್ದ ಕೇಳಿ ಬಂದತ್ತ ನೋಡಿದ ಗಣೇಶ. ಗಣಪತಿಯ ಮೂರ್ತಿಯನ್ನು ಮೆರವಣಿಗೆ ಸಾಗುತ್ತಿತ್ತು. ಹಿಂದೆ ಮುಂದೆಯೆಲ್ಲಾ ಕುಂಡೆಗೆ ಕಾಲುಕೊಟ್ಟುಕೊಂಡು ಕುಣೀತಾ ಇದ್ದೋರನ್ನು ನೋಡಿ, ಎಲಾ ನನ್ನ ಹಬ್ಬ ಇಷ್ಟೆಲ್ಲಾ ಭರ್ಜರಿ ಮಾಡ್ತಾರೇನೋ ಮೂಷಕ? ಅಂತ ಇಲಿಯಪ್ಪನ ಕೇಳಿದ್ರೆ ಅವ ಪುರುಸೊತ್ತಿಲ್ಲದೆ ಆಚೀಚೆ ಓಡ್ತಾ ಇದ್ದ. ಯಾಕೋ? ಏನಾಯ್ತು? ಬೆಕ್ಕಪ್ಪ ಬಂದನೇನೋ? ಎಂದು ಪ್ರಶ್ನಿಸಿದ್ದಕ್ಕೆ, "ಇಲ್ಲ ಸ್ವಾಮಿಯೋರೆ ನೀವು ಕೊಟ್ಟಿದ್ರಲ್ಲ ಬೆಳ್ಳಿದು ಆಭರಣ ಕಾಣ್ತಾ ಇಲ್ಲ..." ಅಳುಮುಖ ಮಾಡ್ಕೊಂಡು ಹುಡುಕ್ತಾ ಇದ್ದ. ಅದನ್ನು ಕಂಡ ನಾಗಪ್ಪ ಹೇಳಿದ. ಹೂಂ ಮೊನ್ನ ತಾನೆ ಭೂಮಿಗೆ ಬಂದಿದ್ದ ಕೃಷ್ಣಪ್ಪ ಹೇಳ್ತಾ ಇದ್ದ ಭೂ ಲೋಕದಲ್ಲಿ ಕಳ್ಳತನ ಜಾಸ್ತಿಯಾಗಿದೆ ಜಾಗ್ರತೆಯಾಗಿರ್ಬೇಕೂಂತ.."

ನಾನಂತೂ ಇನ್ನು ಮುಂದಕ್ಕೆ ಬರಲ್ಲ. ಬನ್ನಿ ನಾವು ವಾಪಾಸು ಕೈಲಾಸಕ್ಕೋಗುವ ಅಂತ ಮೂಷಕ ವರಾತ ಹಚ್ಚಲಾರಂಭಿಸಿತು."ಲೋ ಪಿಜ್ಜಾ ಬೇಕೂಂತಿದ್ದೆ ಬೇಡ್ವೇನೋ " ಅಂತ ಸುಮ್ಮನೆ ಕೆಣಕಿದ ಗಣಪ. "ಅಯ್ಯೋ ಹೋಗ್ರಿ ಸ್ವಾಮಿ... ಪಿಜ್ಜಾನೂ ಬೇಡ ಅಜ್ಜನೂ ಬೇಡಾ..ನಂಗೆ ಕೈಲಾಸನೇ ಸಾಕು" ಎಂದ ಸಪ್ಪೆ ಮುಖದ ಮೂಷಕ.

ಹಾಗೇಳಿದ ಇಲಿಯಪ್ಪ ಸೀದಾ ಹೊರಡುವ ತಯ್ಯಾರಿ ನಡೆಸಿದ. ಇನ್ನು ಗಣೇಶನಿಗೂ ಇಲ್ಲಿರೋದಕ್ಕೆ ಮನಸ್ಸಾಗಲಿಲ್ಲ. ಇಲ್ಲಿ ತಿಂಡಿಗೆ ಕಾಯೋ ಹೊತ್ತಿಗೆ ಮನೆ ಸೇರ್ಬಹುದು ಅಂತ ಇಲಿ ಮೇಲೆ ಸದ್ದಿಲಿಲ್ಲದೆ ಏರಿದ. "ಅಯ್ಯಯ್ಯೋ ನಾನಂತೂ ಇನ್ಮುಂದೆ ಭೂಲೋಕಕ್ಕೆ ಬರಲ್ಲ ನೀವು ಬೇಕಾದ್ರೆ ಹೋಗಿ" ಅನ್ನೋ ವಗ್ಗರಣೆ ಬೇರೆ ಇಲಿಯಪ್ಪಂದು!

ಹೋಗೋದಿಕ್ಕೆ ಅರೆ ಮನಸ್ಸಿಂದ ರೆಡಿಯಾಗ್ತಾ ಇದ್ದ ಗಣಪಗೆ 'ಗುಳುಂ' ಅಂತ ಜೋರಾಗಿ ಶಬ್ದ ಕೇಳಿತು. ಏನು ಅಂತ ತಿರುಗಿ ನೋಡಿದ್ರೆ ಅವನ ಮೂರ್ತಿಯನ್ನು ಎಲ್ಲರೂ ಸೇರಿ ಎತ್ತಿ ಭಾವಿಗೆ ಎಸೆಯುತ್ತಿದ್ದರು! ಇನ್ನು ಇಲ್ಲಿನ ಸಹವಾಸ ಬೇಡಾಂತ ಅವನಿಗೂ ಅನ್ನಿಸಿಬಿಟ್ಟಿತು. ಸೀದಾ ಆಚೆ ಮುಖ ಕೂಡಾ ತಿರುವದೆ ಹೊರಟೇ ಬಿಟ್ಟ ಗಣೇಶ!ಇದರಲ್ಲಿ ಇನ್ನಷ್ಟು ಓದಿ :  

ವೆಬ್‌ದುನಿಯಾ ವಿಶೇಷ 08

2008ರಲ್ಲಿ ನಟಮಹಾಶಯರ ಸ್ಕೋರ್ ಕಾರ್ಡ್

ಈ ವರ್ಷ ಬಾಲಿವುಡ್ ಘಟಾನುಘಟಿ ನಾಯಕರ ಚಿತ್ರಗಳು ಮತ್ತು ಅವಕ್ಕೆ ದೊರೆತೆ ಪ್ರತಿಕ್ರಿಯೆಗಳು ಇಂತಿವೆ...

ಎದ್ದು ಬಿದ್ದ ಬಾಲಿವುಡ್ ನಾಯಕಿಯರಾರು?

2008ರ ವರ್ಷದಲ್ಲಿ ಬಾಲಿವುಡ್ ರಂಗದಲ್ಲಿ ಗೆದ್ದ ನಾಯಕಿಯರು ಯಾರು? ವಿವಿಧ ನಾಯಕಿಯರ ಪಾತ್ರಗಳ ಕುರಿತು ಒಂದು ...

75ರ ಸಂಭ್ರಮದಲ್ಲಿ ಕನ್ನಡ ಚಿತ್ರರಂಗ: 2008ರಲ್ಲಿ ಗಣನೀಯ ವೃದ್ಧಿ

ಕನ್ನಡ ಚಿತ್ರರಂಗಕ್ಕೀಗ ಎಪ್ಪತ್ತೈದರ ಸಂಭ್ರಮ. ಅನೇಕ ಏಳು ಬೀಳುಗಳನ್ನು ಎದುರಿಸಿ, ಪರಭಾಷಾ ಚಿತ್ರಗಳ ...

ಸಾಧಾರಣ ಗೆಲುವಿನಲ್ಲಿ ಬಾಲಿವುಡ್ ಥಳುಕು

ಈ ವರ್ಷದಲ್ಲೂ ಬಾಲಿವುಡ್‌ನಲ್ಲಿ ಹಲವು ಸಿನಿಮಾಗಳು ಹರಿದು ಬಂದಿವೆ. ಒಟ್ಟಾರೆಯಾಗಿ ಹೇಳುವುದಾದರೆ, ಈ ವರ್ಷ ...

Widgets Magazine