ನಿಮಗಾಗಿ ಹಗಲಿರುಳು ಕೆಲಸ ಮಾಡುವ 'ಹೃದಯ'ದ ಬಗ್ಗೆ ಕಾಳಜಿ ಹೀಗಿರಲಿ..

ಬೆಂಗಳೂರು| Ramya kosira| Last Modified ಭಾನುವಾರ, 12 ಸೆಪ್ಟಂಬರ್ 2021 (07:03 IST)
Health Tips: ನಮ್ಮ ಹೃದಯವು ಸದಾ ಕೆಲಸ ಮಾಡುತ್ತಲೇ ಇರುತ್ತದೆ. ಇದು ನಮ್ಮ ಕಾಪಾಡುವಲ್ಲಿ ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತದೆ, ಹಾಗಾಗಿ ನಾವು ನಮ್ಮ ಹೃದಯವನ್ನು ಆರೋಗ್ಯವಾಗಿ ನೋಡಿಕೊಳ್ಳಬೇಕಲ್ಲವೇ?
ನಾವು ಬೆಳಗ್ಗೆಯಿಂದ ಹಿಡಿದು ರಾತ್ರಿಯವರೆಗೆ ಬಿಡುವಿಲ್ಲದೆ ಕೆಲಸ ಮಾಡಿ ಸುಸ್ತಾಗಿ, ಆ ಆಯಾಸವನ್ನು ನಿವಾರಿಸಿಕೊಳ್ಳಲು ನಿದ್ದೆ ಮಾಡುತ್ತೇವೆ. ಆದರೆ ನಮ್ಮ ದೇಹದಲ್ಲಿನ ಅವಿಭಾಜ್ಯ ಅಂಗವಾದ ಹೃದಯ ನಾವು ಹುಟ್ಟಿದಾಗಿನಿಂದ ಮರಣ ಹೊಂದುವ ಕೊನೆಯ ಕ್ಷಣದವರೆಗೆ ತನ್ನ ಕೆಲಸವನ್ನು ಬಿಡುವಿಲ್ಲದೆ ನಿರಂತರವಾಗಿ ಮಾಡುತ್ತಲೇ ಇರುತ್ತದೆ ಎನ್ನುವುದು ಅಕ್ಷರಶಃ ಸತ್ಯ.ಈ ಹೃದಯದ ಕೆಲಸವೇ ಅಂತಹದ್ದು, ನಮ್ಮ ದೇಹದ ಎಲ್ಲಾ ಅಂಗಾಂಗಗಳಿಗೂ ರಕ್ತ ಮತ್ತು ಆಮ್ಲಜನಕ ಸಾಗಿಸುತ್ತದೆ. ಅದಕ್ಕಾಗಿ ನಮ್ಮ ಹೃದಯವು ಸದಾ ಕೆಲಸ ಮಾಡುತ್ತಲೇ ಇರುತ್ತದೆ. ಇದು ನಮ್ಮ ಆರೋಗ್ಯ ಕಾಪಾಡುವಲ್ಲಿ ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತದೆ, ಹಾಗಾಗಿ ನಾವು ನಮ್ಮ ಹೃದಯವನ್ನು ಆರೋಗ್ಯವಾಗಿ ನೋಡಿಕೊಳ್ಳಬೇಕಲ್ಲವೇ?> ನಿಮ್ಮ ಹೃದಯಕ್ಕೆ ಅಗತ್ಯವಿರುವ ಆರೈಕೆ ಮಾಡದೇ ಇದ್ದಾಗ, ಅಪಧಮನಿಗಳ ಒಳಪದರದಲ್ಲಿ ಗಂಭೀರ ಸಮಸ್ಯೆಗಳು ಉಂಟಾಗುವುದರಿಂದ ಹೃದಯಾಘಾತ ಮತ್ತು ಅಪಧಮನಿಗಳಲ್ಲಿ ರಕ್ತದ ಹರಿವಿನ ಅಡಚಣೆಗೆ ಕಾರಣವಾಗಬಹುದು.> ಹಾಗಾದರೆ ಬನ್ನಿ ನಮ್ಮ ಹೃದಯವನ್ನು ಆರೋಗ್ಯವಾಗಿಟ್ಟುಕೊಳ್ಳಲು ಯಾವ ಯಾವ ಅಂಶಗಳ ಮೇಲೆ ನಮ್ಮ ಗಮನ ಇರಬೇಕು ಎನ್ನುವುದನ್ನು ತಿಳಿದುಕೊಳ್ಳೋಣ. ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರಲಿ
ಎಲ್ಲಾ ಕೊಲೆಸ್ಟ್ರಾಲ್ಗಳು ಕೆಟ್ಟದು ಎಂದು ನಾವೆಲ್ಲಾ ಭಾವಿಸುತ್ತೇವೆ, ಆದರೆ ನಮ್ಮ ದೇಹವು ಸರಿಯಾಗಿ ಕೆಲಸ ಮಾಡಲು ಇದರ ಸ್ವಲ್ಪ ಅಗತ್ಯವಿದೆ. ಕೊಲೆಸ್ಟ್ರಾಲ್ ಅನ್ನು ನಾವು ಸೇವಿಸುವಂತಹ ಆಹಾರದಿಂದ ಪಡೆಯುತ್ತೇವೆ. ಇದು ದೇಹಕ್ಕೆ ವಿಟಮಿನ್ ಡಿ ಮತ್ತು ಕೆಲವು ಹಾರ್ಮೋನುಗಳನ್ನು ತಯಾರಿಸಲು ಸಹಾಯ ಮಾಡುತ್ತದೆ.
ಕೊಲೆಸ್ಟ್ರಾಲ್ ನಲ್ಲಿ ಎರಡು ವಿಧಗಳಿದ್ದು, ಹೆಚ್ಚಿನ ಸಾಂದ್ರತೆಯ ಲಿಪೋಪ್ರೋಟೀನ್ ಉತ್ತಮ ಕೊಲೆಸ್ಟ್ರಾಲ್ ಎಂದು ಕರೆಯಲಾಗುತ್ತದೆ, ಮತ್ತು ಕಡಿಮೆ ಸಾಂದ್ರತೆಯ ಲಿಪೋಪ್ರೋಟೀನ್ ಕೆಟ್ಟ ಕೊಲೆಸ್ಟ್ರಾಲ್ ಎಂದು ಕರೆಯಲಾಗುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಹೃದ್ರೋಗಕ್ಕೆ ಕಾರಣವಾಗಬಹುದು.
ನೀವು ಯಾವುದೇ ಹೃದ್ರೋಗವನ್ನು ಹೊಂದಿಲ್ಲದಿದ್ದರೆ, ಪ್ರತಿ 4 ರಿಂದ 6 ವರ್ಷಗಳಿಗೊಮ್ಮೆ ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಪರೀಕ್ಷಿಸಿಕೊಳ್ಳಬೇಕು. ನೀವು ಹೆಚ್ಚಿನ ಕೊಲೆಸ್ಟ್ರಾಲ್ ಹೊಂದಿದ್ದರೆ, ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಆಗಾಗ ಪರೀಕ್ಷಿಸಿ ಕೊಳ್ಳಬೇಕಾಗುತ್ತದೆ. ಔಷಧಿಗಳು ಮತ್ತು ಜೀವನಶೈಲಿಯಲ್ಲಿ ಬದಲಾವಣೆಗಳು ಮಾಡಿಕೊಂಡರೆ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತದೆ.
ಅಧಿಕ ರಕ್ತದೊತ್ತಡದ ಬಗ್ಗೆ ನಿಗಾ ವಹಿಸಿ
ನಿಮ್ಮ ಅಧಿಕ ರಕ್ತದೊತ್ತಡವು ನಿಮ್ಮ ಅಪಧಮನಿಗಳು, ಹೃದಯ, ಮೂತ್ರಪಿಂಡಗಳು ಮತ್ತು ಇತರೆ ಅಂಗಾಂಗಗಳ ಮೇಲೆ ಭಾರಿ ಪರಿಣಾಮ ಬೀರಬಹುದು. ಅತಿಯಾದ ರಕ್ತದೊತ್ತಡದಿಂದ ಹೃದಯಾಘಾತ, ಪಾರ್ಶ್ವವಾಯು ಮತ್ತು ಮೂತ್ರಪಿಂಡ ವೈಫಲ್ಯವೂ ಆಗಬಹುದು. ನಿಮಗೆ ಅಧಿಕ ರಕ್ತದೊತ್ತಡವಿಲ್ಲದಿದ್ದರೆ, 20 ವರ್ಷ ವಯಸ್ಸಿನ ನಂತರ ಪ್ರತಿ ಎರಡು ವರ್ಷಗಳಿಗೊಮ್ಮೆ ನಿಮ್ಮ ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳಿ. ನೀವು ಅಧಿಕ ರಕ್ತದೊತ್ತಡ ಹೊಂದಿದ್ದರೆ, ನೀವು ಆಗಾಗ ಅದನ್ನು ಪರೀಕ್ಷಿಸಿಕೊಳ್ಳಿ. ನಿಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಂಡರೆ ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ನಿಮಗೆ ಔಷಧೋಪಚಾರದ ಅಗತ್ಯವಿದೆಯೇ ಎಂದು ತಿಳಿಯಲು ನಿಮ್ಮ ವೈದ್ಯರೊಂದಿಗೆ ಮಾತನಾಡಿ.
ಹೃದಯದ ಆರೋಗ್ಯಕ್ಕಾಗಿ ಏನು ಸೇವಿಸಿದರೆ ಒಳ್ಳೆಯದು
ನಿಮ್ಮ ದೇಹದ ತೂಕದಲ್ಲಿ, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ನಲ್ಲಿ ಸುಧಾರಣೆಯನ್ನು ಕಂಡುಕೊಳ್ಳಲು ನೀವು ನಿಮ್ಮ ಆಹಾರದಲ್ಲಿ ಬದಲಾವಣೆಗಳನ್ನು ಮಾಡುವುದು ನಿಮ್ಮ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.
ಫೈಬರ್ ಅಂಶವಿರುವ ಆಹಾರವು ಹೃದ್ರೋಗ ಮತ್ತು ಮಧುಮೇಹ, ರಕ್ತದೊತ್ತಡ, ಕೆಟ್ಟ ಕೊಲೆಸ್ಟ್ರಾಲ್, ತೂಕವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ತುಂಬಾ ಸಹಾಯಕವಾಗಿದೆ. ಹೆಚ್ಚಾಗಿ ಹಣ್ಣುಗಳು, ತರಕಾರಿಗಳು ಮತ್ತು ಸಿರಿಧಾನ್ಯಗಳನ್ನು ಸೇವಿಸಿರಿ. ಕೆಂಪು ಮಾಂಸ, ಸಕ್ಕರೆ ಯುಕ್ತ ಆಹಾರಗಳು ಮತ್ತು ಪಾನೀಯಗಳನ್ನು ಕಡಿಮೆ ಮಾಡುವುದರಿಂದ ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಇದರ ಜೊತೆಗೆ ನಿಯಮಿತವಾಗಿ ವ್ಯಾಯಾಮ ಮಾಡುವುದು, ಧೂಮಪಾನ ಮತ್ತು ಮದ್ಯಪಾನವನ್ನು ತ್ಯಜಿಸುವುದು ಉತ್ತಮ ಮತ್ತು ನಿಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ ಎಂದು ತಜ್ಞರು ಹೇಳುತ್ತಾರೆ. ಇದರ ಜೊತೆಗೆ ವೈದ್ಯರು ಹೇಳಿದ ಮಾತ್ರೆಗಳನ್ನು ಯಾವ ಕಾರಣಕ್ಕೂ ಮಧ್ಯದಲ್ಲಿ ಬಿಡಬೇಡಿ.
 ಇದರಲ್ಲಿ ಇನ್ನಷ್ಟು ಓದಿ :