ಎಲ್ಲೆಲ್ಲೂ ರಂಗು, ಇದು ಹೋಳಿಯ ಗುಂಗು

ಚಂದ್ರ

PTI
ಗುಲಾಬಿ, ಕೆಂಪು, ಹಸಿರು, ನೀಲಿ, ಹಳದಿ, ಕಂದು - ಎಲ್ಲೆಲ್ಲೂ ರಂಗು. ಹೌದು, ಇದು ಹೋಳಿ ಹಬ್ಬದ ಗುಂಗು.

ಫಾಲ್ಗುಣ ಹುಣ್ಣಿಮೆಯ ವೇಳೆ ಆಚರಿಸುವ ಹಬ್ಬ ಹೋಳಿ. ಕೆಡುಕಿನ ವಿರುದ್ಧ ಒಳಿತಿನ ಗೆಲುವಿನ ಸಂಕೇತ ಈ ಹಬ್ಬ. ಈ ಹಬ್ಬಾಚರಣೆ ಸಾಮಾಜಿಕ ಸಂಬಂಧದ ಸೇತುವೆಯೂ ಹೌದು. ಮತ್ತು ಹೊಸ ಸಂಬಂಧಗಳನ್ನು ಅರಳಿಸುವ ಹಬ್ಬವೂ ಆಗಿದೆ. ಜನರು ಮೇಲುಕೀಳು, ವಯಸ್ಸಿನ ಅಂತರ, ಜಾತಿಮತ (ಪ್ರಸಕ್ತ ಕಾಲಾವಸ್ಥೆಯಲ್ಲಿ ಪಕ್ಷಭೇದ) ಮರೆತು ಹೋಳಿ ಆಡುತ್ತಾರೆ.

ಹೋಳಿ ಉತ್ಸವಾಗ್ನಿ(ಕಾಮದಹನ)ಯ ಮೂಲಕ ಹಬ್ಬಾಚರಣೆ ಆರಂಭವಾಗುತ್ತಿದೆ. ಮರುದಿನ ಜನರು ಪರಸ್ಪರ ಮುಖ ಕೆನ್ನೆಗಳಿಗೆ ಬಣ್ಣಗಳನ್ನು ಬಳಿಯುತ್ತಾ ಹೋಲಿಯ ರಂಗಿನಾಟ ಆಚರಿಸುತ್ತಾರೆ. ಪರಿಚಿತರು ಅಪರಿಚಿತರೆನ್ನದೆ ರಂಗುಬಳಿಯುವ ವೇಳೆ "ತಪ್ಪು ತಿಳಿಯಬೇಡಿ. ಹೋಳಿ" ಅನ್ನುತ್ತಾ ಬಣ್ಣ ಹಚ್ಚುವ ಪರಿಪಾಠವಿದೆ. ಉತ್ತರಭಾರತ, ಮಹಾರಾಷ್ಟ್ರಗಳಲ್ಲಿ ಈ ಹಬ್ಬದ ಆಚರಣೆ ಹೆಚ್ಚು. ಈ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹೋಳಿಯ ರಂಗು ಕಮ್ಮಿ ಎನ್ನಬಹುದು. ಆದರೂ ಬಣ್ಣದಾಟ, ರಂಗಿನಾಟದ ಆಚರಣೆ ನಮ್ಮಲ್ಲೂ ಇದೆ. ಯುವಕ ಯುವತಿಯರು, ಮಕ್ಕಳು ಹೋಳಿ ಆಡುತ್ತಾ ಸಂಭ್ರಮಪಡುತ್ತಾರೆ.

ಪರಸ್ಪರು ಬಣ್ಣದ ಪುಡಿಗಳನ್ನು ಮುಖಕ್ಕೆ ಪೂಸುವ ಮೂಲಕ, ಅಥವಾ ಬಣ್ಣದ ಹುಡಿಯನ್ನು ನೀರಿನಲ್ಲಿ ಕದಡಿ ಈ ಬಣ್ಣದ ನೀರನ್ನು ಪಿಚಕಾರಿಗಳಲ್ಲಿ ಎರಚುತ್ತಾ, ಹಾಡುತ್ತಾ ನಲಿಯುವುದು ಹೋಳಿಯ ಸಂಭ್ರಮ.

ಶಿಶಿರದ ಅಂತ್ಯ ಮತ್ತು ವಸಂತಕಾಲದ ಅರಳುವಿಕೆಯ ಕಾಲದಲ್ಲಿ ಈ ಹಬ್ಬ ಆಗಮಿಸುತ್ತದೆ. ಬಣ್ಣಗಳ ಖರೀದಿ, ಅವುಗಳೊಂದಿಗೆ ಆಟ ಹಬ್ಬದ ಉತ್ಕರ್ಷ. ಬಣ್ಣಗಳನ್ನು ಖರೀದಿಸಿ ಮನೆಗೆ ತರುವ ಮೂಲಕ ಮನೆಗೆ ಹರ್ಷೋಲ್ಲಾಸ, ಆನಂದ, ಸಂತಸವನ್ನು ಮನೆ-ಮನ ಬದುಕಿಗೆ ತರಲಾಗುತ್ತದೆ ಎಂಬುದು ಈ ಬಣ್ಣದ ಹಬ್ಬದ ಸಂಕೇತ.

ಪುಟ್ಟಮಕ್ಕಳು ಈ ಹಬ್ಬದ ಇಂಚಿಂಚನ್ನು ಸಂಭ್ರಮೋಲ್ಲಾಸದಿಂದ ಆಚರಿಸುತ್ತಾ ಅನಂದಿಸುತ್ತಾರೆ. ಅಪ್ಪ, ಅಮ್ಮ ಸಹೋದರ ಸಹೋದರಿಯರಿಗೆ ಬಣ್ಣ ಮೆತ್ತಲು ತಾಮುಂದು ನಾಮುಂದು ಎಂಬುದು ಅವರು ಉತ್ಸಾಹ. ಬಳಿಕ ನೆರೆಹೊರೆಯವರು, ಸಂಬಂಧಿಗಳಿಗೂ ಬಣ್ಣ ಎರಚಲು ತೆರಳಿ ಓರಗೆಯವರೊಂದಿಗೆ ಬಣ್ಣದಾಟವಾಡುತ್ತಾ ನಲಿಯುವುದನ್ನು ನೋಡುವುದು ಕಣ್ಣಿಗೂ ಮನಸ್ಸಿಗೂ ಅಂದ.

ಮಾರುಕಟ್ಟೆಯಲ್ಲಿ ಬೇಕಾದ ಬಣ್ಣಗಳು ಸಿಗುತ್ತಿದ್ದರೂ, ಕೆಲವು ಕಟ್ಟಾ ಆಚರಣೆಗಾರರು ಮನೆಯಲ್ಲೇ ಬಣ್ಣವನ್ನು ತಯಾರಿಸುತ್ತಾರೆ. 'ಟೆಸು' ಮತ್ತು 'ಪಲಾಸ್' ಎಂಬ ಹೂವುಗಳಿಂದ ಬಣ್ಣದ ಪುಡಿ ತಯಾರಿಸಲಾಗುತ್ತದೆ. ಸುವಾಸನೆಬೀರುವ ಈ ಪುಡಿಯಲ್ಲಿ ಮನೆಯಲ್ಲಿ ತಯಾರಿತ ಎಂಬ ಅಕ್ಕರಾಸ್ಥೆ ಮಿಳಿತವಾಗಿದ್ದು ಹಬ್ಬದಾಟ ಇನ್ನಷ್ಟು ಕಂಪು - ಇಂಪು.

ಸಂಪ್ರದಾಯವಾದಿ ಆಚರಣೆಗಾರರು ಪುಟ್ಟ ಕ್ರಿಸ್ಟಲ್ ಅಥವಾ ದಪ್ಪ ಕಾಗದ ಪುಡಿಗಳಿಗೆ ಗುಲಾಲ್ ಮಿಶ್ರಮಾಡುವ ಮೂಲಕವೂ ಬಣ್ಣವನ್ನು ತಯಾರಿಸುತ್ತಾರೆ. ಕೆಲವು ತುಂಟರು ಸಿಲ್ವರ್ ಮತ್ತು ಗೋಲ್ಡ್ ಪೇಂಟ್‌ ಬಳಿಯುತ್ತಾರೆ. ಅದೇನೇ ಇದ್ದರೂ ಹೋಲಿಯಾಟದ ಅಂತ್ಯದಲ್ಲಿ ಯಾರೂ ತಮ್ಮ ಮೂಲ ಬಣ್ಣದಲ್ಲಿ ಇರುವುದಿಲ್ಲ. ಮತ್ತು ಒಬ್ಬರನ್ನೊಬ್ಬರು ನೋಡುತ್ತಾ ನಗುತ್ತಾ, ಕಾಲೆಳೆಯುತ್ತಾ, ತಮಾಷೆ ಮಾಡುತ್ತಾ ಸಂತೋಷ ಅನುಭವಿಸುತ್ತಾರೆ. ಹಬ್ಬಾಚರಣೆಯ ವೇಳೆ ಸಾಮಾನ್ಯವಾಗಿ ತೊಡುವ ಶ್ವೇತ ವಸ್ತ್ರಗಳು ರಂಗುರಂಗಿನ ರಂಗೀಲಾ.

ಈ ಹೋಳಿ ಆಚರಣೆವೇಳೆ ಎಲ್ಲರೂ ಮಕ್ಕಳಾಗುತ್ತಾರೆ. ದುಃಖ ದುಮ್ಮಾನ ಬೇಸರ ಒತ್ತಡಗಳನ್ನೆಲ್ಲ ಮರೆತು ಎಲ್ಲರೂ ಮಕ್ಕಳಾಗುವ ಹಬ್ಬವಿದು. ಯುವಕರಿಗಂತೂ ತಮ್ಮ ಅದಮ್ಯ ಉತ್ಸಾಹದ ಪ್ರದರ್ಶನಕ್ಕೆ ಇದಕ್ಕಿಂತ ಬೇರೆ ಅವಕಾಶ ಬೇಕೇ? ಮಾನವ ಪಿರಮಿಡ್‌ಗಳನ್ನು ನಿರ್ಮಿಸಿ ಅತಿ ಎತ್ತರದಲ್ಲಿ ಕಟ್ಟಿರುವ ಮಜ್ಜಿಗೆ ಮಡಿಕೆಯನ್ನು ಒಡೆಯುತ್ತಾರೆ. ತಮ್ಮ ಪ್ರೀತಿಪಾತ್ರರಿಗೆ ಬಣ್ಣ ಹಚ್ಚುತ್ತಾರೆ, ಕುಣಿಯುತ್ತಾರೆ. ನಲಿಯುತ್ತಾರೆ.

ಹೋಳಿ ಆಚರಣೆಗೆ ಯಾವುದೇ ಎಲ್ಲೆಇಲ್ಲ. ಸಂತಸ ಆಚರಣೆ ತಮ್ಮ ಹಕ್ಕು ಎಂಬಂತೆ ಪ್ರತಿಯೊಬ್ಬರೂ ಆಚರಿಸುತ್ತಾರೆ. ಹಾಡು, ಕುಣಿತ, ಬಣ್ಣದ ಮೋಜು, ಮೋಜು, ಮೋಜು. ಹೋಳಿಯ ಕಾಲದಲ್ಲಿ ಜೀವನವೇ ಅತ್ಯಂತ ವರ್ಣಮಯ, ಬಣ್ಣಮಯ.ಇದರಲ್ಲಿ ಇನ್ನಷ್ಟು ಓದಿ :