Widgets Magazine

ಕೋಳಿ ಸಾಕಣೆ ಲಾಭದಾಯಕ ಉದ್ಯಮ - ಒಂದು ವಿಶ್ಲೇಷಣೆ

ಬೆಂಗಳೂರು| ಗುರುಮೂರ್ತಿ| Last Updated: ಶುಕ್ರವಾರ, 22 ಡಿಸೆಂಬರ್ 2017 (15:08 IST)
ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು ಇತ್ತೀಚಿನ ದಿನಗಳಲ್ಲಿ ಈ ಕ್ಷೇತ್ರವು ದಿನದಿಂದ ದಿನಕ್ಕೆ ಪ್ರಗತಿ ಸಾಧಿಸುತ್ತಿದೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವ ಸಲುವಾಗಿ ಸರಕಾರವು ಸಣ್ಣ ಮತ್ತು ವ್ಯಾಪಾರ ವಲಯಕ್ಕೆ ಆರ್ಥಿಕ ನೆರವನ್ನು ನೀಡುತ್ತಿದೆ. ಈ ನಿಟ್ಟಿನಲ್ಲಿ ಸ್ವಾವಲಂಬಿಯಾಗಿ ಬದುಕಲು ಯುವಕರಿಗೆ ಈ ಸಣ್ಣ ಉದ್ಯಮಗಳು ಸಹಾಯಕಾರಿಯಾಗಿವೆ.
ಇತ್ತೀಚಿನ ದಿನಗಳಲ್ಲಿ ನಿರುದ್ಯೋಗ ಸಮಸ್ಯೆ ತುಂಬಾ ಇದ್ದು ಈ ಸಣ್ಣ ಉದ್ಯಮಗಳು ಅವರಿಗೆ ಸಹಾಯಕಾರಿಯಾಗಬಹುದು. ಹಳ್ಳಿಗಳಲ್ಲಿ ಇದ್ದು ಮಾಡಬಹುದಾದ ಈ ಉದ್ಯಮಗಳು ತುಂಬಾ ಲಾಭಕಾರಿಯೂ ಹೌದು ಮತ್ತು ಸುಲಭವಾಗಿ ಹೂಡಿಕೆಗಳನ್ನು ಪಡೆಯುವ ಕಾರಣ ಯಾರು ಬೇಕಾದರೂ ಈ ಉದ್ಯಮವನ್ನು ಪ್ರಾರಂಭಿಸಬಹುದಾಗಿದೆ. ಇತ್ತೀಚಿಗೆ ಹಳ್ಳಿಗಳನ್ನು ಶಕ್ತಗೊಳಿಸುವ ಉದ್ದೇಶದಿಂದ ಹಲವಾರು ಯೋಜನೆಗಳನ್ನು ಸರಕಾರ ರೂಪಿಸುತ್ತಿದೆ. ಇದರಲ್ಲಿ ಹೈನುಗಾರಿಕೆ, ಆಡು ಸಾಕಣೆ, ಕುರಿ ಸಾಕಣೆ, ಕೋಳಿ ಸಾಕಣೆ ಕೂಡಾ ಒಂದು. ಇತ್ತೀಚಿನ ದಿನಗಳಲ್ಲಿ ಪ್ರಮುಖವಾಗಿರುವ ಉದ್ಯಮವಾಗಿ ರೂಪುಗೊಳ್ಳುತ್ತಿರುವ ಕೋಳಿ ಸಾಕಾಣಿಕೆ ಹಲವು ರೀತಿಯಲ್ಲಿ ಪ್ರಯೋಜನ ಮತ್ತು ಹೆಚ್ಚು ಆದಾಯವನ್ನು ಹೊಂದಿದ್ದು ನೀವು ಸುಲಭವಾಗಿ ಪ್ರಾರಂಭಿಸಬಹುದಾಗಿದೆ. ನೀವು ಸಹ ಈ ಉದ್ಯಮವನ್ನು ಪ್ರಾರಂಭಿಸುವುದಾದರೆ ಇಲ್ಲಿದೆ ಮಾಹಿತಿ.
 
ಮಾಂಸದ ಕೋಳಿ 
ಮಾಂಸದ ಕೋಳಿಗಳಲ್ಲಿ ಹಲವಾರು ವಿಧಗಳಿದ್ದು ಉತ್ತಮ ದರ್ಜೆಯ ತಳಿಯನ್ನು ಸಾಕಿ ಸಾಕಷ್ಟು ಲಾಭವನ್ನು ಪಡೆಯಬಹುದು. ಈ ಕೋಳಿಗಳು ಮಾಂಸ ಉತ್ಪಾದನೆಗೆ ಮಾತ್ರ ಉತ್ತಮವಾಗಿದ್ದು ಇವು ಹೆಚ್ಚು ಲಾಭಕರವಾಗಿದೆ. ಈ ತಳಿಯ ಕೋಳಿಗಳು 5 ರಿಂದ 6 ವಾರಗಳಲ್ಲಿ 2 ರಿಂದ 2.5 ಕೆಜಿಯಷ್ಟು ಬೆಳೆಯುತ್ತವೆ. ಇವುಗಳಲ್ಲಿ ಮುಖ್ಯವಾದ ತಳಿಗಳೆಂದರೆ ಕಾಬ್‌ರಾಸ್, ಹಬ್ಬರ್ಡ್, ಅನಕ್-40, ಅನಕ್ 2000, ಕೆಗ್‌ಬ್ರೋ, ಸ್ಟಾರ್‌ಬ್ರೋ, ಐಬಿಟಿ 82 ಮುಂತಾದವು ಅಲ್ಲದೇ ಇತ್ತೀಚಿಗೆ ಹಲವು ಕಂಪನಿಗಳು ತಾವೇ ಸ್ವತಃ ಮರಿಗಳನ್ನು ನೀಡಿ ಸಾಕಾಣಿಕೆಗೆ ಅನುವುಮಾಡಿಕೊಡುತ್ತವೆ. ಇದಕ್ಕೆ ಆಹಾರವನ್ನು ಸಹ ಆ ಕಂಪನಿಗಳೇ ಪೂರೈಸುತ್ತವೆ, ಪ್ರತಿ ಕೆಜಿಗೆ ಕಂಪನಿ ನಿಗದಿಪಡಿಸಿದ ದರದಲ್ಲಿ ಹಣವನ್ನು ಪಡೆಯಬಹುದಾಗಿದೆ. ಇದಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಮೂಲ ಸೌಕರ್ಯವನ್ನು ಕಂಪನಿ ನಿಮಗೆ ಒದಗಿಸುತ್ತದೆ. ಇದಕ್ಕಾಗಿ ಶೆಡ್ ಮಾಡಲು ನಮ್ಮ ಬಳಿ ಜಾಗವಿರಬೇಕಷ್ಟೇ ಅದು ರಸ್ತೆಯ ಅಂಚಿನಲ್ಲಿದ್ದರೆ ಇನ್ನೂ ಉತ್ತಮ. ಒಂದು ವೇಳೆ ನೀವು ಕಂಪನಿಗಳ ಮೂಲಕ ಕೋಳಿ ಸಾಕಾಣಿಕೆ ಮಾಡಲು ಇಷ್ಟವಿಲ್ಲದಿದ್ದಲ್ಲಿ ನೀವೇ ಸ್ವತಃ ಮರಿಗಳನ್ನು ಸಾಕಿ ಅದನ್ನು ಮಾರಾಟ ಮಾಡಬಹುದು.
 
ಮೊಟ್ಟೆ ಕೋಳಿಗಳು:
ಮಾಂಸದ ಕೋಳಿಗಳಿಗೆ ಹೋಲಿಸಿದರೆ ಮೊಟ್ಟೆ ಕೋಳಿಯ ಮಾಂಸಕ್ಕೆ ಬೆಲೆ ಕಡಿಮೆ ಎಂದೇ ಹೇಳಬಹುದು. ಈ ಕೋಳಿ ಮರಿಗಳು ಮೊಟ್ಟೆಯಿಡಲು 17 ರಿಂದ 18 ವಾರಗಳನ್ನು ತೆಗೆದುಕೊಳ್ಳುತ್ತದೆ ಇವು ವರ್ಷಕ್ಕೆ 300 ರಿಂದ 330 ರವರೆಗೆ ಕೂಡಾ ಮೊಟ್ಟೆಗಳನ್ನು ಇಡಬಲ್ಲವು. ಇದರಲ್ಲಿ ಹಲವಾರು ರೀತಿಯ ತಳಿಗಳಿದ್ದು ಡಿಕಾಲ್ಬ್, ಬಿವಿ 300, ಕಿಸ್ಟೋನ್, ಪೂನಾಪರ್ಲ, ಎಚ್‌ಎಚ್ 280, ಹೈಲೈನ್, ರಾಣಿಶೇವರ್, ಮೈಚಿಕ್ಸ್ ಮುಂತಾದವು.
     
ಕೋಳಿಗಳ ಶೆಡ್ ನಿರ್ಮಾಣದಲ್ಲಿ ಗಮನಿಸಬೇಕಾದ ಅಂಶಗಳು:
 
ನೀವು ದೊಡ್ಡ ಪ್ರಮಾಣದಲ್ಲಿ ಶೆಡ್ ನಿರ್ಮಾಣ ಮಾಡುವುದಾದರೆ ಬಯಲು ಪ್ರದೇಶವನ್ನು ಆಯ್ಕೆಮಾಡಿಕೊಳ್ಳುವುದು ಉತ್ತಮ ಏಕೆಂದರೆ ಮುಕ್ತವಾದ ಗಾಳಿ ಬೆಳಕು ಈ ಪ್ರದೇಶದಲ್ಲಿದ್ದರೆ ಕೋಳಿಗಳ ಬೆಳವಣಿಗೆಗೆ ಇದು ತುಂಬಾ ಅನುಕೂಲಕಲವಾಗಿರುತ್ತದೆ. ಇದನ್ನು ನಿರ್ಮಿಸುವಾಗ ನೆಲದಿಂದ ಎತ್ತರವಾಗಿ ಮತ್ತು ಸಮವಾಗಿರುವಂತೆ ನಿರ್ಮಿಸಬೇಕು. ಅಲ್ಲದೇ ಬೇಸಿಗೆಯಲ್ಲಿ ತಂಪಾಗಿರುವಂತೆ ಮತ್ತು ಚಳಿಗಾಲದಲ್ಲಿ ಬೆಚ್ಚಗೆ ಇರುವಂತ ಸ್ಥಳವನ್ನು ಆಯ್ಕೆಮಾಡಬೇಕು ಆದಷ್ಟು ಇಳಿಜಾರಾಗಿರುವ ಪ್ರದೇಶದಲ್ಲಿ ಇದನ್ನು ನಿರ್ಮಿಸುವುದು ಸೂಕ್ತ. ಅಲ್ಲದೇ ಇದಕ್ಕೆ ನೀರಿನ ಪೂರೈಕೆ ಮತ್ತು ಬೆಳಕಿನ ಪೂರೈಕೆ ಇರುವ ಹಾಗೆ ಗಮನಹರಿಸಬೇಕು. ಅಲ್ಲದೇ ಕೋಳಿ ಶೆಡ್‌ಗಳಿಗೆ ಹಾವುಗಳು, ಇಲಿ ಹೆಗ್ಗಣಗಳು ಬರುವ ಸಾಧ್ಯತೆ ಹೆಚ್ಚಿರುವುದರಿಂದ ನಿರ್ಮಾಣ ಮಾಡುವಾಗ ಅದನ್ನು ಗಮದಲ್ಲಿರಿಸಿಕೊಂಡರೆ ಒಳ್ಳೆಯದು. ಶೆಡ್‌ಗಳನ್ನು ನಿರ್ಮಿಸುವಾಗ ದಿಕ್ಕುಗಳನ್ನು ಗಮನಿಸಬೇಕು ಶೆಡ್‌ನ ದಿಕ್ಕು ಯಾವಾಗಲೂ ಪೂರ್ವಕ್ಕೆ ಅಥವಾ ಪಶ್ಚಿಮಕ್ಕೆ ಮುಖಮಾಡಿ ನಿರ್ಮಿಸಬೇಕು.
 
ಕೋಳಿಗಳ ಆಹಾರ
 
ಕೋಳಿಗಳಿಗೆ ಉತ್ತಮ ಸಮತೋಲನವಾಗಿರುವ ಆಹಾರವನ್ನು ವೈಜ್ಞಾನಿಕ ರೀತಿಯಲ್ಲಿ ನೀಡಬೇಕು. ಈ ಮೂಲಕ ಕೋಳಿಗಳಿಂದ ಹೆಚ್ಚಿನ ಉತ್ಪಾದನೆ (ಮೊಟ್ಟೆ ಮತ್ತು ಮಾಂಸ) ಪಡೆಯಲು ಸಾಧ್ಯವಾಗುತ್ತದೆ. ಕೋಳಿ ಸಾಕಾಣೆಯ ಒಟ್ಟು ವೆಚ್ಚದಲ್ಲಿ ಶೇಕಡ 70-75 ರಷ್ಟು ಭಾಗ ಆಹಾರದ್ದಾಗಿರುತ್ತದೆ. ಆರ್ಥಿಕ ದೃಷ್ಟಿಯಿಂದ ಈ ವೆಚ್ಚ ಹೆಚ್ಚು ಲಾಭ ಗಳಿಕೆಗೆ ಸಹಾಯವಾಗುತ್ತದೆ.
 
ಸಾಕಣೆ ಪದ್ಧತಿಗಳು
 
ದಪ್ಪ ಸತ್ತೆ ಪದ್ಧತಿ / ನೆಲದ ಮೇಲೆ ಸಾಕುವ ಪದ್ಧತಿ
 
ದಪ್ಪ ಸತ್ತೆ ಪದ್ಧತಿ ಜನಪ್ರಿಯವಾಗಿದ್ದು ಮಾಂಸಹ ಕೋಳಿ ಸಾಕಣೆಯಲ್ಲಿ ಈ ವಿಧಾನವನ್ನು ಹೆಚ್ಚಾಗಿ ಬಳಸುತ್ತಾರೆ. ಈ ಪದ್ಧತಿಯಲ್ಲಿ ಕೋಳಿ ಸಾಕುವ ಮನೆಯಲ್ಲಿ 3 ರಿಂದ 4 ಅಗಲ ಎತ್ತರ ಮರದ ಹೊಟ್ಟು ಹರಡಿ ಅದರ ಮೇಲೆ ಕೋಳಿ ಸಾಕಬೇಕು. ಈ ಮಾಂಸದ ಕೋಳಿ ಸಾಕಲು ಒಂದು ಕೋಳಿಗೆ ಒಂದು ಚದರ ಅಡಿ ಜಾಗದ ಅವಶ್ಯಕತೆ ಇದ್ದು, ಬಿಸಿಲು ಜಾಸ್ತಿ ಇರುವ ಪ್ರದೇಶದಲ್ಲಿ ಈ ಪದ್ಧತಿಯನ್ನು ಬಳಸಬಹುದು. ಇದರಲ್ಲಿ ರೋಗ ಹರಡುವ ಸಾಧ್ಯತೆ ಜಾಸ್ತಿ ಇರುತ್ತದೆ, ಅಲ್ಲದೇ ತಂತಿಯ ಜಾಲರಿಗಳ ಮೇಲೂ ಸಹ ಇದನ್ನು ಸಾಕಬಹುದು ಆದರೆ ಅದಕ್ಕೆ ಸ್ವಲ್ಪ ಹೆಚ್ಚಿನ ಪ್ರಮಾಣದ ಬಂಡವಾಳದ ಅವಶ್ಯಕತೆ ಇರುತ್ತದೆ
 
ಪಂಜರದ ಪದ್ಧತಿ 
 
ಈ ಪದ್ಧತಿಯಲ್ಲಿ ಕೋಳಿಗಳನ್ನು ಪಂಜರದಲ್ಲಿಟ್ಟು ಸಾಕಲಾಗುತ್ತದೆ. ಒಂದು ಕೋಳಿಗೆ ಸುಮಾರು 70 ಚದರ ಅಂಗುಲ ಸ್ಥಳಾವಕಾಶವಿದ್ದರೆ ಸಾಕು. ಓಡಾಡಲು ಬಿಡುವ ಕಾಲು ಹಾದಿಯನ್ನು ಸೇರಿಸಿ ಪ್ರತಿ ಕೋಳಿಗೆ 1 ಚದರ ಅಡಿಯಷ್ಟು ಜಾಗ ಬೇಕಾಗುತ್ತದೆ. ಈ ಪದ್ಧತಿಯಲ್ಲಿ ಕೋಳಿಗಳ ನಿರ್ವಹಣೆ ಸುಲಭವಾಗಿದ್ದು ಇದನ್ನು ಮೊಟ್ಟೆ ಕೋಳಿ ಸಾಕಾಣಿಕೆಯಲ್ಲಿ ಹೆಚ್ಚಾಗಿ ಬಳಸುತ್ತಾರೆ. ಈ ಪದ್ಧತಿಯಲ್ಲಿ ಮೇವಿನ ಬಳಕೆ ಕಡಿಮೆ ಇದ್ದು ರೋಗ ಹರಡುವ ಸಾಧ್ಯತೆಯೂ ಕಡಿಮೆಯಾಗಿರುತ್ತದೆ
 
ಮರಿಗಳನ್ನು ತರುವ ಮುನ್ನ ಮಾಡಬೇಕಾದ ಪೂರ್ವ ಸಿದ್ಧತೆಗಳು
*ಮರಿಗಳನ್ನು ಬಿಡುವುದಕ್ಕಿಂತ ಮೊದಲು ಸ್ಥಳದ ಪರಿಶೀಲನೆ ಮಾಡುವುದು
*ಮರಿಗೆ ಅನುಕೂಲವಾಗುವ ರೀತಿಯಲ್ಲಿ ನೆಲದ ಮೇಲೆ ಭತ್ತದ ಹೊಟ್ಟನ್ನು ಹರಡಿ ಹದಗೊಳಿಸುವುದು
*ಶಾಖದ ಬುಟ್ಟಿಯ ಪರಿಶೀಲನೆ ಮತ್ತು ಮರಿಗಳನ್ನು ಬಿಡುವುದಕ್ಕೂ 6-8 ಗಂಟೆಗಳಷ್ಟು ಮೊದಲು ದೀಪ ಉರಿಸಿರುವಂತೆ ನೋಡಿಕೊಳ್ಳಬೇಕು
*ಶಾಖದ ಬುಟ್ಟಿಯಿಂದ ಮರಿಗಳು ಹೊರ ಬಾರದಂತೆ 2 ಅಡಿ ದೂರದಲ್ಲಿ ಅದರ ಸುತ್ತಲೂ ತಡೆಗೊಡೆ ನಿರ್ಮಿಸಬೇಕು.
 
ಬ್ಯಾಂಕ್‌ನಿಂದ ಸಾಲ ಸೌಲಭ್ಯ:
 
ಸರಕಾರದಿಂದ ಮತ್ತು ಸಾಕಾಣಿಕೆಗಳಿಗೆ 1 ಲಕ್ಷದವರೆಗೂ ಸಾಲ ಸೌಲಭ್ಯವಿದ್ದು ಸ್ವಂತ ಭೂಮಿಯನ್ನು ಹೊಂದಿದ್ದಲ್ಲಿ ಇನ್ನೂ ಹೆಚ್ಚಿನ ಸಾಲವನ್ನು ಪಡೆಯಬಹುದಾಗಿದೆ. ಅಲ್ಲದೇ ಸ್ವಯಂ ಉದ್ಯೋಗ ಯೋಜನೆ ಅಡಿಯಲ್ಲಿ ಘಟಕದ ವೆಚ್ಚದ ಶೇ.50 ಭಾಗ/ಗರಿಷ್ಠ ರೂ.35,000/- ಪ್ರತಿ ಫಲಾನುಭವಿಗೆ ಸಹಾಯ ಧನವನ್ನಾಗಿ ನೀಡಲಾಗುತ್ತದೆ. ಘಟಕ ಪ್ರಾರಂಭಿಸಲು ಸಾಲ ಸೌಲಭ್ಯಗಳನ್ನು ಬ್ಯಾಂಕುಗಳ ಮೂಲಕ ಕಲ್ಪಿಸಲಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :