ಕಾಲಚಕ್ರ ಉರುಳಿದ ಹಾಗೆ ನಮ್ಮ ಬೇಕು, ಬೇಡಗಳ ಪಟ್ಟಿಯೂ ಬೆಳೆಯುತ್ತಲೇ ಹೋಗುತ್ತದೆ. ಜಿಡ್ಡು ಕೃಷ್ಣಮೂರ್ತಿ ಅವರು ಹೇಳುವಂತೆ ಬಾಲ್ಯದಿಂದ ಸಾಯುವವರೆಗೂ ನಾವು ಗುಪ್ತವಾಗಿಯೋ, ಕಪಟವಾಗಿಯೋ ಅಥವಾ ನೇರವಾಗಿಯೋ ಆಗಿ ಸುಖವನ್ನು ಬೆನ್ನಟ್ಟಿದ್ದೇವೆ. ಏಕೆಂದರೆ ಅದೇ ನಮ್ಮ ಬದುಕನ್ನು ರೂಪಿಸುತ್ತದೆ ಹಾಗೂ ನಮ್ಮ ಮಾರ್ಗವನ್ನು ನಿರ್ದೇಶಿಸುತ್ತದೆ. ಸುಖವನ್ನು ಹುಡುಕಿ ಅದನ್ನು ಪುಷ್ಟಿಗೊಳಿಸಿ, ಉಳಿಸಿಕೊಂಡು ಹೋಗುವದು ಬದುಕಿನ ಮೂಲಭೂತ ಬೇಡಿಕೆಯಾಗಿದೆ. ಅದಿಲ್ಲದಿದ್ದರೆ ಬದುಕು ನೀರಸ, ಜಡ, ಏಕಾಕಿ ಹಾಗೂ ಅರ್ಥಹೀನವಾಗುತ್ತದೆ!