ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ದೇವರು ಒಬ್ಬನೇ ಎನ್ನುವ ಅಂಶವಿದ್ದರೂ, ಹಲವು ಹೆಸರುಗಳಿಂದ, ಹಲವು ಅವತಾರಗಳಿಂದ ಹಲವು ಆಕೃತಿಗಳಲ್ಲಿ ಭಗವಂತನನ್ನು ಪೂಜಿಸುವುದು ರೂಢಿಯಲ್ಲಿದೆ. ಅಂತಹ ನಾನಾ ಅವತಾರಗಳಲ್ಲಿ ನಾನಾ ರೂಪಗಳಲ್ಲಿ ಪೂಜಿಸಲ್ಪಡುವ ಭಗವಂತನಲ್ಲಿ ಪ್ರಥಮವಂದಿತ ಎಂದು ಹೆಸರನ್ನು ಇಟ್ಟುಕೊಂಡವನು, ಎಲ್ಲಾ ಕೆಲಸಗಳಲ್ಲಿಯೂ ಆದಿಯಲ್ಲಿ ಅಂದರೆ ಪ್ರಾರಂಭದಲ್ಲಿ ಪೂಜೆಯನ್ನು ಸ್ವೀಕರಿಸುವವನು ಶ್ರೀ ಮಹಾಗಣಪತಿ. ಆತನ ಆಕೃತಿಯೇ ಅತ್ಯಂತ ಸೊಗಸಾಗಿ ವಿಚಿತ್ರವಾಗಿಯೂ ಇರುವಂಥದ್ದು.