Widgets Magazine

ಲೀಟರ್ ಹಾಲು ರೂ. 4 ರಿಂದ 5 ಕ್ಕೆ ಹೆಚ್ಚಳ

Bangalore| Rajendra| Last Modified ಶುಕ್ರವಾರ, 3 ಫೆಬ್ರವರಿ 2017 (16:18 IST)
ರಾಜ್ಯದಲ್ಲಿ ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನವನ್ನು ಡಿಸೆಂಬರ್ 2016 ರಿಂದ ಜಾರಿಗೆ ಬರುವಂತೆ ಪ್ರತಿ ಲೀಟರ್ ಹಾಲಿಗೆ ರೂ. 4 ರಿಂದ 5 ಗಳಿಗೆ ಹೆಚ್ಚಿಸಿ ಸರ್ಕಾರ ಆದೇಶಿಸಿದೆ. ಇನ್ನು ಮುಂದೆ ಎಲ್ಲಾ ಹಾಲು ಪೂರೈಕೆದಾರರಿಗೆ ಪ್ರೋತ್ಸಾಹಧನವನ್ನು ಫಲಾನುಭವಿಗಳಿಗೆ ಖಾತೆಗೆ ನೇರ ಹಣ ವರ್ಗಾವಣೆ (ಡಿಬಿಟಿ) ಮುಖಾಂತರ ನೀಡಲು ಉದ್ದೇಶಿಸಿರುತ್ತದೆ.

ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯ ಜೋಡಣೆ ಅನುಕೂಲಕರವಾಗಿದ್ದು, ಈ ಬಗ್ಗೆ ಎಲ್ಲಾ 14 ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರುಗಳಿಗೆ ಹಾಲು ಪೂರೈಕೆದಾರರ ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಿದ ಸಂಪೂರ್ಣ ವಿವರವನ್ನು ಸಲ್ಲಿಸಲು ಸೂಚಿಸಿದ್ದು, ಈ ಪ್ರಕ್ರಿಯೆ ಪೂರ್ಣಗೊಳ್ಳುವ ಹಂತದಲ್ಲಿದೆ.

ಇನ್ನು ಮುಂದೆ ಹಾಲು ಪ್ರೋತ್ಸಾಹಧನವು ಆಧಾರ್ ಸಂಖ್ಯೆ ಜೋಡಣೆ ಹೊಂದಿರುವ ಖಾತೆಗಳಿಗೆ ಮಾತ್ರ ಜಮೆಯಾಗುತ್ತದೆ. ಆಧಾರ್ ಸಂಖ್ಯೆ ಜೋಡಣೆ ಇಲ್ಲದಿರುವ ಹಾಲು ಪೂರೈಕೆದಾರರ ಖಾತೆಗಳಿಗೆ ಈ ಪ್ರಕ್ರಿಯೆ ಆದ ನಂತರವೇ ಪ್ರೋತ್ಸಾಧನ ಪಾವತಿಯಾಗುವುದೆಂದು ತಿಳಿಸಲಾಗಿದೆ.

ಆಧಾರ್ ಕಾರ್ಡ್ ಇಲ್ಲದಿರುವ ಎಲ್ಲಾ ಹಾಲು ಉತ್ಪಾದಕರು ಆದಷ್ಟು ಬೇಗನೆ ಆಧಾರ್ ಕಾರ್ಡ್ ಪಡೆದು ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ಸಲ್ಲಿಸಲು ಪಶುಸಂಗೋಪನಾ ಇಲಾಖೆ ಪ್ರಕಟಣೆ ತಿಳಿಸಿದೆ. ಸುಮಾರು 8.61 ಲಕ್ಷ ಫಲಾನುಭವಿಗಳಿಗೆ 2016-17 ನೇ ಸಾಲಿನ ಆಯವ್ಯಯ (ಬಜೆಟ್) ನಲ್ಲ್ಲಿ ರೂ. 928.97 ಕೋಟಿ ನಿಗದಿಪಡಿಸಲಾಗಿದೆ. ಜುಲೈ 2016 ರ ಅಂತ್ಯಕ್ಕೆ ರೂ. 405.52 ಕೋಟಿಗಳನ್ನು ಹಾಲು ಪೂರೈಕೆದಾರರಿಗೆ ಪಾವತಿಸಿದ್ದು, ಸದರಿ ಪ್ರೋತ್ಸಾಹ ಧನ ಫಲಾನುಭವಿಗಳ ಖಾತೆಗೆ ಜಮೆಯಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :